9/18/2019

ಜ್ಞಾನ ಮಂಟಪ ವಿವರ ಪುಟ

ಅಂತರಾತ್ಮಬೋಧೆ - 10 - ಸದ್ಗುರು ಶ್ರೀ ವಿದ್ಯಾನಂದ ಶರಣರು ಡಬ್ಬೇರುಮಡುವು

Font size -16+

'ಅರಿವಿನ ಪರಿಮಳ
ನನ್ನನ್ನು ಸೃಷ್ಠಿ ಮಾಡಿದ ದೇವರು ಮಾತ್ರ ದೇವರು !
ನಾನು ಸೃಷ್ಠಿ ಮಾಡಿದ ದೇವರು ದೇವರಲ್ಲ !ತಾನಿದಿರೆಂಬುದು ಮಾಯೆ ತೋರಿತ್ತಾಗಿ ತಾನಲ್ಲ.
ಈ ತೋರುವುದು ಉಳುಮೆ ಜ್ಞಾನಾನಂದ,
ತಾನೆಂಬುದು ಆರು ಅರಿಯರಲ್ಲ .
ನೋಡಲೇನೂ ಇಲ್ಲವಾಗಿ ನಿಜ ಸಿದ್ಧ ನೀನೆ
ಸಿಮ್ಮಲಿಗೆಯ ಚೆನ್ನರಾಮ.

ತಾತ್ಪರ್ಯ : ತಾನಿದಿರೆಂಬುದು ಮಾಯೆ ತೋರಿತ್ತಾಗಿ ತಾನಲ್ಲ. ಈ ತೋರುವುದು ಉಳುಮೆ ಜ್ಞಾನಾನಂದ, ತಾನೆಂಬುದನಾರು ಅರಿಯರಲ್ಲ : ಮಾನವರೆ ಇರಲಿ, ತಪಸ್ವಿ, ತ್ಯಾಗಿ, ಯೋಗಿಯೆ ಇರಲಿ. ಅಣಿಮಾದಿ ಸಿದ್ಧಿ ಪಡದವರೆ ಇರಲಿ. ಶ್ರೀ ಗುರುವಿನ ಮಹದರಿವು ತಿಳಿಯುವ ತನಕ ಮಾಯೆಯ ತಿಳಿಯಲಾರ, ತಾನಾರೆಂಬುದು ತಿಳಿಯಲಾರ. ತನ್ನ ಅರಿವುಡೆ ಮಾಯೆ ತಾನಲ್ಲ. ತನ್ನದು ಅಲ್ಲ. ತಾನಿದಿರೆಂಬುದು ಮಾಯೆ. ತನ್ನ ಮರವಿನಲ್ಲಿ ಕಾಣಿಸುವ ಅಹಂ ಇದಂ ದೃಷ್ಠಿ. ಎಲ್ಲಿಯವರೆಗೆ ಅಹಂಕಾರಿಯು ಅಲ್ಲಿಯವರೆಗೆ ಜೀವಾತ್ಮನು.
ಜೀವಾತ್ಮನು ಕರ್ಮಕಾಂಡಿಯೆ ಆಗಿರಲಿ. ಉಪಾಸನೆ ಮಾಡುವ ಭಕ್ತಕಾಂಡಿಯಾಗಿರಲಿ, ಜ್ಞಾನಕಾಂಡಿಯಾಗಿರಲಿ, ಇವನು ಕಾಂಡತ್ರಯದ ಅಭಿಮಾನಿಯಾದುದರಿಂದ ಮಹಾಂತರ ಮಹದರಿವು ತಿಳಿಯಲಾರ. ಏಕೆಂದರೆ ತ್ರಿಕಾಂಡಗಳೆಲ್ಲ ಮಾಯೆಗೆ ಒಳಪಟ್ಟವು. ಇವು ನಿರ್ಮಾಯದ ಘನವ ಅರಿಯವು.
ಕರ್ಮಿಯು ಕರ್ಮದ ರಹಸ್ಯ ತಿಳಿಯದ್ದರಿಂದ ಕರ್ಮಾಭಿಮಾನಿಯು, ಉಪಾಸಕನು. ಪೂಜ್ಯನಾರು, ಪೂಜಿಸುವವನಾರು ಎಂಬ ರಹಸ್ಯ ತಿಳಿಯದ್ದರಿಂದ ಉಪಾಸನದಭಿಮಾನಿಯು. ಜ್ಞಾನಿಯು ಜ್ಞಾನ ಸ್ವರೂಪ ರಹಸ್ಯ ತಿಳಿಯದ್ದರಿಂದ, ಚಿದಹಮ್ಮಿಯು. ಇವರುಗಳು ತಾವಾರು ತನ್ನ ತಿಳಿಯದ್ದರಿಂದ ತಮ್ಮ ಮತಾನುಸಾರ ತ್ರಿಕಾಂಡದ ಅಭಿಮಾನಿಗಳು. ಇದು ಕಾರಣ, ಮಾಯೆಗೆ ಒಳಪಟ್ಟವರು.
ಮಾಯೆಯದು ಬಿಡುವ ಹಿಡಿವ ಕ್ರಿಯೆಗಳಿಗೆ ಹೃದಯ ಒಪ್ಪಿಕೊಂ ಡಿದೆ. ಅದು ಮಾಯಿಕ ತನು ಎಂದು ಸಿದ್ಧವಾಗುವದು. ಚತುರ್ ವರ್ಣಾಶ್ರಮ ಇವುಗಳಷ್ಟೇ ಮಾಯಿಕವೆಂದು ತಿಳಿಯಕೂಡದು. ಕೆಲಬರು ಗೃಹಸ್ಥರಷ್ಟೇ ಮಾಯಿಕಕ್ಕೆ ಒಳಪಟ್ಟವರು, ಸನ್ಯಾಸಿಗಳು ತಪಸ್ವಿಗಳು, ತ್ಯಾಗಿಗಳು, ಯೋಗಿಗಳು, ಅಣಿಮಾದಿ ಸಿದ್ದಿ ಪುರುಷರು, ಶಬ್ದವೇದಿಗಳು ಕೂಡಾ ಮಾಯಾಧೀನರು. ಇವರು ತೋರಿ ಇಲ್ಲವಾಗುವ ಮಾಯೆಗೆ ಒಪ್ಪಿದವರು. ನಂಬಿದವರು.
ಇದ್ದ ಸಚ್ಚಿದ್ರೂಪದೋಳ್ ಇಲ್ಲದ ನಾಮ ರೂಪವ ಕಂಡುದೆ ಮಾಯೆ. ಪರತತ್ವದೊಳ್ ಪ್ರಕೃತಿ ಕಲ್ಪಿಸಿದುದೆ ಮಾಯೆ. ಗುಣಾತೀತನೋಳ್ ಗುಣಕ್ರಿಯೆಗಳ ಕಲ್ಪಸಿದುದೆ ಮಾಯೆ. ಅಂದು ಇಂದು ಎಂದೆಂದು ಇದ್ದಂತಿರುವ ನಿರಂತರವಾಗಿಹ ಮಂಗಳಮಯವೆಂಬ ಪರಮಸತ್ಯದೋಳ್ ಇಲ್ಲದ ನಾಮರೂಪಂಗಳ ದಿಟ ಮಾಡಿದುದೆ ಮಾಯೆ.
ತನ್ನಿಂದ ತಿಳಿಸಿಕೊಂಬುದೆಲ್ಲವು ಮಾಯೆ. ತಾನಲ್ಲ , ತಾನೆಂಬುದು ಉಳುಮೆ ಜ್ಞಾನಾನಂದವೆಂಬುದನಾರು ಅರಿಯರಲ್ಲ. ಅರಿಯದ್ದರಿಂದ ಮಾಯೆಯು ದಿಟವಾದಂತಾಗಿದೆ.
ಮಾ ಎಂದರೆ ಯಾವುದು, ಯಾ ಎಂದರೆ ಇಲ್ಲವೋ, ಅದು ಮಾಯೆ. ಆವುದು ಇಲ್ಲ. ಅದು ಮಾಯೆ. ತಾನು ನಿರಂತರ ಇದ್ದವನು. ತೋರದಡಗದ ಘನ ತಾನು. ಆರನ್ನಾದರೂ ನೀನು ಇದ್ದೀಯೋ ಇಲ್ಲವೋ ಎಂದು ಪ್ರಶ್ನಿಸಿದರೆ, ಅವನು ಏನೂ ಅರಿಯದ ಅಜ್ಞಾನಿ ಇದ್ದರೂ, ನಾನು ಇದ್ದೇನೆಂದು ಹೇಳುವನೆಂದಲ್ಲಿ, ತಾನು ಇಲ್ಲದವನಲ್ಲ, ಇದ್ದವನು, ಅದಕ್ಕಾಗಿ ಇದ್ದೇನೆನ್ನುತ್ತಾನೆ.
ಮಾಯೆ ಇಲ್ಲದುದು ಅಹಂಕಾರ ಇಲ್ಲದುದು. ಇದಂ ರೂಪ ಚರಾಚರ ಜಗವು ಇಲ್ಲದುದು. ಹಗ್ಗದೋಳ್ ಹಾವು ತೋರಿದರು ನಿಜವೇ? ಕಪ್ಪೆಚಿಪ್ಪಿನೊಳ್ ಬೆಳ್ಳಿ ತೋರಿದರೂ ನಿಜವೇ? ಹಗ್ಗ ನಿಜವಲ್ಲದೇ ಹಾವು ನಿಜವಲ್ಲ. ಕಪ್ಪುಚಿಪ್ಪೇ ನಿಜವಲ್ಲದೆ, ಬೆಳ್ಳಿ ನಿಜವಲ್ಲ. ಬಂಗಾರದೋಳ್ ಕಡಗ ಕಂಕಣ ಆಭರಣಗಳಾಗಿ ತೋರಿದರೂ ಬಂಗಾರವಲ್ಲದನ್ಯವಲ್ಲ. ಹಾಗೆ ತೆರಹಿಲ್ಲದಭವ ನುಡಿಗೆಡೆಗೊಡದ ಘನದೊಳ್ ತಾನಿದಿರೆಂಬ ಮಾಯೆ ತೋರಿದರೂ ನುಡಿಗೆಡೆಗೊಡದ ಘನವಲ್ಲದೆ ಅನ್ಯವಲ್ಲ.
ಈ ತೋರುವದು ಉಳುಮೆ. ನುಡಿಗೆಡೆಗೊಡದ ಘನ ತಾನೆಂಬು ದನಾರು ಅರಿಯರಲ್ಲ. ನಿರಂತರವಾಗಿ ಇದ್ದ ಮಂಗಲಮಯ ಪರಮ ಸತ್ಯವು ಅಹಂ ಇದಂ ರೂಪ ಮಾಯೆಯಾಗಿ ತೋರುವದು. ಸುಜ್ಞಾನಿಗೆ ಈ ಮಾಯೆಯೆ ತೆರಹಿಲ್ಲದಭವವಾಗಿದೆ. ಅರಿತ ಶರಣಂಗೆ ತೋರುವ ಮಾಯೆ ತೋರಬಾರದ ಘನವಾಗಿ ಪ್ರಜ್ವಲಿಸುತ್ತಿದೆ.
ದೋಷದೃಷ್ಠಿಗೆ ರವಿಯು ಹಳದಿ ಬಣ್ಣವಾಗಿ ಕಂಡಂತೆ. ಅಜ್ಞಾನಿ ದೃಷ್ಠಿಗೆ ಇಲ್ಲದ ಮಾಯೆ ಉಂಟಾಗಿ ತೋರಿದರೂ, ಅದು ನಿರ್ಮಾಯವಾಗಿದೆ. ಅರಿವುಡೆ ತಾನಿದಿರೆಂಬುದು ಮಾಯೆ ಎನ್ನಲು ಸಂದುಂಟೆ? ಇದು ಕಾರಣ ಶಬ್ದವೇದಿಗಳು ಸಿಕ್ಕುತ್ತಾರೆ ನಿಶಬ್ದವೇದಿಗಳು ಸಿಕ್ಕುವದು ಬಹು ವಿರಳವೆಂದು ಹೇಳಬಹುದು.
ನೋಡಲೇನೂ ಇಲ್ಲವಾಗಿ ನಿಜಸಿದ್ದ ನೀನೆ ಚಿಮ್ಮಲಿಗೆಯ ಚೆನ್ನರಾಮ :
ನೋಡಲೇನು ಇಲ್ಲವಾಗಿ ತಾನೆ ತನ್ನಿಂದ ತನ್ನ ಅರಿವುಡೆ ನಿಜ ಸಿದ್ಧ ನೀನೆ. ನಿನ್ನ ಹೊರ್ತು ಅನ್ಯ ಆರೂ ಇಲ್ಲ. ತಾನು ಶುದ್ದ , ತಾನೆ ಸಿದ್ದ , ತಾನೆ ಪ್ರಸಿದ್ದವೆಂದು ನೋಡಲೇನೂ ಇಲ್ಲವಾಗಿ ನಿಜ ಸಿದ್ದ ನೀನೆ. ಎಲ್ಲ ಎಲ್ಲವ ಅರಿಯಬಹುದು. ತಾನು ನಿಜ ಸಿದ್ದವಿದ್ದುದು ಅದನಾರು ಅರಿವುದು? ಅರಿವ ಅರುಹಿಸಿಕೊಂಬುದಕ್ಕೂ ಮೀರಿದ ಘನಕ್ಕೆ ಘನ. ಅದು ದೃಶ್ಯವಾದುದಲ್ಲ, ದೃಕ್ ಎಂಬುದು ಆದುದಲ್ಲ, ನುಡಿಗೆಡೆಗೊಡದ ಘನ, ಅದನೆಂತು ಅರಿವುದು ಆರು ಅರಿಯಲಿಲ್ಲದ ಅರುವೆ ತಾನೆ ಆಗಿ ನೋಡುವರು, ಅವರ ದಿವ್ಯ ದೃಷ್ಠಿಗೆ ನೋಡಲೇನೂ ಇಲ್ಲವಾಗಿ ನಿಜಸಿದ್ದಿ ತಾನೆ.
ಅಲ್ಲಿ ತಾನೆಂಬುದಿಲ್ಲ ಇದಿರೆಂಬುದಿಲ್ಲ ಇವೆರಡು ಇಲ್ಲದುದರಿಂದ ಮಾಯೆಯು ಇಲ್ಲ. ಇಲ್ಲದುದು ಇಲ್ಲವಾಗಿರುವಲ್ಲಿ ತಾನು ತೆರಹಿಲ್ಲದಭವ ನುಡಿಗೆಡೆಗೊಡನು. ತನ್ನೊಳ್ ಭಾವಕ್ಕಿಂಬಿಲ್ಲ ಶಬ್ದ ಮೀಸಲು ಆಗಿರುವಲ್ಲಿ ನುಡಿಗೆಡೆಯಿಲ್ಲವೆಂದು ಹೇಳಿಹರು.
ಸೂರ್ಯಪ್ರಕಾಶ್‌ದೋಳ್ ಸೂರ್ಯನೆಂಬ ನುಡಿಯುಂಟೆ? ಜ್ಯೋತಿಯೋಳ್ ಜ್ಯೋತಿ ಎಂಬುವುದಿದೆಯೋ? ಹಾಗೆ ತನ್ನೊಳ ಉಳುಮೆ ಎಂಬುದು ಇಲ್ಲ. ಜ್ಞಾನಾನಂದನೆಂಬುದು ಇಲ್ಲದುದರಿಂದ ನೋಡಲೇನೂ ಇಲ್ಲವಾಗಿ ನಿಜಸಿದ್ಧ ನೀನೇ ಎಂದು ಹೇಳಿದ್ದಾರೆ. ಇದು ಕಾರಣ ತನ್ನ ಸ್ವಸ್ವರೂಪ ಒಂದೇ ನಿಜ. ಸ್ವರೂಪವದು ಸಿದ್ಧ ತಾನೇ, ನಿಜ ಸಿದ್ಧ ತಾನೇ ಇರುವಲ್ಲಿ ಖಂಡಿತವಲ್ಲದ ಅಖಂಡಿತನೇ ನಿಮ್ಮ ಕಂಡವರುಂಟೆ? ನಿನ್ನ ಕಂಡವರಿಲ್ಲ ಎನ್ನ ಕಂಡವರಿಲ್ಲ. ಕಂಡೆವು ಎನ್ನುವವರೆಲ್ಲ ಸರಿಯಾದ ಸಮ್ಯಜ್ಞಾನಿಗ ಳಲ್ಲ ಇದ್ದಕ್ಕಿದ್ದಂತೆ ತಿಳಿದವರೆಂದು ಹೇಳಿಹರು.'