9/18/2019

ಜ್ಞಾನ ಮಂಟಪ ವಿವರ ಪುಟ

ಅರಿವಿನ ಪರಿಮಳ 14 ಸಿದ್ಧರಾಮ ಶಿವಯೋಗಿಗಳ ವಚನಾನುಭವ ಬಸವರಾಜ ಸ್ವಾಮಿ

Font size -16+

'ಅಂಜನನದಗಿರಿ ರಂಜಿಸುತ್ತಿರೆ ಆಯತವಿಡಿದು ಸುಖ ಕಂಡು
ಅನುಭವದವಳಿಗೆ ಅಂಜನವರ್ಣವನೇಕೀಕರಿಸಿ ನೋಡಲು
ಅನುವಾಯಿತ್ತಯ್ಯಾ ಅಂಜನದ ಹತ್ತೆಸಳ ಪೀಠ.
ಆ ಪೀಠದಲ್ಲಿ ಭೃತ್ಯನೆಂಬವ ನಿಂದು ಲಿಂಗವಿಡಿದು ನಡೆಯೆ
ಉರಿ ನಂದಿ ನೆಲೆಗೊಂಡನಯ್ಯಾ ನಿಮ್ಮ ಶರಣ ಚೆನ್ನ ಬಸವಣ್ಣನು.
ಕಪಿಲಸಿದ್ಧ ಮಲ್ಲಿನಾಥಯ್ಯಾ, ಚೆನ್ನಬಸವಣ್ಣನಿಂದ ಬದುಕಿದೆನು.

ಅಂಗವೆಂಬುದು ಅಂಜನವುಳ್ಳಗಿರಿ.ಅದು ಅರಿವಿನಿಂದ ರಂಜಿಸುತ್ತಲಿದೆ. ಅದರ ಆಯತವಿಡಿದು ಅರಿವಿನ ಸುಖ ಕಾಣಬೇಕಿದೆ. ಅಂಗವನ್ನು ಆವರಿಸಿದ ಮನವೆಂಬ ಸಖಿ ಅಂಗದಲ್ಲಿ ಸಂಗಮವಾದ ಅಂಜನವನ್ನು ಏಕೀಕರಿಸಿ ನೋಡಲು ಅದು ಹತ್ತೆಸಳ ಪೀಠವಾಗಿ ಗೋಚರಿಸಿತು.
ಶ್ವಾಸೋಚ್ಛ್ವಾಸದ ಮೂಲಕ ಅನ್ನವನ್ನು ಜೀರ್ಣಗೊಳಿಸುವ ಪ್ರಾಣದ ಹೃದಯಸ್ಥಾನ ಒಂದು ಪ್ರಮುಖ ಎಸಳಾಗಿ ಗೋಚರಿಸಿತು.
ಉಂಡುದೆಲ್ಲವನ್ನೂ ಸಕಲ ಸಸ್ಯಕಾಸಿಗಳಿಗಾಗಿ ಪ್ರಾಣಿ ಕ್ರಿಮಿಕೀಟಗಳಿಗಾಗಿ ಅಮೃತ ರೂಪದಲ್ಲಿ ಹೊರ ಹಾಕುವ ದಿವ್ಯಾಂಗವೊಂದು ಗುದಸ್ಥಾನದ ರೂಪವಾಗಿ ಗೋಚರಿಸಿತು. ಅದು ಅಪಾನವೆಂಬ ಎರಡೆಸಳಾಗಿ ಗೋಚರಿಸಿತು.
ಸರ್ವಾಂಗದಲ್ಲಿ ಚಲನೆ ಉಂಟು ಮಾಡುವ ವ್ಯಾನ ಎಂದು ಹೆಸರಿಟ್ಟುಕೊಂಡು ಮೂರೆಸಳಿನ ಕಾರ್ಯ ಗೋಚರಿಸಿತು.
ಕಂಠದ ಮೂಲಕ ಕೆಮ್ಮು ಬಿಕ್ಕಳಿಕೆ ಉದ್ಘಾರ ಮುಂತಾದ ಕಾರ್ಯ ನಿರ್ವಹಿಸುವ ಉದಾನ ವೆಂಬ ಹೆಸರುಳ್ಳ ನಾಲ್ಕೆಸಳಿನ ಹೆಸರಿಟ್ಟು ಕೊಂಡು ಅಂಗದಲ್ಲಿಯೇ ಗೋಚರಿಸಿತು.
ನಾಭಿ ಸ್ಥಾನದ ಮೂಲಕ ಅನ್ನರಸವನ್ನು ಸರ್ವಾಂಗಗಳಿಗೆ ತಲುಪಿಸುವ‘ ಸಮಾನ’ ವೆಂಬ ಐದೆಸಳಿನ ಹೆಸರು ಕೂಡಾ ಅಂಗದಲ್ಲಿಯೇ ಪ್ರಕಟವಾಯಿತು. ಈ ಐದೆಸಳುಗಳು ಮುಖ್ಯ ಪ್ರಾಣವೆಂದು ಕರೆಯಿಸಿಕೊಂಡವು.
ಉಪ ಪ್ರಾಣಗಳಾಗಿ ಅಂಗದಲ್ಲಿಯೇ ನಾಗ, ಕೂರ್ಮ, ಕೃಕರ, ದೇವದತ್ತ, ಧನಂಜಯವೆಂದು ಮತ್ತೆ ಐದೆಸಳುಗಳ ಮೂಲಕ ಅಂಗದಲ್ಲಿ ಪ್ರಕಟವಾದವು.
ನಾಗ: ರೋಮಗಳ ಮೂಲಕ ದುಃಖ, ಬೆವರು ಮುಂತಾದವುಗಳನ್ನುಂಟು ಮಾಡಿದರೆ ಕೂರ್ಮದ ಮೂಲಕ ಮುಖದ ಚಲನವಲನಗಳು ಪ್ರಕಟವಾದವು. ಕೃಕರದ ಮೂಲಕ ಮೂಗಿನ ದ್ರವ ವಾಸನೆ ಮುಂತಾದ ಕೆಲಸಗಳನ್ನು ನೆರವೇರಿಸಿತು. ದೇವದತ್ತ ಗುಹ್ಯ ಕಟ್ಟಿ ಸ್ಥಾನ ಏಳುವ ಕುಳಿತು ಕೊಳ್ಳುವ ಚಟುವಟಿಕೆಗಳನ್ನು ನೆರವೇರಿಸಿತು. ಧನಂಜಯ ಬ್ರಹ್ಮರಂಧ್ರದ ಮೂಲಕ ಕಿವಿಯಲ್ಲಿ ಶಬ್ದವನ್ನುಂಟು ಮಾಡಿ ಮರಣ ಕಾಲಕ್ಕೆ ನಿಶ್ಯಬ್ದವಾಯಿತು. ಹೀಗೆ ಅಂಗ ಸಿದ್ಧರಾಮ ಶಿವಯೋಗಿಗಳಿಂದ ಹತ್ತೆಸಳಿನ ಪೀಠವೆಂದು ಹೆಸರು ಪಡೆಯಿತು.
ಹತ್ತೆಸಳಿನ ಈ ಪೀಠದಲ್ಲಿ ಭೃತ್ಯನೆಂಬ ಸೇವಕನು ಲಿಂಗವಿಡಿದು ನಡೆಯೆ ಬೆಳಗಿಂಗೆ ಬೆಳಗಾಗಿ ಬೆಳಗುವ ಚೆನ್ನಬಸವಣ್ಣನೆಂಬ ಶರಣನು ನೆಲೆಗೊಂಡನು. ಭೃತ್ಯನೇ ಚೆನ್ನ ಬಸವಣ್ಣನಾದನು.
ಕಪಿಲಸಿದ್ಧ ಮಲ್ಲಿನಾಥಯ್ಯ, ಚೆನ್ನಬಸವಣ್ಣನಿಂದ ಬದುಕಿದೆನು:
ಬಸವಣ್ಣನೆಂಬ ಬೆಳಗಿಂಗೆ ಬೆಳಗಾಗಿ ಬೆಳಗುವ ಬೆಳಕಿನಿಂದ ಸೇವಕನೇ ಚೆನ್ನಬಸವಣ್ಣನಾಗಿ ಹುಟ್ಟಿದನು. ಆತನ ಕರುಣೆಯ ಕೂಸು ನಾನು ಎಂದು ಸ್ಪಷ್ಟಪಡಿಸಿದ್ದಾರೆ ಸಿದ್ಧರಾಮ ಶಿವಯೋಗಿಗಳು.'