9/18/2019

ಜ್ಞಾನ ಮಂಟಪ ವಿವರ ಪುಟ

ಅನುಕಂಪದ ನೇಮಕಾತಿಗೆ ಹೆಂಡತಿ ಮಕ್ಕಳಿಗೆ ಹಕ್ಕುಂಟು, ಆದರೆ ದತ್ತಕ ಮಕ್ಕಳಿಗೆ? ಕಾನೂನು ಪ್ರಪಂಚ ಎನ್.ಚಂದ್ರಶೇಖರಯ್ಯ ನ್ಯಾಯವಾದಿ, ರಾಯಚೂರು - ಕರ್ನಾಟಕ ಉಚ್ಚ ನ್ಯಾಯಾಲಯ,ಕಲಬುರಗಿ ಪೀಠ. 9481208220

Font size -16+

'
ಸರ್ಕಾರಿ ನೌಕರರಿಗೆ ಹಲವು ರೀತಿಯ ಸೌಲತ್ತುಗಳನ್ನು ಒದಗಿಸಲಾಗಿದೆ. ಅವರು ಕೆಲಸ ಮಾಡುತ್ತಿರುವಾಗಲೇ ಮೃತರಾದರೆ, ಅಥವಾ ಕೆಲಸ ಮಾಡುತ್ತಿರುವಾಗ ಅನಾರೋಗ್ಯದಿಂದ ಕೆಲಸ ನಿರ್ವಹಿಸದಂತಾದರೆ, ಮೃತ ಸರಕಾರಿ ನೌಕರರ ಮೇಲೆ ಅವಲಂಬಿತ ಕುಟುಂಬದ ಸದಸ್ಯರಿಗೆ ಮತ್ತು ಅನಾರೋಗ್ಯಕ್ಕೆ ತುತ್ತಾದ ನೌಕರರ ಅವಲಂಬಿತರಿಗೆ ಅನುಕಂಪದ ಆಧಾರದ ಮೇಲೆ ನೇಮಕ ಮಾಡಲು ನಿಯಮಗಳಲ್ಲಿ ವ್ಯವಸ್ಥೆ ಮಾಡಲಾಗಿದೆ.
ಒಬ್ಬ ಸರಕಾರಿ ನೌಕರ ಸೇವೆಯಲ್ಲಿರುವಾಗಲೇ ಮೃತನಾದರೆ ಅನುಕಂಪದ ಆಧಾರದ ಮೇಲೆ ನೇಮಕಾತಿಗಾಗಿ ನ್ಯಾಯಾಲಗಳಲ್ಲಿ ಮೊಕದ್ದಮೆಗಳು ಹುಟ್ಟಿಕೊಳ್ಳುತ್ತವೆ. ಇದರಲ್ಲಿ ಹೆಚ್ಚಾಗಿ ವಿವಾದ ಹುಟ್ಟಿಕೊಳ್ಳುವುದು ಮೃತನ ಇಬ್ಬರು ಹೆಂಡಿರ ಮಧ್ಯೆ ಅನುಕಂಪದ ಆಧಾರದ ಮೇಲೆ ನಾನು ಅರ್ಹಳು ತಾನು ಅರ್ಹಳು ಎಂಬ ವಿವಾದ, ಇದಾದ ಮೇಲೆ ಆ ಇಬ್ಬರು ಹೆಂಡಂದಿರ ಮಕ್ಕಳ ನಡುವೆ ವಿವಾದ. ಮೃತ ನೌಕರರು ಜೀವಂತವಿದ್ದಾಗ ಅವರ ಹೆಂಡತಿಯ ಬದಲು ಎರಡನೇ ಹೆಂಡತಿ ಮತ್ತು ಆಕೆಯ ಮಕ್ಕಳ ಹೆಸರುಗಳನ್ನು ನಾಮ ನಿರ್ದೇಶನ ಮಾಡಿ ಸೇವಾ ದಾಖಲೆಗಳಲ್ಲಿ ಬರೆಸಿಬಿಟ್ಟಿರುತ್ತಾರೆ. ಇದಕ್ಕೆ ಕೌಟುಂಬಿಕ ಕಾರಣಗಳು ಇಲ್ಲದೇ ಇರುವುದಿಲ್ಲ. ಆದರೆ ಇದರಿಂದ ನೌಕರರು ಮರಣದ ನಂತರ ವಿವಾದಗಳು ಹಟ್ಟುವುದಂತೂ ಸತ್ಯ.
ಕೆಲವೊಮ್ಮೆ ಸರಕಾರಿ ನೌಕರರ ದತ್ತಕ ಮಕ್ಕಳು ಅನುಕಂಪದ ಆಧಾರದ ಮೇಲೆ ನೇಮಕಾತಿ ಕೇಳಿದಾಗ ವಿವಾದಗಳು ಹುಟ್ಟುಕೊಳ್ಳುತ್ತವೆ. ದತ್ತು ಮಕ್ಕಳು ಸಹ ಅನುಕಂಪದ ಆಧಾರದ ಮೇಲೆ ನೇಮಕಾತಿಗೆ ಅರ್ಹರೇ ಎಂಬ ಪ್ರಶ್ನೆ ಕರ್ನಾಟಕ ಉಚ್ಛ ನ್ಯಾಯಾಲಯದಲ್ಲಿ ಉದ್ಭವಿಸಿ ಕಳೆದ ವಾರ ಇತ್ಯರ್ಥವಾಗಿದೆ.
ಸರ್ವೆ ಸೆಟ್ಲಮೆಂಟ್ ಮತ್ತು ಭೂ ದಾಖಲೆಗಳ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆಯೊಬ್ಬಳು ಕೆಲಸ ಮಾಡುತ್ತಿರುವಾಗಲೇ ಮೃತಪಟ್ಟಳು. ಅವರ 41 ವರ್ಷದ ದತ್ತು ಮಗ ಅನುಕಂಪದ ಆಧಾರದ ಮೇಲೆ ನೇಮಕಾತಿಗಾಗಿ ಅರ್ಜಿ ಸಲ್ಲಿಸಿದನು. ಆತನ ಅರ್ಜಿಯನ್ನು ಇಲಾಖೆ ಪರಿಗಣಿಸಲು ನಿರಾಕರಿಸಿತು. ಅದರಿಂದ ನೊಂದ ಅರ್ಜಿದಾರನು ಕರ್ನಾಟಕ ಆಡಳಿತ ನ್ಯಾಯಮಂಡಳಿಗೆ ಅರ್ಜಿ ಸಲ್ಲಿಸಿದನು. ಕರ್ನಾಟಕ ಆಡಳಿತ ನ್ಯಾಯ ಮಂಡಳಿಯೂ ಆತನ ಅರ್ಜಿಯನ್ನು ವಜಾಮಾಡಿತು. ಅದರಿಂದ ನೊಂದ ಆತನು ಕರ್ನಾಟಕ ಉಚ್ಛ ನ್ಯಾಯಾಲಯದ ಮೊರೆ ಹೋದನು. ಮೃತ ಸರಕಾರಿ ನೌಕರನ ದತ್ತು ಮಗನು ಕರ್ನಾಟಕ ಸಿವಿಲ್ ಸೇವೆಗಳ (ಅನುಕಂಪದ ಆಧಾರದ ಮೇಲೆ ನೇಮಕಾತಿ) ನಿಯಮಗಳ ಅಡಿಯಲ್ಲಿ ನೇಮಕಾತಿಗೆ ಅರ್ಹರೆ? ಎಂಬ ಪ್ರಶ್ನೆ ನ್ಯಾಯಾಲಯದ ಮುಂದೆ ಉದ್ಭವಿಸಿತು.
ಅನುಕಂಪದ ನೇಮಕಾತಿ ನಿಯಮಗಳ ನಿಯಮ 2(1) (ಚಿ) ಪ್ರಕಾರ ಮೃತ ಸರಕಾರಿ ನೌಕರನ ಅವಲಂಬಿತ ಎಂದರೆ ಮೃತ ಮಹಿಳಾ ಸರಕಾರಿ ನೌಕರರ ವಿಷಯದಲ್ಲಿ ಆಕೆಯ (ಮೃತಳ) ಗಂಡ, ಆಕೆಯ ಮಗ, ಆಕೆಯ ಅವಿವಾಹಿತ ಮಗಳು ಮತ್ತು ಆಕೆಯ ಗಂಡ ಸತ್ತ ಮಗಳು, ಅವರುಗಳು. ಮೃತಳು ಜೀವಿಸುತ್ತಿದ್ದಾಗ ಆಕೆಯ ಮೇಲೆ ಅವಲಂಬಿತರಿದ್ದು ಆಕೆಯ ಜೊತೆಗೆ ಇರುತ್ತಿದ್ದರೆ ಅನುಕಂಪದ ನೇಮಕಾತಿಗೆ ಅರ್ಹರು ಎಂದು ಹೇಳುವ ನಿಯಮವನ್ನು ಉಲ್ಲೇಖಿಸುತ್ತ ತೀರ್ಪು ನೀಡಲು ಮುಂದಾಯಿತು.
ಸದರಿ ನಿಯಮಾವಳಿಗಳ ನಿಯಮ 3ರ ಖಂಡ 3 ಮೃತ ಸರಕಾರಿ ನೌಕರನ ದತ್ತು ಮಗ ಅಥವಾ ಮಗಳು ಈ ನಿಯಮಗಳ ಅಡಿಯಲ್ಲಿ ನೇಮಕಾತಿಗೆ ಅರ್ಹರಲ್ಲ ಎಂದು ಹೇಳುತ್ತದೆ ಎಂಬುದನ್ನು ಗಮನಿಸಿದ ಉಚ್ಛ ನ್ಯಾಯಾಲಯವು ಸದರಿ ನಿಯಮಗಳ ನಿಯಮ 2(1) (ಚಿ) ರಲ್ಲಿ ಉಲ್ಲೇಖಿಸಲ್ಪಟ್ಟ ಮಗ ಶಬ್ದವು ಮೃತನಿಗೆ ಹುಟ್ಟಿದ ಜೀವಶಾಸ್ತ್ರೀಯ ಮಗನನ್ನು ಒಳಗೊಳ್ಳುತ್ತದೆ.
ಆದರೆ ಆತನ ಅಥವಾ ಅವಳ ದತ್ತು ಮಗನಲ್ಲ ಎಂದು ಹೇಳಿದ ನಾಯಾಲಯ ಕರ್ನಾಟಕ ಆಡಳಿತ ನ್ಯಾಯ ಮಂಡಳಿಯ ಆದೇಶದಲ್ಲಿ ಯಾವ ತಪ್ಪೂ ಇಲ್ಲ ಎಂದು ಹೇಳುತ್ತ ಅರ್ಜಿದಾರನ ಅರ್ಜಿಯನ್ನು ವಜಾ ಮಾಡಿತು.
'