9/18/2019

ಜ್ಞಾನ ಮಂಟಪ ವಿವರ ಪುಟ

ಎನಗಿಂತ ಕಿರಿಯರಿಲ್ಲ... - ಸಮಕ್ಷಮ

Font size -16+

'
ಬಸವರಾಜ ಸ್ವಾಮಿ

ಶ್ರೀ ಕೃಷ್ಣ ‘‘ ನಾನೇ ಭೂಮಿ; ನಾನೇ ಜಲ, ನಾನೇ ಗಾಳಿ, ನಾನೇ ಸೂರ‌್ಯ, ನಾನೇ ಚಂದ್ರ, ನಾನೇ ಅಗ್ನಿ, ನಾನೇ ಆಕಾಶ. ನನ್ನ ಹೊರತಾಗಿ ಏನೂ ಇಲ್ಲ ; ನಾನೇ ಎಲ್ಲ ’’ ಎಂದ. ವಿರಾಟ ಸ್ವರೂಪಿಯಾಗಿ ಕಾಣಿಸಿಕೊಂಡು ಶ್ರೀ ಕೃಷ್ಣ ಅರ್ಜುನನಿಗೆ ದರ್ಶನವಿತ್ತ.
ಪಾಂಡವರ ಸಂಧಿ ಪ್ರಸ್ತಾವದೊಂದಿಗೆ ಕೌರವ ಸಭಾಭವನಕ್ಕೆ ತೆರಳಿದಾಗ ಕೌರವರು ಸಂಧಿ ಪ್ರಸ್ತಾವ ಸ್ವೀಕರಿಸದೆ ಶ್ರೀಕೃಷ್ಣನನ್ನು ಅಪಮಾನಿಸಿ ಬಂಧಿಸಲು ಪ್ರಯತ್ನಿಸಿದರು. ಆಗ ಕೃಷ್ಣ ಜಗದಗಲ ಮುಗಿಲಗಲವಾಗಿ ನಿಂತು ತನ್ನ ವಿರಾಟ ಸ್ವರೂಪವನ್ನು ಸಭೆಗೆ ತೋರಿದ.
ಯುದ್ಧ ಮಾಡುವುದು ಬೇಡವೆಂದು ಬಾಣ ಬತ್ತಳಿಕೆಗಳನ್ನು ಚೆಲ್ಲಿ ಅರ್ಜುನ ಕೈಮುಗಿದು ನಿಂತಾಗ, ಶ್ರೀಕೃಷ್ಣ ತನ್ನ ವಿರಾಟ ಸ್ವರೂಪವನ್ನು ಅರ್ಜುನನಿಗೆ ತೋರಿದ. ಯುದ್ಧ ಮುಗಿದ ನಂತರ ದುರ್ಯೋಧನನ ಹೆಂಡತಿ ಭಾನುಮತಿಗೆ ಶ್ರೀಕೃಷ್ಣ ದರ್ಶನವಿತ್ತು ತನ್ನ ವಿರಾಟ ಸ್ವರೂಪ ವನ್ನು ತೋರಿದ.
ಹೀಗೆ ಶ್ರೀಕೃಷ್ಣ ವಿರಾಟ ಸ್ವರೂಪವನ್ನು ನಾಲ್ಕು ಬಾರಿ ತೋರಿದ ಪ್ರಸಂಗ ಮಹಾ ಭಾರತದಲ್ಲಿ ಬರುತ್ತದೆ.
ನಾನೇ ದೇವರು, ನಾನೇ ಬ್ರಹ್ಮ, ನಾನೇ ವಿರಾಟ ಸ್ವರೂಪಿ, ನಾನೇ ಸ್ವಸ್ವರೂಪ ಜ್ಞಾನಿ ಎಂದು ಶ್ರೀಕೃಷ್ಣ, ಶಂಕರಾಚಾರ‌್ಯ, ಹಲವಾರು ಜ್ಞಾನಿಗಳು ದಾರ್ಶನಿಕರು ಎದೆ ತಟ್ಟಿ ಹೇಳಿದರೂ ಕೂಡಾ ಜನ ಅಂದೂ ಅವರನ್ನು ವಿಶ್ವಾಸ ಮಾಡಲಿಲ್ಲ; ಇಂದೂ ವಿಶ್ವಾಸ ಮಾಡುತ್ತಿಲ್ಲ.
ಅಹಂ ಬ್ರಹ್ಮಾಸ್ಮಿ, ವಿರಾಟ ಸ್ವರೂಪಿ, ಶಿವಸ್ವರೂಪಿ ಬ್ರಹ್ಮಜ್ಞಾನ ಎನ್ನುವುದು ಒಂದು ವಿಜ್ಞಾನ. ಜಲದಲ್ಲಿ ಜಲಜನಕ ಆಮ್ಲಜನಕವಿದೆ. ಅವೆರಡೂ ಕೂಡಿ ಜಲವಾಗಿದೆ. (ಏ2) ಎಂದು ವೈಜ್ಞಾನಿಕವಾಗಿ ವಿಜ್ಞಾನಿ ಹೇಳಿ ಪ್ರಯೋಗ ಮಾಡಿ ತೋರಿಸಿದಾಗ ಜಗವೆಲ್ಲ ಹೇಗೆ ನಂಬಿತೋ ಹಾಗೆಯೇ ವಿರಾಟ ಸ್ವರೂಪ ಕೂಡಾ.
ನಾನೇ ಬ್ರಹ್ಮ ಎಂದು ಶಂಕರರು ಹೇಗೆ ಪ್ರತಿಪಾದನೆ ಮಾಡಿದರೋ ಹಾಗೆಯೇ ದೇವರೇ ಇಲ್ಲ ಎಂದು ಬುದ್ಧ, ಮಹಾವೀರರು ಕೂಡಾ ಪ್ರತಿಪಾದನೆ ಮಾಡಿದರು. ನಾನೇ ಬ್ರಹ್ಮ ಎನ್ನುವುದು ಎಷ್ಟು ಸತ್ಯವೋ, ದೇವರು ಇಲ್ಲ ಎನ್ನುವುದು ಕೂಡಾ ಅಷ್ಟೇ ಸತ್ಯ. ಶಿವಸ್ವರೂಪಿ, ವಿರಾಟ ಸ್ವರೂಪಿ ಎನ್ನುವುದು ಕೂಡಾ ಅಷ್ಟೇ ಸತ್ಯ.
ಜನ ಈ ಮಾತನ್ನು ಕೇಳುವುದರಲ್ಲಿ, ಪುನರುಚ್ಛರಿಸುವುದರಲ್ಲಿ ,ಓದುವುದರಲ್ಲಿ ತೊಡಗಿ, ಆಯಾ ಮಾತುಗಳನ್ನು ಹೇಳಿದವರಿಗೆ ್ಯಾನ್ ಆದರೇ ಹೊರತು ಆ ಮಹಾಜ್ಞಾನವನ್ನು ಕಂಡುಕೊಂಡ ವಿಜ್ಞಾನಿಗಳಂತೆ ಆಗಲಿಲ್ಲ. ಜ್ಞಾನ ಸುಖವನ್ನು ಅನುಭವಿಸಿ ಅದು ಹೀಗಿದೆ ಎಂದು ಹೇಳಿದ ಸೂತ್ರಧಾರಿಗಳ ಹಿಂಬಾಲಕರಾದರು.
ಬ್ರಹ್ಮ ಅನ್ನುವವನು ನಾನೇ. ನನ್ನ ಹೊರತಾಗಿ ಬ್ರಹ್ಮ ಇಲ್ಲವೇ ಇಲ್ಲ ಎಂದು ಹೇಳಿದ ಶಂಕರರು ಅದನ್ನು ಪ್ರತಿಪಾದಿಸಿದರು. ಆ ಸತ್ಯ ಕಂಡು ಕೊಂಡರು. ಆ ಸತ್ಯದ ಸುಖವನ್ನು ಉಂಡರು. ಇದನ್ನು ಕೇಳಿದ ಓದಿದ ಬಹತೇಕ ಜನ ಬ್ರಾಹ್ಮಣರಾದರು. ಭ್ರಮೆ ಹೊಂದಿದವರಾದರು. ಭ್ರಮೆ ಕಳೆದುಕೊಂಡು ಬ್ರಹ್ಮರಾಗಲಿಲ್ಲ. ಶಂಕರರಂತೆ ವಿಜ್ಞಾನಿಯಾಗಲಿಲ್ಲ. ವಿಜ್ಞಾನಿ ಯನ್ನು ಆರಾಧಿಸಿದರು, ಆಲಯ ನಿರ್ಮಿಸಿದರು. ಆತನೊಂದಿಗೆ ತಮ್ಮನ್ನು ಗುರುತಿಸಿ ಕೊಂಡರು.
ಹೀಗೆ ಶ್ರೀಕೃಷ್ಣ, ಮಹಾವೀರ, ಬುದ್ಧ, ಕ್ರಿಸ್ತ, ಪೈಗಂಬರ, ಬಸವಾದಿ ಶರಣರ, ದಾಸ ವರೇಣ್ಯರ ಅನುಯಾಯಿಗಳು ಜಗತ್ತಿನ ತುಂಬಾ ತುಂಬಿದ್ದಾರೆ. ಅವರು ಮಹಾ ಮಾನವ ರಾಗದೆ ಮನುಷ್ಯನ ಮುಖವಾಡ ಧರಿಸಿಕೊಂಡು ಮಾನವ ವಿಜ್ಞಾನಿಗಳಿಂದ ಅತ್ತ ಪ್ರಾಣಿಗಳೂ ಎನ್ನಿಸಿಕೊಳ್ಳದೆ ಇತ್ತ ಮಾನವರೂ ಎನ್ನಿಸಿಕೊಳ್ಳದೆ ಮುಖವಾಡದ ಮನುಷ್ಯರಾಗಿ ಉಸಿರಾಡುತ್ತಿದ್ದಾರೆ.
ದೇವರಿಲ್ಲ ಎಂದು ಹೇಳಿದ ಬುದ್ಧನನ್ನು, ಮಹಾವೀರನನ್ನು ಅವರ ಹಿಂಬಾಲಕರು ಅವರನ್ನೇ ದೇವರನ್ನಾಗಿ ಪೂಜಿಸಿದರು. ದೇವರಿಲ್ಲ ಎಂಬುದನ್ನು ಖಚಿತಪಡಿಸಿಕೊಳ್ಳಲಿಲ್ಲ. ನಾನೇ ಬ್ರಹ್ಮ ಎನ್ನುವುದನ್ನು ನಾನೇ ಶಿವಸ್ವರೂಪಿ ಎನ್ನುವುದನ್ನು ಖಚಿತಪಡಿಸಿಕೊಳ್ಳಲಿಲ್ಲ.
ಓದುಗರು ದಯವಿಟ್ಟು ನಿಧಾನವಾಗಿ ಆಲೋಚನೆ ಮಾಡಿ. ನಾನೇ ಬ್ರಹ್ಮ ಎಂದರೆ ದೇವರಿಲ್ಲವೆಂದೇ ಅರ್ಥವಲ್ಲವೆ ? ನಾನೇ ಶಿವಸ್ವರೂಪಿ ಎಂದರೆ ಶಿವ ಎಂಬುವವನು ಇಲ್ಲವೆಂದು ಅರ್ಥವಲ್ಲವೆ ? ನಾನೇ ವಿರಾಟ ಸ್ವರೂಪಿ, ಬ್ರಹ್ಮ ವಿಷ್ಣು ರುದ್ರ ಸೂರ‌್ಯಚಂದ್ರ ಪಂಚಭೂತಗಳು ನನ್ನಲ್ಲಿಯೇ ಸಂಗಮವಾಗಿವೆ ಎಂದು ಹೇಳಿದ ಶ್ರೀ ಕೃಷ್ಣನ ಮಾತು ಕೂಡಾ ನನ್ನ ಹೊರತಾಗಿ ದೇವರಿಲ್ಲ ಎಂದಂತಾಗಲಿಲ್ಲವೆ ?
ನನ್ನ ಹೊರತಾಗಿ ದೇವರಿಲ್ಲ ಎಂದರೆ ಶ್ರೀ ಕೃಷ್ಣ ಮಾತ್ರ ಅಲ್ಲ. ಪ್ರತಿಯೊಬ್ಬ ಮನುಷ್ಯನೂ ಕೂಡಾ. ಪ್ರಪಂಚದ ಏಳುನೂರಾ ಇಪ್ಪತ್ತು ಕೋಟಿ ಮನುಷ್ಯರು ಕೂಡಾ ದೇವರೇ. ಆದರೂ ದೇವರು ಎನ್ನುವುದು ಶ್ರೀ ಕೃಷ್ಣ, ಶಂಕರ, ಕ್ರಿಸ್ತ, ಬುದ್ಧ, ಮಹಾವೀರ ಬಸವಾದಿ ಶರಣರಿಗೆ, ದಾಸರಿಗೆ ಗೊತ್ತಾಯಿತು. ಈ ಬಗ್ಗೆ ಕೃಷಿ ಮಾಡಿದ ಹಲವರಿಗೂ ಗೊತ್ತಾಯಿತು. ಉಳಿದವರಿಗೆ ಗೊತ್ತಾಗಲಿಲ್ಲ. ಗೊತ್ತಾಗಲಿಲ್ಲ ಎಂದ ಮಾತ್ರಕ್ಕೆ ಅವರೆಲ್ಲ ದೇವರಲ್ಲವೆಂದಲ್ಲ. ಅವರೆಲ್ಲ ದೇವರೇ ಆದರೂ ತಾನು ದೇವರೆನ್ನುವುದು ಅವರಿಗೆ ಗೊತ್ತಿಲ್ಲ. ದೇವರಿಲ್ಲ ಎನ್ನುವುದೂ ಅವರಿಗೆ ಗೊತ್ತಿಲ್ಲ.
ತಾನು ದೇವರೆಂದು ಗೊತ್ತಾದ ಮೇಲೆ ಶ್ರೀಕೃಷ್ಣ ತಾನು ವಿರಾಟ ಸ್ವರೂಪಿಯೆಂದು ಘೋಷಿಸಿಕೊಂಡ. ಶಂಕರ ಅಹಂ ಬ್ರಹ್ಮಾಸ್ಮಿ ಎಂದು ಘೋಷಿಸಿಕೊಂಡ. ಬುದ್ಧ, ಮಹಾವೀರ ದೇವರಿಲ್ಲವೆಂದು ಘೋಷಿಸಿದರು. ದೇವರು ಸರ್ವಾಂತರ್ಯಾಮಿ, ಸರ್ವರಲ್ಲಿಯೂ ಇದ್ದು ಸರ್ವರನ್ನು ರಕ್ಷಿಸುತ್ತಾನೆ. ಅವನಿಲ್ಲದೆ ಏನೂ ಇಲ್ಲ. ಅವನೇ ಎಲ್ಲ ಎಂದು ಏಸು, ಪೈಗಂಬರರು ಪ್ರತಿಪಾದಿಸಿದರು.
ಬಸವಣ್ಣ ‘‘ಎನಗಿಂತ ಕಿರಿಯರಿಲ್ಲ ’’ಎಂದ. ಕ್ರಿಷ್ಣ ಎನಗಿಂತ ಹಿರಿಯರಿಲ್ಲ ಎಂದ. ಓದುಗರು ದಯವಿಟ್ಟು ಆಲೋಚನೆ ಮಾಡಿ ಇವೆರಡೂ ಮಾತುಗಳು ದಾರ್ಶನಿಕರು ತಮ ತಮಗೆ ಹೇಳಿಕೊಂಡ ಮಾತುಗಳಲ್ಲ. ಎಲ್ಲರಿಗೂ ಅನ್ವಯವಾಗುವ ಮಾತುಗಳು.
ಅಂದರೆ ಶ್ರೀಕೃಷ್ಣ ನಾನು ‘‘ವಿರಾಟ ಸ್ವರೂಪಿ’’ ಎಂದರೆ ನಾನು ಹಿರಿಯ ಎಂದಂತಲ್ಲವೆ ? ನನ್ನಂತೆ ಜಗದ ಸಕಲರೂ ವಿರಾಟಸ್ವರೂಪಿಗಳೇ ಆಗಿರುವಿರಿ. ನಾನು ಕಂಡು ಕೊಂಡಿದ್ದೇನೆ ; ನೀವು ಕಂಡು ಕೊಂಡಿಲ್ಲ ಎಂದಂತಾಗಲಿಲ್ಲವೆ ಶ್ರೀಕೃಷ್ಣನ ಮಾತು !
ಜನಕ್ಕೆ ಶ್ರೀ ಕೃಷ್ಣನ ಮಾತು ಅರ್ಥವಾಗಲಿಲ್ಲ. ಕೃಷ್ಣನನ್ನೇ ಕೃಷ್ಣನೆಂದು ಕೊಂಡರು. ತಾನು ಕೂಡಾ ಶ್ರೀಕೃಷ್ಣನೆಂದುಕೊಳ್ಳಲಿಲ್ಲ. ಆತನಂತೆ,ಆತ ಹೇಳಿದಂತೆ ಕೃಷಿ ಮಾಡಲಿಲ್ಲ. ಆತನನ್ನು ಪೂಜಿಸಿದರು. ಆರಾಧಿಸಿದರು. ಆತನಿಗಾಗಿ ಆಲಯ ನಿರ್ಮಿಸಿದರು. ಆತನಂತೆ ಹಿರಿಯ ರಾಗಲಿಲ್ಲ.
ಬಸವಣ್ಣ ‘‘ಎನಗಿಂತ ಕಿರಿಯರಿಲ್ಲ ’’ಎಂದು ಘೋಷಿಸಿದ. ಕ್ರಿಷ್ಣನ ಮಾತಿನಂತೆ ಈ ಮಾತು ಕೂಡಾ ಸಕಲರಿಗೂ ಅಚ್ಚರಿಯನ್ನುಂಟು ಮಾಡಿತು. ಆದರೆ ಕ್ರಿಷ್ಣನ ಮಾತು ಬಸವಣ್ಣನ ಮಾತುಗಳೆರಡೂ ಒಂದೇ ಆದರೂ ಅನುಯಾಯಿಗಳಿಗೆ ತಿಳಿಯಲಿಲ್ಲ.
ಬಸವಣ್ಣ ಕೂಡಾ ಕ್ರಿಷ್ಣನಂತೆ ವಿರಾಟಸ್ವರೂಪಿಯೇ ಆದಾತ. ಬಸವಣ್ಣನಿಗೆ ಸಕಲರೂ ಜಗದಗಲ ಮುಗಿಲಗಲ ಕಂಡರು ! ವಿರಾಟ ಸ್ವರೂಪಿಯಾಗಿ ಕಂಡರು ! ಸಕಲರೂ ಜ್ಞಾನಿಗಳೇ ಆಗಿದ್ದಾರೆ. ಜ್ಞಾನವೆಂದರೇನೆಂದು ಅವರಿಗೆ ಗೊತ್ತಿಲ್ಲ. ಗೊತ್ತಿಲ್ಲದಿದ್ದರೇನಾಯಿತು ? ಜ್ಞಾನಿಯಾದಾತನಿಗೆ ಸಕಲರೂ ಜ್ಞಾನಿಯಾಗಿಯೇ ಕಾಣುತ್ತಾರೆ, ಶಿವ ಸ್ವರೂಪಿಯಾಗಿ, ಬ್ರಹ್ಮಸ್ವರೂ ಪಿಯಾಗಿ ಕಾಣುತ್ತಾರೆ. ಹಾಗೆ ಕಂಡ ಸಕಲರಿಗೂ ಶರಣು ಶರಣಾರ್ಥಿ ಎಂದು ಕೈಮುಗಿದ ಬಸವಣ್ಣ. ತಾನು ಕಿರಿಯನಾದ. ‘‘ಎನಗಿಂತ ಕಿರಿಯರಿಲ್ಲ ’’ಎಂದ. ಶಿವಸ್ವರೂಪಿಗಳೇ ಆದಂತಹ ಶಿವ ಭಕ್ತರಿಗಿಂತ ಹಿರಿಯರಿಲ್ಲ ಎಂದ. ತಾನು ಕಂಡುಕೊಂಡ ವಿರಾಟ ಸ್ವರೂಪದ ಸಾಕ್ಷಿಯಾಗಿ ‘‘ ನಿಮ್ಮ ಪಾದ ಸಾಕ್ಷಿ ’’ ಎಂದ. ಅದಕ್ಕೆ ಪುನಃ ಸಾಕ್ಷಿಯಾಗಿ ನಿಂತು ಎನ್ನ ಮನ ಸಾಕ್ಷಿ ಎಂದ. ಪ್ರತಿ ಮನುಷ್ಯನಲ್ಲಿಯೂ ಹಿರಿಯ ಶಕ್ತಿಯನ್ನು ಕಂಡ. ಆ ವಿರಾಟ ಸ್ವರೂಪಕ್ಕೆ ಹಣೆ ಮಣಿದು ಅದಕ್ಕೆ ಕೂಡಲಸಂಗಯ್ಯಾ ಎಂದು ನಾಮಕರಣ ಮಾಡಿದ. ಎನಗಿದೇ ದಿಬ್ಯ ಎಂದ.
ತಾನು ವಿರಾಟ ಸ್ವರೂಪಿ ಎಂದು ಶ್ರೀ ಕೃಷ್ಣ ನಾಲ್ಕು ಬಾರಿ ಮಾತ್ರ ಇತರರಿಗೆ ತೋರಿಸಿದ. ಕಂಡ ಜನ ಕೃಷಿ ಮಾಡಲಿಲ್ಲ. ಶ್ರೀಕೃಷ್ಣನನ್ನು ಪೂಜಿಸಿದರು. ಹಿಂಬಾಲಿಸಿದರು.
ಎನಗಿಂತ ಕಿರಿಯರಿಲ್ಲ ಶಿವಭಕ್ತರಿಗಿಂತ ಹಿರಿಯರಿಲ್ಲ ಎಂಬ ಸೂತ್ರವನ್ನು ಬಸವಣ್ಣ ಕಲ್ಯಾಣದಲ್ಲಿ ಒಂದು ಲಕ್ಷ ತೊಂಬತ್ತಾರು ಸಾವಿರ ಜನರಿಗೆ ಹೇಳಿದ. ಅವರಲ್ಲಿ ಏಳುನೂರಾ ಎಪ್ಪತ್ತು ಜನ ಮಾತ್ರ ಕೃಷಿ ಮಾಡಿದರು. ವಿರಾಟಸ್ವರೂಪಿಗಳೇ ತಾವಾದರು ! ಸಕಲರನ್ನು ತಮ್ಮಂತೆಯೇ ಕಂಡರು. ತಾನು ಮಾನವನಾಗಿ ಇತರ ಮಾನವರನ್ನು ಮಹಾಮಾನವರನ್ನಾಗಿ ಕಾಣುವುದು ಎಷ್ಟು ಶ್ರೇಷ್ಠ !
ಏನೀ ಬಸವಣ್ಣನ ಸೂತ್ರ ! ನಿನ್ನ ಮಾತು ನಿನ್ನ ವಚನ ಸರಳವೆನ್ನುವವರಿಗೆ ಎಷ್ಟೊಂದು ಜಟಿಲ ! ನಿನ್ನನ್ನು ತಿಳಿಯುವುದೆಂದರೆ ತನ್ನನ್ನು ತಾನು ತಿಳಿದವನಿಗೆ ಮಾತ್ರ ನಿನ್ನ ತಿಳಿಯಲು ಸಾಧ್ಯ ಬಸವಣ್ಣ !'