9/18/2019

ಜ್ಞಾನ ಮಂಟಪ ವಿವರ ಪುಟ

ಉಡುಪಿ ವಿದ್ಯುತ್ ಖರೀದಿ ಹಿಂದಿನ ರಾಜಕೀಯವೇನು?

Font size -16+

'ಮೊದಲಿನಿಂದಲೂ ನಮ್ಮಲ್ಲಿ ಕಲ್ಲಿದ್ದಲು ಖರೀದಿ ಮತ್ತು ವಿದ್ಯುತ್ ಖರೀದಿಯಲ್ಲಿ ರಾಜಕೀಯ ನಡೆಯುತ್ತಲೇ ಬಂದಿದೆ. ಜೆ.ಎಚ್. ಪಟೇಲ್ ಕಾಲದವರೆಗೆ ವಿದ್ಯುತ್ ಉತ್ಪಾದನೆಯಲ್ಲಿ ಸ್ವಾವಲಂಬನೆ ಸಾಧಿಸಬೇಕೆಂದು ಎಲ್ಲ ಸರ್ಕಾರಗಳು ಹೊಸ ಯೋಜನೆಗಳಿಗೆ ಹೆಚ್ಚು ಬಂಡವಾಳ ಹೂಡಿದವು. ದೇವರಾಜ ಅರಸು ಕಾಲದವರೆಗೆ ಜಲ ವಿದ್ಯುತ್ ಯೋಜನೆಗಳಿಗೆ ಆದ್ಯತೆ ನೀಡಲಾಯಿತು. ನಂತರದ ದಿನಗಳಲ್ಲಿ ಕಲ್ಲಿದ್ದಲು ಆಧರಿತ ವಿದ್ಯುತ್‌ಯೋಜನೆಗಳಿಗೆ ಮಹತ್ವ ಬಂದಿತು. ರಾಯಚೂರು, ಬಳ್ಳಾರಿ ಮತ್ತು ಯರಮರಸ್ ಕೇಂದ್ರಗಳು ಸ್ಥಾಪನೆಯಾದರೂ ವಿದ್ಯುತ್ ಕೊರತೆ ನೀಗಲಿಲ್ಲ. ಎನ್‌ಟಿಪಿಸಿ ಕೂಡಗಿಯಲ್ಲಿ ಒಂದು ಘಟಕ ಸ್ಥಾಪಿಸಿತು. ಯಡಿಯೂರಪ್ಪ ಕಾಲದಲ್ಲಿ ಛತ್ತೀಸಗಢದಲ್ಲಿ ಮತ್ತೊಂದು ಕಲ್ಲಿದ್ದಲು ಆಧರಿತ ವಿದ್ಯುತ್ ಕೇಂದ್ರ ಬರಬೇಕಿತ್ತು. ನಂತರಬಂದ ಕಾಂಗ್ರೆಸ್ ಸರ್ಕಾರ ಅದನ್ನು ಅರ್ಧದಲ್ಲೇ ಕೈಬಿಟ್ಟಿತು. ರಾಯಚೂರು ಹೊರತುಪಡಿಸಿದರೆ ಉಳಿದ ಕೇಂದ್ರಗಳಿಗೆ ಪ್ರತ್ಯೇಕ ಗುತ್ತಿಗೆ ಗಣಿಯಿಲ್ಲ. ಅದಕ್ಕೆ ಪ್ರಯತ್ನಗಳು ನಡೆಯುತ್ತಿವೆ. ಆದರೆ ತತ್‌ಕ್ಷಣಕ್ಕೆ ಯಾವುದೂ ಲಭ್ಯವಿಲ್ಲ.
ಕೇಂದ್ರ ಸರ್ಕಾರ ಸ್ಥಳೀಯ ಕಲ್ಲಿದ್ದಲನ್ನು ಎಲ್ಲ ಘಟಕಗಳಿಗೆ ಕೊರತೆ ಇಲ್ಲದಂತೆ ಒದಗಿಸುವುದಾಗಿ ಹೇಳಿದ್ದರೂ ಸ್ಥಳೀಯ ಕಲ್ಲಿದ್ದಲು ಸಾಕಷ್ಟು ಪ್ರಮಾಣದಲ್ಲಿ ದೊರಕುತ್ತಿಲ್ಲ. ವಿದೇಶಿ ಕಲ್ಲಿದ್ದಲು ಖರೀದಿ ಮಾಡಲು ಸರ್ಕಾರಿ ಸಂಸ್ಥೆಗಳಿಗೆ ಅವಕಾಶ ನೀಡುತ್ತಿಲ್ಲ. ಹೀಗಾಗಿ ಖಾಸಗಿ ವಿದ್ಯುತ್ ಕಂಪನಿಗಳಿಂದ ವಿದ್ಯುತ್ ಖರೀದಿ ಅನಿವಾರ್ಯ ಎಂಬಂತೆ ಆಗಿದೆ.ಖಾಸಗಿ ಕಂಪನಿಗಳು ವಿದೇಶಿ ಕಲ್ಲಿದ್ದಲು ಖರೀದಿಸಿ ವಿದ್ಯುತ್ ಉತ್ಪಾದಿಸಿ ಮಾರಾಟ ಮಾಡುತ್ತಿವೆ. ಜಿಂದಾಲ್‌ನಿಂದ ಇದುವರೆಗೆ ಹೆಚ್ಚಿನ ವಿದ್ಯುತ್ ಖರೀದಿ ನಡೆಯುತ್ತಿತ್ತು. ಉಡುಪಿಯಿಂದ ಕಡಿಮೆ ವಿದ್ಯುತ್ ಪಡೆಯಲಾಗುತ್ತಿತ್ತು. ಈಗ ಉಡುಪಿಗೆ ತಿರುಗಲು ಬೇರೆ ಕಾರಣವಿರಬೇಕು.
ಕರ್ನಾಟಕ ವಿದ್ಯುತ್ ನಿಗಮ ಕಲ್ಲಿದ್ದಲು ಖರೀದಿಗೆ ಎಲ್ಲ ಪ್ರಯತ್ನಗಳನ್ನು ಮಾಡಿತು. ಸಿಂಗರೇಣಿ ಗಣಿ ಕಂಪನಿ ಸ್ವಲ್ಪ ಪ್ರಮಾಣದಲ್ಲಿ ಕಲ್ಲಿದ್ದಲು7 ಒದಗಿಸಿತು. ಈಗ ಮತ್ತೆ ಕಲ್ಲಿದ್ದಲು ಸಮಸ್ಯೆ ತಲೆದೋರಿದೆ. ಕಲ್ಲಿದ್ದಲು ಇಲ್ಲ ಎಂದ ಮೇಲೆ ನೇರ ವಿದ್ಯುತ್ ಖರೀದಿಯೊಂದೇ ಈಗ ಇರುವ ಮಾರ್ಗ. ಮುಕ್ತ ಮಾರುಕಟ್ಟೆಯಲ್ಲಿ ವಿದ್ಯುತ್ ವಿನಿಮಯ ಕೇಂದ್ರದ ಮೂಲಕ ಪಡೆಯುವ ಪ್ರಯತ್ನ ನಡೆಯಿತು.
ಪ್ರತಿದಿನ ವಿದ್ಯುತ್ ನಿಗದಿತ ಪ್ರಮಾಣದಲ್ಲಿ ದೊರೆಯುವುದಿಲ್ಲ. ಹೀಗಾಗಿ ದೀರ್ಘಕಾಲಿಕ ಒಪ್ಪಂದ ಅಗತ್ಯ. ಉಡುಪಿಯಲ್ಲಿರುವ ವಿದ್ಯುತ್ ಕೇಂದ್ರಕ್ಕೆ ದೊಡ್ಡ ಇತಿಹಾಸವೇ ಇದೆ. ಇದನ್ನು ಮೊದಲು ನಾಗಾರ್ಜುನ ಕಂಪನಿ ಆರಂಭಿಸಿತು. ಇದಕ್ಕೆ ಅನುಮತಿ ದೊರಕುವುದೇ ಕಷ್ಟವಾಯಿತು. ಕೊನೆಗೆ ಅನುಮತಿ ದೊರಕಿದರೂ ಸ್ಥಳೀಯರಿಂದ ಬೃಹತ್ ಪ್ರತಿಭಟನೆ ನಡೆಯಿತು. ಎಲ್ಲವೂ ಶಾಂತಗೊಂಡು ಕೇಂದ್ರ ಆರಂಭಗೊಂಡಿತು. ವಿದೇಶಿ ಕಲ್ಲಿದ್ದಲಿಗಾಗಿ ಈ ಕೇಂದ್ರದ ಬಾಯ್ಲರ್‌ಗಳನ್ನು ಸಿದ್ಧಪಡಿಸಲಾಗಿದೆ. ಹೀಗಾಗಿ ವಿದೇಶಿ ಕಲ್ಲಿದ್ದಲನ್ನು ಆಮದು ಮಾಡಿಕೊಳ್ಳಲಾಗುತ್ತಿದೆ. ಈಗ 1200 ಮೆಗಾವ್ಯಾಟ್ ಸಾಮರ್ಥ್ಯದ ಘಟಕ ಕೆಲಸ ಮಾಡುತ್ತಿದೆ. 600 ಮೆಗಾವ್ಯಾಟ್ ಸಾಮರ್ಥ್ಯದ ಎರಡು ಘಟಕಗಳಿವೆ. ಈಗ ಈ ಕಂಪನಿಯನ್ನು ಅದಾನಿ ಕಂಪನಿಯವರು ಖರೀದಿ ಮಾಡಿದ್ದಾರೆ. ಎಲ್ಲರಿಗೂ ತಿಳಿದಿರುವ ಹಾಗೆ ಅದಾನಿ ಮೋದಿಯವರಿಗೆ ಸಮೀಪದಲ್ಲಿರುವ ಉದ್ಯಮಿ.
ಈ ಕಂಪನಿ ಸಿಇಆರ್‌ಸಿ ಮೂಲಕ ಹೆಚ್ಚಿನ ವಿದ್ಯುತ್ ದರ ಪಡೆದುಕೊಂಡಿದೆ. ಹೀಗಾಗಿ ಮೊದಮೊದಲು ನಮ್ಮ ಸರ್ಕಾರ ಇಲ್ಲಿಯ ವಿದ್ಯುತ್ ಖರೀದಿ ಮಾಡುತ್ತಿರಲಿಲ್ಲ. ಕಾಲಕ್ರಮೇಣ ವಿದ್ಯುತ್ ಬೇಡಿಕೆ ಹೆಚ್ಚಾದಂತೆ ಇಲ್ಲಿಂದಲೂ ಖರೀದಿ ಮಾಡುವುದು ಅನಿವಾರ್ಯವಾಯಿತು. ಈಗ 500 ಮೆಗಾವ್ಯಾಟ್ ವಿದ್ಯುತ್ ರಾಜ್ಯಕ್ಕೆ ಬರುತ್ತಿದೆ. ಮತ್ತೆ 500 ಮೆಗಾವ್ಯಾಟ್ ಇಲ್ಲಿಂದಲೇ ಪಡೆಯಲಾಗುತ್ತಿದೆ.
ಕೆಲವು ತಿಂಗಳ ಹಿಂದೆ ವಿದ್ಯುತ್ ಸಚಿವರ ಮನೆ ಮೇಲೆ ಐಟಿ ದಾಳಿ ನಡೆದಿತ್ತು. ಇದಕ್ಕೆ ರಾಜಕೀಯ ಪ್ರೇರಣೆ ಇದೆ ಎಂಬ ಟೀಕೆ ಕೇಳಿಬಂದಿತ್ತು. ಆಮೇಲೆ ಎಲ್ಲವೂ ತಣ್ಣಗಾಯಿತು ಎಂದು ಭಾವಿಸಲಾಗಿತ್ತು. ಈಗ ವಿದ್ಯುತ್ ಕೊರತೆಯನ್ನು ಬಳಸಿಕೊಂಡು ಕೇಂದ್ರ ಸರ್ಕಾರ ರಾಜ್ಯದ ಮೇಲೆ ಒತ್ತಡ ಹೇರುತ್ತಿದೆಯೇ ಎಂಬ ಅನುಮಾನ ಮೂಡುತ್ತಿದೆ. ಅದಾನಿ ಕಂಪನಿ ಪ್ರಧಾನಿಗೆ ಸಮೀಪ ಇರುವುದರಿಂದ ಆ ಕಂಪನಿಯ ವಿದ್ಯುತ್ ಖರೀದಿ ಮಾಡಲು ಒತ್ತಡ ಬಂದಿರಬಹುದೇ ಎಂಬ ಅನುಮಾನವಿದೆ. ಇದಕ್ಕೆ ಕಾರಣವೂ ಇದೆ. ಮಹಾರಾಷ್ಟ್ರಕ್ಕೆ ಸ್ಥಳೀಯ ಕಲ್ಲಿದ್ದಲು ಸರಬರಾಜು ಅಧಿಕವಾಗಿದೆ. ಕರ್ನಾಟಕಕ್ಕೆ ಮಾತ್ರ ಕೊರತೆ ಕಂಡು ಬರಲು ಕಾರಣವೇನು? ಪಿಯೂಷ್ ಗೋಯೆಲ್ ಕಲ್ಲಿದ್ದಲು ಖಾತೆಯನ್ನು ತಮ್ಮ ಬಳಿಯೇ ಇಟ್ಟುಕೊಂಡಿದ್ದಾರೆ. ಬಹಿರಂಗವಾಗಿ ಟೀಕೆಗಳು ಕೇಳಿಬಂದಿದ್ದರೂ ಅವರು ಉತ್ತರ ಕೊಡಲು ಹೋಗಿಲ್ಲ. ರಾಜ್ಯ ಬಿಜೆಪಿ ನಾಯಕರು ಇದರ ಬಗ್ಗೆ ಚಕಾರ ಎತ್ತಿಲ್ಲ. ಅದಾನಿ ಮೂಲಕ ರಾಜಿ ಸೂತ್ರ ಮೂಡಿ ಬರುತ್ತಿದೆಯೇ ಎಂಬ ಸಂದೇಹ ಕಾಡುತ್ತಿದೆ.
ಇಂದಿನ ಈ ಪರಿಸ್ಥಿತಿಗೆ ಸಾರ್ವಜನಿಕರೇ ಕಾರಣ. ತದಡಿಯಲ್ಲಿ ಕರ್ನಾಟಕ ವಿದ್ಯುತ್ ನಿಗಮ ವಿದೇಶಿ ಕಲ್ಲಿದ್ದಲು ಆಧರಿತ ವಿದ್ಯುತ್ ಯೋಜನೆ ಆರಂಭಿಸಲು ಯೋಜಿಸಿತ್ತು. ಕೆಪಿಸಿಗೆ ಸೇರಿದ ಜಮೀನೂ ಇದೆ. ಆದರೆ ಇಲ್ಲಿ ವಿದ್ಯುತ್ ಕೇಂದ್ರ ಆರಂಭಿಸಲು ಎಲ್ಲರೂ ತೀವ್ರ ಪ್ರತಿಭಟನೆ ನಡೆಸಿದರು.
ಮಠಾಧೀಶರು ಪ್ರತಿಭಟನೆಯಲ್ಲಿ ಸೇರಿಕೊಂಡರು. ಅದೇ ಯೋಜನೆ ನಂದಿಕೂರು ಬಳಿ ಖಾಸಗಿ ಬಂಡವಾಳದಲ್ಲಿ ಆರಂಭಗೊಂಡಾಗ ಮೊದಮೊದಲು ಚಳವಳಿ ನಡೆದವು. ನಂತರ ಎಲ್ಲವೂ ತಣ್ಣಗಾದವು. ಈಗ ಅದೇ ಕಂಪನಿಯಿಂದ ಹೆಚ್ಚಿನ ದರದಲ್ಲಿ ವಿದ್ಯುತ್ ಖರೀದಿ ಮಾಡಿ ಅದೇ ಜನರಿಗೆ ಹೆಚ್ಚಿನ ದರದಲ್ಲಿ ಮಾರಾಟ ಮಾಡುವ ಪರಿಸ್ಥಿತಿ ಬಂದಿದೆ.
ಇದಕ್ಕೆ ತದ್ವಿರುದ್ಧವಾಗಿ ರಾಯಚೂರಿನ ಜನ ವಿದ್ಯುತ್ ಕೇಂದ್ರ ಸ್ಥಾಪನೆಗೆ ಸಹಕಾರ ನೀಡಿದರು. ಅವರಿಗೆ ಲಭಿಸಿದ್ದು ಏನೆಂದರೆ ಲೋಡ್‌ಶೆಡ್ಡಿಂಗ್. ದೀಪದ ಕೆಳಗೆ ಕತ್ತಲು ಎಂಬಂತೆ ಆಗಿದೆ. ರಾಯಚೂರಿನ ಒಟ್ಡು ಉತ್ಪಾದನೆಯಲ್ಲಿ ಶೇಕಡ 10 ರಾಯಚೂರು ಜಿಲ್ಲೆಗೆ ಮೀಸಲಾದರೆ ಸಾಕು. ವಿದ್ಯುತ್ ಸಮಸ್ಯೆಯೇ ಇರುವುದಿಲ್ಲ. ಇದನ್ನು ನೀಡಲು ಸರ್ಕಾರ ಮನಸ್ಸು ಮಾಡಬೇಕು.'