9/18/2019

ಜ್ಞಾನ ಮಂಟಪ ವಿವರ ಪುಟ

ಉಸ್ಮಾನಿಯಾ ಮಾರುಕಟ್ಟೆಯಲ್ಲಿ ಹಂದಿ-ಮಂದಿ-ಒಂದೇ - ಓದುಗರ ವೇದಿಕೆ...

Font size -16+

'ರಾಯಚೂರಿನ ಉಸ್ಮಾನಿಯಾ ಮಾರುಕಟ್ಟೆಯಲ್ಲಿ ಹಂದಿ-ಮಂದಿ ಒಂದೇ. ಹೌದು ಈ ಮಾತಿಗೆ ಪುಷ್ಠಿಯೆನ್ನುವಂತೆ ಜ್ಞಾನಪೀಠ ಪ್ರಶಸ್ತಿ ಸಾಹಿತಿ ರಾಯಚೂರಿಗೆ ಬಂದಾಗ ರಾಯಚೂರಿನಲ್ಲಿ ಹಂದಿ-ಮಂದಿ- ಒಂದೇ ಎಂದಿದ್ದರು. ಅದು ಇಂದಿಗೂ ಕೂಡ ಮುಂದುವರಿ ದಿರುವುದು ವಿಚಿತ್ರವಾದರೂ ಸತ್ಯ.
ಗೋಲ್ಠಾಣಾದಿಂದ ಪಶ್ಚಿಮಕ್ಕೆ ಜೈನ್ ಮಂದಿರಕ್ಕೆ ಹೋಗುವ ಮಾರ್ಗಮಧ್ಯದಲ್ಲಿ ಬಲಗಡೆ ಮಾರೆಮ್ಮದೇವಿ ದೇವಸ್ಥಾನ ಎಡಗಡೆ ಉಸ್ಮಾನಿಯಾ ಮಾರುಕಟ್ಟೆ ಅದರೊಳಗೆ ಪ್ರವೇಶ ಮಾಡುವುದೆಂದರೆ ಅದೊಂದು ಹರಸಾಹಸ.
ಸಾಲು ಸಾಲು ರಿಕ್ಷಾಗಳು, ಗುಂಪುಗುಂಪಾಗಿ ತಮ್ಮ ತಮ್ಮ ಬಾಲಗಳನ್ನು ಟ್ವಿಸ್ಟ್ ಮಾಡಿಕೊಂಡು ನಿರ್ಭಯವಾಗಿ ಅಡವಿಯೊಳಗಿನ ಸಲಗಗಳಂತೆ ಒಮ್ಮಿಂದೊಮ್ಮೆಲೇ ಧುಮ್ಮಿಕ್ಕಿ ಬರುವ ಹಂದಿಗಳನ್ನು ಕಂಡಾಗ ಜನರಿಗೆ ಭಯ.
ಮೂಲಂಗಿ, ಮೆಂತೆಪಲ್ಲೆ, ಕರಿಬೇವು, ಸೌತೆಕಾಯಿ, ಪಾಲಕ್ಕಪಲ್ಲೆ, ಮೆಣಸಿನಕಾಯಿಗಳನ್ನು ಮುಂದಿರಿಸಿಕೊಂಡು ಕುಳಿತ ಹಳ್ಳಿಯ ಮುಗ್ಧ ಹೆಣ್ಣು ಮಕ್ಕಳ ಮುಂದೆ ಓಡಿ ಬರುವ ಒಮ್ಮೊಮ್ಮೆ ತಮ್ಮ ಕೆಸರಾಮೃತ ಪಾದಗಳಿಂದ ಎರ‌್ರಾಬಿರ‌್ರಿಯಾಗಿ ತುಳಿಯುತ್ತಿದ್ದರೆ, ಮತ್ತೊಂದೆಡೆ ಮೂರ‌್ನಾಲ್ಕು ಗೂಳಿಗಳು ಠಣ್, ಠಣ್ ಹಾರುತ್ತ ಕಾರಹುಣ್ಣಿಮೆಯ ಎತ್ತುಗಳಂತೆ ಓಡಿ ಬರುವಾಗ ಅಸಹಾಯಕ ವೃದ್ಧರೂ , ಮಕ್ಕಳೂ ಸತ್ತೆವೋ, ಬಿದ್ದೆವೋ ಎನ್ನುವಂತೆ ಓಡುವ ಚಿತ್ರ ಚಿಂತಾಜನಕ ಇದನ್ನು ದಿನನಿತ್ಯವೂ ಕಣ್ಣಾರೇ ಕಾಣುತ್ತಿದ್ದಾಗ್ಯೂ ಜಾಣ ಮೌನವಹಿಸಿದ ಅಧಿಕಾರಿಗಳು ಕ್ಯಾರೇ ಎನ್ನುತ್ತಿಲ್ಲ.
ಮೊದಲೇ ರಾಯಚೂರಿನಲ್ಲಿ ಕೆಮ್ಮು, ನೆಗಡಿ, ಅಲ್ಸರ್ ಎಲ್ಲದಕ್ಕೂ ಮಿಗಿಲಾಗಿ ‘‘ಡೆಂಗ್ಯೂ’’ ರೋಗಗಳಿಂದ ಬಳಲುತ್ತಿರುವ ರೋಗಿಗಳು ರಾಯಚೂರು ನಗರದ ಆಸ್ಪತ್ರೆಗಳ ಬೆಡ್‌ಗಳ ಮೇಲೆ ನೋವನ್ನು ಅನುಭವಿಸಿ ಹಿಡಿಶಾಪ ಹಾಕುತ್ತಿದ್ದರೂ ಎಲ್ಲೆಲ್ಲಿಯೂ ದಿವ್ಯ ನಿರ್ಲಕ್ಷ್ಯ.
ಈಗಲಾದರೂ ಸಂಬಂಧಪಟ್ಟ ಅಧಿಕಾರಿಗಳು ವಾಹನಗಳಲ್ಲಿ ವಿರಾಜಮಾನರಾಗಿ ನಗರ ವೀಕ್ಷಣೆ ಮಾಡುವುದರ ಬದಲಾಗಿ ನಾಲ್ಕು ಹೆಜ್ಜೆ ಹಾಕಿ ಉಸ್ಮಾನಿಯಾ ಮಾರುಕಟ್ಟೆಯಲ್ಲಿ ಪ್ರಯಾಣ ಮಾಡಿ ದಯವಿಟ್ಟು ಸಾರ್ವಜನಿಕರ ನೋವಿಗೆ ಸ್ಪಂದಿಸಿ ಮುಂಬರುವ ದಿನಗಳಲ್ಲಿ ಪರ್ಯಾಯ ವ್ಯವಸ್ಥೆ ಮಾಡಬೇಕಾಗಿ ಕೋರಲಾಗಿದೆ.
- ಅಯ್ಯಪ್ಪಯ್ಯ ಹುಡಾ
ರಾಯಚೂರು'