9/18/2019

ಜ್ಞಾನ ಮಂಟಪ ವಿವರ ಪುಟ

ಸಾಹಿತ್ಯ ಸಮ್ಮೇಳನ ಮತ್ತು ಚಂಪಾಯಣ - ಓದುಗರ ವೇದಿಕೆ...

Font size -16+

'ಮಾನ್ಯರೇ,
ಮೈಸೂರಿನಲ್ಲಿ ನಡೆದ 83ನೇ ಸಾಹಿತ್ಯ ಸಮ್ಮೇಳನ ಇಂದಿನವರೆಗೆ ನಡೆದು ಬಂದ ಸಾಹಿತ್ಯ ಸಮ್ಮೇಳನದಂತಲ್ಲ ! ಅದು ವಿಶಿಷ್ಟ-ವಿಲಕ್ಷಣ, ಖಂಡನೆ-ಮಂಡನೆ, ದೂರು-ದೂಷಣೆಗಳ ಹಾಗೂ ಹಲವು ವಾದ-ವಿವಾದಗಳ ಸೃಷ್ಟಿ ಈ ಚಂಪಾ ಯಣ(ರಾಮಾಯಣದಂತೆ). ಚಂಪಾಯಣದ ನಾಯಕ ಸಮ್ಮೇಳನದ ಅಧ್ಯಕ್ಷ ಚಂಪಾ ಅವರ ಭಾಷಣ ಆಸ್ಥಾನ ಪಂಡಿತರಂತ್ತಿತ್ತು. ಹಿಂದಿನ ಕಾಲದ ರಾಜ- ಮಹಾ ರಾಜರ ಆಸ್ಥಾನ ಪಂಡಿತರು ತಮ್ಮ ಆಶ್ರಯದಾತರನ್ನು ಓಲೈಸಿ ಹೊಗಳಿ ಕಾವ್ಯ ರಚಿಸು ತ್ತಿದ್ದರು. ಚಂಪಾರವರ ಭಾಷಣ ಇಂದಿನ ರಾಜಧಾನಿ ಆಸ್ಥಾನ ಪಂಡಿತ ವಿಧೂ ಷಿಗಳಂತ್ತಿತ್ತು. ರಾಜಕೀಯ, ಬಂಡಾಯ, ಎಡಪಂಥೀಯ ವಿಚಾರ, ಸ್ವಾರ್ಥ- ಸ್ವಪ್ರ ತಿಷ್ಠೆಗಳು ಭಾಷಣದ ತುಂಬಾ ಹರಿದಾಡಿದವು.
ಚಂಪಾರವರು ತಮ್ಮ ಭಾಷಣದುದ್ದಕ್ಕೂ ಕೇಂದ್ರ ಸರಕಾರ, ರಾಷ್ಟ್ರೀಯತೆ, ಕೇಸರಿ, ಹಿಂದೂವಾದ, ಸಮಾಜ ನಂಬಿದ ವ್ಯವಸ್ಥೆಗಳನ್ನು ಗುರಿಯಾಗಿಟ್ಟುಕೊಂಟು ಅವುಗಳ ವಿರುದ್ಧ ವ್ಯಂಗ್ಯ, ವಿಡಂಬನೆಗಳಿಂದ ಲೇವಡಿ ಪದಗಳನ್ನು ಪುಂಖಾನು ಪುಂಖವಾಗಿ ಬಳಸಿರುವುದು ಒಂದೆಡೆಯಾದರೆ, ಒಂದು ರಾಜಕೀಯ ಪಕ್ಷದ ವಕ್ತಾ ರನಂತೆ, ಮತ್ತೊಂದೆಡೆ ವಿಚಾರವಾದಿಯಂತೆ ಮಾತನಾಡುವುದು ವಿರೋಧ ಭಾಸವಾಗಿತ್ತು. ಪರೋಕ್ಷವಾಗಿ ಕಾಂಗ್ರೆಸ್ ಪಕ್ಷಕ್ಕೆ ಯಾವ ಎಗ್ಗೂ ಇಲ್ಲದೆ ಮತಯಾ ಚಿಸಿದ ಚಂಪಾರಿಂದ ಸಾಹಿತ್ಯ ಸಮ್ಮೇಳನದ ವೇದಿಕೆಯು ದುರುಪಯೋಗವಾಗಿದ್ದು ಇದು ಎರಡನೆಯದು. ಮೊದಲನೆಯದು 82ನೇ ಸಮ್ಮೇಳನ.
ಚಂಪಾ ಅವರ ಭಾಷಾಶೈಲಿ ಸಮ್ಮೇಳನದ ಅಧ್ಯಕ್ಷರ ವೇದಿಕೆಯಂತೆ ಪ್ರೌಢ ವಾಗಿರಲಿಲ್ಲ. ಭಾಷಣ ಯಾವುದೇ ಸಿದ್ಧಾಂತ ತರ್ಕಗಳ ನೆಲೆಗಟ್ಟಿನಲ್ಲಿ ಗಟ್ಟಿಯಾದ ಚಿಂತನೆಯಾಗಿರಲಿಲ್ಲ. ಪ್ರೊ. ಶಂಕರ ಮೊಕಾಶಿ ಪೂಣೆಕರ್ ಮತ್ತು ಡಾ॥ ವಿ. ಕೃ. ಗೋಕಾಕರಂಥ ಇಂಗ್ಲೀಷ್ ಭಾಷಾ ವಿದ್ವಾಂಸರಂತೆ ಚಂಪಾ ಕನ್ನಡದಲ್ಲಿ ಉತ್ಕೃಷ್ಠ ಮಹಾಕಾವ್ಯಗಳನ್ನು ರಚಿಸಿದ್ದರೆ ಭಾಷೆ ಪ್ರೌಢವಾಗುತ್ತಿತ್ತು. ಬರಿ ವ್ಯಂಗ್ಯ ವಿಡಂಬನೆ, ವಕ್ರೋಕ್ತಿಗಳಲ್ಲಿಯೇ ತೃಪ್ತಿಪಟ್ಟ ಇವರಿಗೆ ಪ್ರೌಢಭಾಷೆ ಬರುವುದಾದೂ ಹೇಗೇ?
ಚಂಪಾ ಅವರು ಧಾರವಾಡದಲ್ಲಿದ್ದಾಗ ಸರಳವಾಗಿದ್ದರು. ಆಗ ಮೈಸೂರಿನ ಸಾಹಿತಿಗಳನ್ನು ರಾಜಧಾನಿಯ ಸಾಹಿತಿಗಳೆಂದು ಛೇಡಿಸಿ ವ್ಯಂಗ್ಯವಾಡಿದ್ದರು. ಈಗ ಅವರು ಧಾರವಾಡದಿಂದ ಬೆಂಗಳೂರಿಗೆ ವಲಸೆ ಹೋಗಿ ಬೆಂಗಳೂರಿನಲ್ಲಿ ನೆಲೆ ನಿಂತ ಮೇಲೆ ತಾವು ರಾಜಧಾನಿ ಸಾಹಿತಿಗಳಾದರಲ್ಲದೆ ರಾಜಧಾನಿಯ ಆಸ್ಥಾನ ವಿದೂಷಿ (ಕ)ಗಳಾದ ಪರಿಣಾಮ ಇವರಿಗಿಂತ ಸಮ್ಮೇಳನದ ಅಧ್ಯಕ್ಷರಾಗುವ ಅರ್ಹತೆಯುಳ್ಳ ಅದೆಷ್ಟೋ ಜೇಷ್ಠರಾದ, ಶ್ರೇಷ್ಠ ವಿದ್ವಾಂಸರಿದ್ದರೂ ಚಂಪಾ ಅವರಿಗೆ ಅಧ್ಯಕ್ಷಸ್ಥಾನ ದೊರೆತಿದ್ದು ಅದು ಸರಕಾರ ಕೊಡು ಮಾಡಿದ ಭಾಗ್ಯ ವಿಶೇಷ ! ಸಮ್ಮೇಳನದ ವೇದಿ ಕೆಯನ್ನು ರಾಜಕೀಯಕ್ಕೆ ಬಳಸಿಕೊಂಡ ಚಂಪಾ ತಮ್ಮ ಸಮರ್ಥನೆಗೆ ಕನ್ನಡ ಸಾಹಿತ್ಯ ಚರಿತ್ರೆಯನ್ನು ಉದಾಹರಿಸುತ್ತಾರೆ.ಆದರೆ ಪೆರರಿವುದೇನ್ ಪೆರರ್ ಮಾಡುವುದೇನ್ ಪೆರರಿಂದಪ್ಪುದೇನ್ ಎಂದು ಆದಿಕವಿ ಪಂಪ ಅಂದಿನ ಪ್ರಭುತ್ವವನ್ನು ಧಿಕ್ಕರಿಸಿ ನುಡಿ ದಿರುವುದು ಅವರಿಗೆ ಚರಿತ್ರೆ ತಿಳಿದಿರಬೇಕು. ಸ್ವಹಿತಕ್ಕೆ ಸರಕಾರವನ್ನು ಬೆಂಬಲಿಸುವ ಚಂಪಾ ಎಲ್ಲಿ? ಪ್ರಭುತ್ವವನ್ನು ಧಿಕ್ಕರಿಸಿ ಸ್ವತಂತ್ರವನ್ನು ಮೆರೆದ ಪಂಪನೆಲ್ಲಿ? ಹೋಲಿಸಲಾಗದು.
ಚಂಪಾರವರ ರಾಜಕೀಯ ಭಾಷಣವನ್ನು ಹಿರಿಯ ಕವಿ ಗಿರಡ್ಡಿ ಗೋವಿಂದ ರಾಜ್ ಖಂಡಿಸಿದರೆ, ವ್ಯಂಗ್ಯ, ಉಡಾಫೆಯಂಥ ಅಪ್ರಬುದ್ಧ ಭಾಷೆಯನ್ನು ಬಳಸ ದಂತೆ ಹಿರಿಯ ಸಂಶೋಧಕ ಎಂ. ಚಿದಾನಂದಮೂರ್ತಿ ಬುದ್ಧಿವಾದ ಹೇಳಿದ್ದಾರೆ. ಅವೆಲ್ಲವೂ ಬೇವು ಮೆದ್ದ ಕಾಗೆಗೆ ಮಾವು ರುಚಿಸದು ಎಂಬ ಕವಿವಾಣಿಯ ಮನಸ್ಥಿತಿ ಹೊಂದಿದ ಚಂಪಾ ಅವರಿಗೆ ಇದು ವ್ಯರ್ಥಾಲಾಪವೇ ಸರಿ !
- ಪ್ರೊ. ಶಾಶ್ವತಸ್ವಾಮಿ ಮುಕ್ಕುಂದಿಮಠ
ಸಾಹಿತಿ ಹಾಗೂ ಸಂಶೋಧಕರು, ಸಿಂಧನೂರು.
ಮೊ: 9449028228'