9/18/2019

ಜ್ಞಾನ ಮಂಟಪ ವಿವರ ಪುಟ

ಅರಿವಿನ ಪರಿಮಳ - 13 ಅಂತರಾತ್ಮ ಬೋಧೆ

Font size -16+

'-ಶ್ರೀ ಸದ್ಗುರು ವಿದ್ಯಾನಂದ ಶರಣರು ಡಬ್ಬೇರುಮಡುವು

ಎಲೆ ಮನವೆ ನೀ ನಿಜವ ತಿಳಿವುಡೆ, ಆ ನಿನ್ನ ನಿಜವ ಹೇಳುವೆ ಕೇಳು ,
ಅದು ಕೇವಲ ಜ್ಯೋತಿ, ಅದು ವರ್ಣಾತೀತ .
ನೀನದನರಸುವಾಗ ನಿನಗಾವಲ್ಲಿ ನಿಶ್ಚಯ ತೋರಿತ್ತು.
ಅದೀಗ ನಿನ್ನ ಪರಿಪೂರ್ಣತ್ವ ನೆಲೆ,
ಆ ನಿನ್ನ ನಿಜವ ನಿಶ್ಚೈಸಿ ನಿರ್ಗಮನಿಯಾದಲ್ಲಿ
ಅದೇ ಸಮ್ಯಜ್ಞಾನದ ತೋರಿಕೆಯ ಅಖಂಡ ಬೆಳಗಿನ ಹೊಳಹಿನೊಳಗೆ
ನೀ ನಮ್ಮ ಗುಹೇಶ್ವರ ಲಿಂಗದ ಶ್ರೀ ಚರಣವ ಸ್ಮರಿಸಿಕೊಂಡು
ನಿಶ್ಚಿಂತನಾಗೆಲೆ ಮನವೆ.

ತಾತ್ಪರ್ಯ: ಎಲೆ ಮನವೆ ನೀ ನಿಜವ ತಿಳಿವುಡೆ ಆ ನಿನ್ನ ನಿಜವ ಹೇಳುವೆ ಕೇಳು :
ಪ್ರಭುದೇವ ಮನಕ್ಕೆ ಶ್ರೀಗುರುವಾದಾತ. ಮನವ ತನ್ನಂತೆ ಮಾಡುವ ಸ್ವಯಂ ಜ್ಯೋತಿ ಲಿಂಗವಾದುದರಿಂದ ಎಲೆ ಮನವೆ ನೀ ನಿಜವ ತಿಳಿವುಡೆ ಆ ನಿನ್ನ ನಿಜವ ಹೇಳುವೆ ಕೇಳು ಎಂದು ಬೋಧಿಸಿಹನು. ಓ ಮನವೆ ನೀನು ಮನವಲ್ಲ ಕೇವಲ ಜ್ಯೋತಿ. ವರ್ಣಾತೀತ ನೀನದನರಸುವಾಗ ನಿನಗಾವಲ್ಲಿ ನಿಶ್ಚಯ ತೋರಿತ್ತು.
ಪ್ರಭುದೇವ ಇದು ಮನಸ್ಸಿಗೆ ತಿಳಿಸುವ ಸುಶಿಕ್ಷಣ, ಸುಜ್ಞಾನ, ಕರುಣಾ ಹೃದಯದಿಂದ ಹೊರಹೊಮ್ಮಿಬಂದ ಮಹಾ ಪ್ರಸಾದ. ಕೇವಲ ಜ್ಯೋತಿ ಎಂದು ಹೇಳಿ ಸರಿ ಮಾಡಬಹುದಾಗಿತ್ತು. ಅದು ವರ್ಣಾತೀತ ಎಂದು ಹೇಳಿದುದಲ್ಲದೆ ನೀನದನರಸುವಾಗ ನಿನಗಾವಲ್ಲಿ ನಿಶ್ಚಯ ತೋರಿತ್ತು ಎಂದು ತಿಳಿಸಿದುದು ನೋಡಿದಡೆ ಇದು ಸ್ವಸ್ವರೂಪ ಸಿದ್ಧಮಾಡಿ ತೋರುವ ಪರಮಗುರಿ. ಇದು ಆಕಾಶವಾಣಿ. ಕಲ್ಪಿತ ನನ್ನ ನಷ್ಟಮಾಡಿ ಅಕಲ್ಪಿತ ಘನವ ತೋರಿಸುವ ಸಂಕೇತ. ಅನುಪಮ ನಿಲುವು ತೋರಿಸುವ ಸಂಜ್ಞೆ. ಕೇವಲ ಜ್ಯೋತಿ ಎಂಬುದು ಏಕ, ಏವ, ಅದ್ವಯ ಇದು ನಿರಂತರವಾಗಿರುವ ಸರ್ವಮಂಗಳಮಯ ಜ್ಯೋತಿ. ಇದು ಅಂದು ಇಂದು ಎಂದೆಂದೂ ಇದ್ದಂತಿರುವ ಘನ ಏನೊಂದಾಗದ ನಿರಾಲಂಬ ನಿರುಪಮ ಜ್ಯೋತಿ. ವರ್ಣನೆಗೆ ಮೀರಿದುದು ಆವುದು ಅದು ಜ್ಯೋತಿ ಕೇವಲ ಜ್ಯೋತಿ ಎಂದು ಎಚ್ಚರಿಸಿದ.
ಎಲೆ ಮರವುಳ್ಳ ಮನವೆ ಇಲ್ಲದುದು ಕಲ್ಪಿಸುವದು ಇದ್ದುದನರಿಯದಿಹುದು ನಿನ್ನ ಸ್ವಭಾವವಾಗಿದೆ. ಇದುವೆ ನೀನೆಂದು ತಿಳಿದು ನಿನ್ನ ನಿಜದಿಂದ ದೂರವಾಗಿರುವೆ. ನಿನ್ನ ಪ್ರಮಾದ ಕಳೆದುಕೊಳ್ಳಲು ಕೇವಲ ಜ್ಯೋತಿಯೆಂದು ತಿಳಿಯ ಹೋಗು.
ಜ್ಯೋತಿ ಎಂದಾಕ್ಷಣ ನಿನಗಿಂತ ಬೇರಾಗಿ ತೋರುವ ಚಂದ್ರ ಸೂರ್ಯರೆಂದು (ಷಡ್ವರ್ಣ) ಹೊರಗೆ ತೋರುವ ಕೆಂಪು, ಹಳದಿ, ಹಸರು, ನೀಲಿ, ಬಿಳಿಪು, ಕೇಸರಿ ಈ ತೋರಿಕೆಯ ಜ್ಯೋತಿ ಕೇವಲ ಜ್ಯೋತಿಯಾಗವು. ಇದಲ್ಲದೆ ಯೋಗಾಭ್ಯಾಸದಲ್ಲಿ ತೋರುವ ನಾದ, ಬಿಂದು , ಕಲೆಗಳಿಂದುಕ್ತವಾದುದು ಅದು ಪರಪ್ರಕಾಶವಲ್ಲದೆ ಕೇವಲ ಜ್ಯೋತಿಯಾಗದು.
ಕೇವಲ ಜ್ಯೋತಿಯಾದುದು ಅದು ತಾನು ಜ್ಯೋತಿ ಎನ್ನದ್ದು. ಇದು ಕಾರಣ ಅದು ವರ್ಣಾತೀತವಾದ್ದರಿಂದ ಅದಕ್ಕೆ ಪರಪ್ರಕಾಶವೆನ್ನಲು ಬರದು. ಸ್ವ ಪ್ರಕಾಶವೆನ್ನಲು ಬರದು. ಚಿಜ್ಯೋತಿ ಎನ್ನಲು ಬರದು, ಸ್ವಯಂ ಜ್ಯೋತಿ ಎನ್ನಲು ಬರದು. ನುಡಿಗೆಡೆಗೊಡದ ಘನವೆ ಕೇವಲ ಜ್ಯೋತಿಯಾದುದು. ನೀನದ ಹುಡುಕುವಾಗ ನಿನಗಾವಲ್ಲಿ ನಿಶ್ಚಯವಾಗಿ ನಿನಗೆ ಒಪ್ಪಿಗೆಯಾಗುವದು. ಅದುವೆ ನಿನ್ನ ನಿಜವ ತಿಳಿ ದುದು ಎಂದು ಹೇಳಿದನಲ್ಲದೆ ಅರ್ಚನೆ ಮಾಡು, ಅನು ಸಂಧಾನ ಮಾಡು ಎನ ಲಿಲ್ಲ. ಏಕೆಂದರೆ ತನ್ನ ನಿಶ್ಚಿಯ ಧ್ಯಾನಾತೀತ, ಭಾವಾತೀತ, ಕ್ರಿಯಾತೀತವಾದ್ದರಿಂದ ಅತೀತ ನಿಲುವು. ವರ್ಣಿಸಲಕ್ಕೆ ಬಾರದ ನಿಲವು, ನಿಜದ ನಿಲುವು, ಅರಸುವದಕ್ಕೆ ಬಾರದ ನಿಲುವು ನಿಜ ನಿಲವು ಅದೀಗ ನಿನ್ನ ಪರಿಪೂರ್ಣತ್ವದ ನೆಲೆ.
ಎಲೆ ಮನವೆ ಆರು ನಾನೆಂದು ನಿನ್ನ್ನ ನಿಜವ ತಿಳಿಯುವೆ ಆಗಳೆ ತಾನು ಕೇವಲ ಜ್ಯೋತಿ ಎಂಬುದು ನಿನ್ನಿಂದ ನಿನಗೆ ವಿದಿತವಾಗಿ ನಡೆ ನಷ್ಟ ,ನುಡಿ ನಷ್ಟ , ಭಾವ ನಷ,್ಟ ನೆನಹು ನಷ್ಟ ಮರವು ಅರುವೆಂಬ ಜ್ಞಾನ ಇವೆಲ್ಲವು ಮುಕ್ತಾಯವಾದವೆಂದು ನಿನ್ನಿಂದ ನಿನಗೆ ಸಿದ್ಧವಾಗುವದು. ಆಗ ಅರಿಯಲಿಲ್ಲದ ಅರುವೆ ನಿನ್ನಿರುವಾಗಿ ದೃಢ ತರವಾದುದೆ ಅದೀಗ ನಿನ್ನ ಪರಿಪೂರ್ಣತ್ವದ ನೆಲೆ.
ಆ ನಿನ್ನ ನಿಜವ ನಿಶ್ಚೈಸಿ ನಿರ್ಗಮನಿಯಾದಲ್ಲಿ ಅದೆ ನಿನ್ನ ಸಮ್ಯಜ್ಞಾನದ ತೋರಿಕೆ ಆವುದು ವರ್ಣನೆಗೆ ನಿಲುಕದ ಘನ ಅದುವೆ ನಿನ್ನಯ ನಿಜವು. ಆವುದು ತೋರಬಾ ರದ ಘನ ಅದುವೆ ನಿನ್ನಯ ಸ್ವರೂಪ. ಅದುವೆ ನಿನ್ನಯ ನಿರ್ವಾಣ. ಅದುವೆ ಶಬ್ದ ಮುಗ್ದ ನಿಲುವು. ಇದು ನೆಲೆಯಿಲ್ಲದ ನಿಲುವು, ನಿನ್ನಯ ನಿಜಧಾಮವಾದುದು. ನಿನ್ನಿಂದ ನಿನಗೆ ವಿಧಿತವಾಗಿ ಮನದ ಕಾರ್ಯ ಇತಿಯಾದುದು.
ಅದು ಉಪಾಧಿಕ ಮನವಿರಲಿ, ಉಪಾಧಿರಹಿತ ಮನವಿರಲಿ ಇವೆರಡು ಕಾರ್ಯದಿಂದ ವಿಮುಖವಾದಲ್ಲಿ ಆ ನಿನ್ನ ನಿಜ ನಿಶ್ಚೈಸಿ ನಿರ್ಗಮನಿಯಾದುದು. ಅದು ಸಮ್ಯಜ್ಞಾನದ ತೋರಿಕೆ. ನಿನ್ನದು ತೋರಬಾರದ ಘನದಿರುವು. ನಿಶ್ಚಯ ವಾಗಿ ನಿನ್ನಿಂದ ನಿನಗೆ ಹೇಳಲು ಬಾರದಂತಾದುದೆ ಆ ನಿನ್ನ ನಿಜವ ನಿಶ್ಚೈಸಿ ನಿರ್ಗ ಮನಿಯಾದುದು ಎಂದು ತಿಳಿವುದು. ಅದುವೆ ಸಮ್ಯಜ್ಞಾನದ ತೋರಿಕೆ. ಇದು ತಾನಾರೆಂಬ ತನ್ನಿರುವಿನ ತೋರಿಕೆ ಇದು ತಾನೆ ತಾನಾದ ತೋರಿಕೆ ತೋರಬಾರದ ಘನವಾಗಿಹ ಇರುವು. ನಿಸ್ಸೀಮವು ಅಪಾರವಾಗುವದರಿಂದ ಅಖಂಡ ಬೆಳಗಿನ ಹೊಳಹಿನೊಳಗೆ ನಮ್ಮ ಗುಹೇಶ್ವರ ಲಿಂಗದ ಶ್ರೀಚರಣವ ಸ್ಮರಿಸಿಕೊಂಡು ನಿಶ್ಚಿಂತ ವಾಗಿರು ಮನವೆ.
ಅಖಂಡ ಬೆಳಗಿನ ಬೆಳಗು ಇದು ತನ್ನಯ ಬೆಳಗುಳ್ಳ ಬೆಳಗು. ಇಲ್ಲಿ ಹಮ್ಮು ಇಲ್ಲ ಗಿಮ್ಮು ಇಲ್ಲ, ನಾನೆಂಬುದಿಲ್ಲ, ನೀನೆಂಬುದಿಲ್ಲ, ಅಹುದಾದುದಿಲ್ಲ, ಅಲ್ಲಾದು ದಿಲ್ಲ. ಎರಡೆಂಬುದಿಲ್ಲ, ಒಂದೆಂಬುದಿಲ್ಲ ಅರಿಸಿಕೊಳ್ಳುವದಿಲ್ಲ, ಅರಿವುದು ಇಲ್ಲ ,ಇಲ್ಲವೆಂಬುದು, ಇಲ್ಲವಾಗಿ ತನ್ನಿರುವು ಘನಕ್ಕೆ ಘನ, ಅಖಂಡ ಬೆಳಗಿನ ಹೊಳಹು ಇದುವೆ ಗುಹೇಶ್ವರ.
ಲಿಂಗ ಪೂರ್ಣಾತ್ ಪೂರ್ಣವಾದುದು. ಇದು ಪೂಜೆಗೆ ಬಾರದ ಲಿಂಗ, ಇದು ಕಾಣಿಸಿಕೊಳ್ಳದ ಲಿಂಗ. ಅರಸಲು ಬಾರದ ಲಿಂಗ .ಭಾವಕ್ಕಿಂಬುಕೊಡದ ಲಿಂಗ.ಅಚಿಂತ್ಯ ಲಿಂಗ. ಈ ಅಚಿಂತ್ಯದಿರುವಿನ ಅರುವೆ ಮಹದರಿವು. ಈ ಅರಿವೆ ಗುಹೇಶ್ವರ ಲಿಂಗದ ಶ್ರೀಚರಣ.
ಇದನ್ನು ಸ್ಮರಿಸಿಕೊಂಡು ನಿಶ್ಚಿಂತನಾಗಲೆ ಮನವೆ, ಎ ಮನವೆ ನೀನು ನಿಶ್ಚಿಂತ ನಾಗಬೇಕೆಂದಲ್ಲಿ ಲಿಂಗವಿದು ಪೂಜೆಗೆ ಬಾರದ ಲಿಂಗವೆಂದು ಸ್ಮರಿಸು. ಕಾಣಬಾರದ ಘನವೆಂದು ಸ್ಮರಿಸು. ಚಿಂತಿಸದ ಲಿಂಗ ಚಿಂತನೆಗೆ ನಿಲುಕದ ಲಿಂಗವೆಂದು ಅಚಿಂತ್ಯ ನಾಗು. ಭಾವಕ್ಕಿಂಬುಕೊಡದಲಿಂಗವೆಂದು ಭಾವ ತ್ಯಜಿಸಿ, ಭಾವಕ್ಕಗಮ್ಯನೆಂದು, ಅಚಿಂತ್ಯಾತ್ಮವೆಂದು ಚಿಂತನಗೆ ಮಹತ್ವಕೊಡದಿರು.
ಆಗ ಅಚಿಂತ್ಯಾತ್ಮ ನನ್ನಿರವು ಎಂಬುದು ನಿನ್ನಿಂದ ನಿನಗೆ ಅರಿವು ಆಗುವುದು. ಆಗ ಸ್ವಾಭಾವಿಕಾಗಿ ನಿಶ್ಚಿಂತತ್ವ ಸಿದ್ಧಿಸುವದು. ಇದು ಕಾರಣ ಮನಸ್ಸು ತಾನಾಗ ಬಾರದು. ಸಂಕಲ್ಪ ವಿಕಲ್ಪಕ್ಕೆ ಸೇರದವನಾಗಿ ಮನಸ್ಸಿಗೆ ಭೋಧಿಸುವವನಾಗಬೇಕು. ಮನದ ಪೂರ್ವಾಶ್ರಯ ಕೆಡಬೇಕು. ಅದು ಇತಿ ಆದ ನಿಲುವೆ ಮುಕ್ತಿ. ಅರ್ಥಾತ್ ತನ್ನಯ ಇರವು ನಿಜದ ಅರಿವು. ಅದು ಗುಹೇಶ್ವರಲಿಂಗ ತಾನು ಎಂದು ಹೇಳಿಹರು.'