2/22/2018

ಜ್ಞಾನ ಮಂಟಪ ವಿವರ ಪುಟ

ಹೈದ್ರಾಬಾದ ಹೋರಾಟ ಇತಿಹಾಸ : ಒಂದು ಆರಂಭಿಕ ಹೆಜ್ಜೆ

Font size -16+

'ಹೈದ್ರಾಬಾದ ರಾಜ್ಯ ವಿಮೋಚನೆ ಅಥವಾ ಹೈದ್ರಾಬಾದ ರಾಜ್ಯ ಭಾರತದ ಒಕ್ಕೂಟದ ವಿಲೀನಕರಣ ಸಂಬಂಧ ಐತಿಹಾಸಿಕ ಮಹತ್ವದ ಹೋರಾಟದ ಇತಿಹಾಸ ರಚನೆಯಾಗಬೇಕೆಂಬ ಬೇಡಿಕೆ ಒಂದು ರೀತಿಯಲ್ಲಿ ಅರಣ್ಯರೋಧನವಾಗಿದೆ. ಅದು ಒಂದು ಅಸಹಾಯಕ ಕೂಗು ಕೂಡ. ಇತಿಹಾಸ, ಚರಿತ್ರೆ,ಪರಂಪರೆ,ಇತ್ಯಾದಿಗಳ ಬಗ್ಗೆ ಅರಿವು ಇಲ್ಲದ ಸಮಾಜ ಮತ್ತು ಇಂತಹ ಮಹತ್ವದ ವಿಷಯಗಳಲ್ಲಿ ಸಾಮಾನ್ಯವಾಗಿ ಇರುವಂತಹ ರಾಜಕೀಯ ಅನಾಸಕ್ತಿಯೋ ಇಂತಹ ಮಹತ್ ಕಾರ‌್ಯದ ಸಾಧನೆಯಲ್ಲಿ ತೀವ್ರವಾದ ಅಡ್ಡಿ-ಆತಂಕಗಳನ್ನು ಉಂಟು ಮಾಡುತ್ತವೆ. ಅದು ಹೇಗೆ ಆರಂಭಿಸಬೇಕು, ಯಾರು,ಎಲ್ಲಿಂದ ಮತ್ತು ಸ್ವಾತಂತ್ರ್ಯ ಸಂಗ್ರಾಮ ಇತಿಹಾಸದಲ್ಲಿಯೇ ಅತ್ಯಂತ ತುಮುಲುಯುಕ್ತದ್ದೆಂದು ಹೇಳಲಾದ ಹೈದ್ರಾಬಾದ ಹೋರಾಟ ಕೊನೆಗೊಂಡು ಏಳು ದಶಕಗಳಾಗುತ್ತ ಬಂದಿದ್ದರೂ ಹೋರಾಟದ ಇತಿಹಾಸ ಬರೆಯಬೇಕೆಂಬ ಅವಶ್ಯಕತೆ ಕಂಡು ಬಾರದಿರುವುದು ಈ ನಾಡಿನ ಸಾಂಸ್ಕೃತಿಕ ಜಡತ್ವಕ್ಕೆ ಒಂದು ದಿವ್ಯ ನಿದರ್ಶನ ಎಂದು ಅತ್ಯಂತ ವ್ಯಾಕುಲತೆಯಿಂದ ಹೇಳಬೇಕಾಗುತ್ತದೆ. ಈ ಹೋರಾಟದಲ್ಲಿ ಭಾಗವಹಿಸಿದವರ ಪೈಕಿ ಕೆಲವರು ಈಗಾಗಲೇ ಸ್ವರ್ಗವಾಸಿಗಳಾಗಿದ್ದು ಇನ್ನೂ ಕೆಲವರು ತೊಂಭತ್ತರ ಆಸುಪಾಸಿನಲ್ಲಿದ್ದಾರೆ. ವಿದ್ಯಾ ಧರ ಗುರೂಜಿಯವರಂತಹ ಕೆಲವೇ ಕೆಲವು ಶತಾಯುಷಿಗಳೂ ಇದ್ದಿರಬಹುದು. ಅವರೆಲ್ಲ ಇನ್ನೂ ತಮ್ಮ ಅನುಭವಗಳನ್ನು ನೆನಪಿನ ಗಣಿಯ ಆಳದಿಂದ ಕೆದಕಿ ಹೇಳಬಲ್ಲವರಾಗಿದ್ದಾರೆ. ಅದೆಲ್ಲವನ್ನು ಅವರ ಧ್ವನಿಯಲ್ಲಿಯೇ ಮುದ್ರಿಸಿಕೊಳ್ಳುವ ಪ್ರಾಯಃ ಕೊನೆಯ ಸುವರ್ಣ ಅವಕಾಶ ಇನ್ನೂ ಇದೆ.
ಕೆಲವೇ ಕೆಲವು ಹೋರಾಟಗಾರರ ಕುರಿತು ಅಲ್ಲಲ್ಲಿ ಲೇಖನಗಳು ಪ್ರಕಟವಾಗಿದಿದ್ದರ ಬಹುದು. ಕೆಲವರ ಬಗ್ಗೆ ಪುಸ್ತಕಗಳನ್ನು ಬರೆದಿರಬಹುದು. ಇನ್ನೂ ಕೆಲವರ ಬಗ್ಗೆ ಅಭಿನಂದನ ಗ್ರಂಥಗಳನ್ನು ಅಥವಾ ಕೆಲವು ಸಕಾಲಿಕ ಗ್ರಂಥಗಳನ್ನು ಪ್ರಕಟಿಸಿರಬಹುದು. ಇವೆಲ್ಲವುಗಳಿಂದ ಅಲ್ಲಲ್ಲಿ ಸ್ವಲ್ಪ ಮಟ್ಟಿಗೆ ಹೋರಾಟದ ಸ್ವರೂಪದ ಪರಿಚಯ ಆಗಲು ಸಾಧ್ಯ. ಆದರೆ ಒಂದು ಸಾಂಸ್ಕೃತಿಕ ನೆಲೆಯಲ್ಲಿ,ಅದೂ ಸರಕಾರಿ ಕ್ಷೇತ್ರದಲ್ಲಾಗಿರಬಹುದು ಅಥವಾ ಸರಕಾರೇತರ ಕ್ಷೇತ್ರ ದಲ್ಲಾಗಿರಬಹುದು, ಸಮಗ್ರ ನೆಲೆಯಲ್ಲಿ ಹೋರಾಟದ ಇತಿಹಾಸವನ್ನು ದಾಖಲಿಸುವ ಕಾರ‌್ಯ ನಡೆದೇ ಇಲ್ಲ. ಒಟ್ಟು ಹೈದ್ರಾಬಾದ ಹೋರಾಟದ ಸಂದರ್ಭದಲ್ಲಿ ಅಂತಹ ಒಂದು ಏಕೈಕ ಪ್ರಯತ್ನ ಹೈದ್ರಾಬಾದಿನಲ್ಲಿರುವ ಸ್ವಾಮಿ ರಾಮಾನಂದ ತೀರ್ಥ ಸ್ಮಾರಕ ಸಮಿತಿಯಿಂದ ನಡೆದಿ ದ್ದು,ಬೃಹತ್ ಗ್ರಂಥದ ಸ್ವರೂಪದಲ್ಲಿದೆ. ಅದುವೇ ಕನ್ನಡಿಗ ಶ್ರೀ ವಿ.ಎಚ್.ದೇಸಾಯಿ ಮತ್ತು ಶ್ರೀ ಸಿ.ಸುದರ್ಶನ ಅವರು ಜಂಟಿಯಾಗಿ ಬರೆದಿರುವ ಗ್ರಂಥ ೞಛಿ ಖಜಛಿ ಟ್ಛ ಏಛ್ಟಿಚಿ ್ಝಜಿಚಿಛ್ಟಿಠಿಜಿಟ್ಞ ಠ್ಟ್ಠಿಜಜ್ಝಛಿ ಜ್ಞಿ ಐ್ಞಜಿೞ ಊ್ಟಛಿಛಿಟಞ ಟಛಿಞಛ್ಞಿಠಿೞ.
ಹೈದ್ರಾಬಾದ ನಿಜಾಂ ಸಂಸ್ಥಾನದ ಒಂದು ಅವಿಭಾಜ್ಯ ಅಂಗವಾಗಿದ್ದ ಬೀದರ, ಗುಲ್ಬರ್ಗಾ, ರಾಯಚೂರು ಜಿಲ್ಲೆಗಳನ್ನೊಳಗೊಂಡ ಇಂದಿನ ಕರ್ನಾಟಕ ಭೌಗೊಳಿಕ ಪ್ರದೇಶದ ಹೋರಾಟದ ರೋಚಕ ಇತಿಹಾಸವನ್ನು ಹತ್ತಾರು ಸಂಪುಟಗಳಲ್ಲಿ ಸಚಿತ್ರವಾಗಿ ದಾಖಲಿಸಬೇಕಾದ ಜರೂರು ಅಗತ್ಯ ಇಂದು ಕಂಡು ಬರುತ್ತಿದೆ. ಈ ಇತಿಹಾಸ ಕುರಿತಾದ ವಿಷಯವನ್ನು ಶಾಲಾ-ಕಾಲೇಜು ಪಠ್ಯಕ್ರಮದಲ್ಲಿ ಅಳವಡಿಸಬೇಕಾದ ಅಗತ್ಯವೂ ಅಷ್ಟೇ ತುರ್ತಾಗಿ ಇದೆ. ಸಹಸ್ರಾರು ಜನರ ಪ್ರಾಣ ತ್ಯಾಗ,ಬಲಿದಾನದ ಮೂಲಕ ಸಾಧ್ಯವಾದದ್ದು ಹೈದ್ರಾಬಾದ ವಿಮೋಚನೆ. ಈಗ ಭಾಷಾ ವಾರು ಪ್ರಾಂತಗಳ ರಚನೆಯಾಗಿರುವುದರಿಂದ ಅಂದಿನ ನಿಜಾಂ ಕರ್ನಾಟಕದ ಪ್ರದೇಶದ ಅರ್ಥಾತ್ ಇಂದಿಗೂ ಹೈದ್ರಾಬಾದ ಕರ್ನಾಟಕ ಪ್ರದೇಶ ಎಂದು ಕರೆಯಲ್ಪಡುವ ಭಾಗದ ಇತಿಹಾಸ ಹೋರಾಟದ ರಚನೆಯ ಜವಾಬ್ದಾರಿ ಸಹಜವಾಗಿಯೇ ಕರ್ನಾಟಕ ಸರಕಾರದ್ದು ಆಗಿರುತ್ತದೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಇರುವುದೇ ಈ ಉದ್ದೇಶಕ್ಕಾಗಿ. ವಚನ ಸಾಹಿತ್ಯ ಮತ್ತು ಹರಿದಾಸ ಸಾಹಿತ್ಯದ ಸಮಗ್ರ ಸಂಪುಟಗಳನ್ನು ಪ್ರಕಟಿಸಿದ ಮಹತ್ವದ ಶ್ಲಾಘನೀಯ ಕಾರ‌್ಯ ಮಾಡಿರುವ ಇಲಾಖೆ ಹೈದ್ರಾಬಾದ ಹೋರಾಟ ಇತಿಹಾಸದ ಸಮಗ್ರ ಸಂಪುಟಗಳನ್ನು ಪ್ರಕಟಿಸುವ ಕಾರ‌್ಯಕ್ಕೆ ಮುಂದಾದರೆ ಅದರ ಕೀರ್ತಿ ಕಳಶಪ್ರಾಯವಾದೀತು.
ಆದರೆ, ಅಂತಹ ಕಾರ‌್ಯವನ್ನು ಸ್ವಪ್ರೇರಣೆಯಿಂದ ಮಾಡಲು ಸಾಧ್ಯವೇನು ? ಈ ಸಂಬಂಧದ ನಿರ್ಧಾರ ಮೂಲತಃ ರಾಜಕೀಯ ಸ್ವರೂಪದ್ದಾಗಿರು ವುದರಿಂದ ಹೈದ್ರಾಬಾದ ಕರ್ನಾಟಕ ಭಾಗದ ಶಾಸಕರೆಲ್ಲ ಸರಕಾರದ ಮೇಲೆ ರಾಜಕೀಯ ಒತ್ತಡ ತಂದು ಆಗ್ರಹಿಸುವುದು ಅವರ ಕರ್ತವ್ಯವೆನಿಸುತ್ತದೆ. ಈ ಕರ್ತವ್ಯವನ್ನು ಅವರಿಗೆ ನೆನಪಿಸುವ ಕಾರ‌್ಯವನ್ನು ಈ ಭಾಗದ ಪ್ರಜ್ಞಾವಂತ ಜನತೆ ಮತ್ತು ಸಂಘ-ಸಂಸ್ಥೆಗಳು ಮಾಡಬೇಕಾಗುತ್ತದೆ. ರಾಜಕೀಯ ನಿರ್ಧಾರ ಒಂದಾದರೆ ಸರಿ ಆರ್ಥಿಕ ಆತಂಕಗಳು ಇರಲಾರವು. ಅಂತಹ ಯಾವುದೇ ಆತಂಕವನ್ನು ನಿವಾರಿಸುವ ಸಾಮರ್ಥ್ಯ ಹೈದ್ರಾಬಾದ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಗೆ ಇದ್ದೇ ಇದೆ ! ಮಂಡಳಿಗೆ ನೀಡಲಾಗುವ ವಾರ್ಷಿಕ ಅನು ದಾನವನ್ನು ಸಿದ್ಧರಾಮಯ್ಯ ಸರಕಾರ ಪ್ರಸಕ್ತ ಆರ್ಥಿಕ ವರ್ಷದಿಂದ ಒಂದು ಸಾವಿರ ಕೋಟಿ ರೂಪಾಯಿಯಿಂದ ಒಂದೂವರೆ ಸಾವಿರ ಕೋಟಿ ರೂಪಾಯಿಗೆ ಹೆಚ್ಚಿಸಿದೆ.
ಅಂದ ಹಾಗೇ ಹೈದ್ರಾಬಾದ ಕರ್ನಾಟಕ ಪ್ರದೇಶದ ಜಿಲ್ಲೆಗಳಿಗಾಗಿಯೇ ಒಂದು ಪ್ರತ್ಯೇಕ ವಿಶ್ವ ವಿದ್ಯಾಲಯ ಗುಲ್ಬರ್ಗಾ ವಿಶ್ವ ವಿದ್ಯಾಲಯ ಸ್ಥಾಪಿಸಲಾಯಿತಲ್ಲವೆ ? ವಿಶ್ವ ವಿದ್ಯಾಲಯ ಸ್ಥಾಪನೆಯಾದ ಮೂರೂವರೆ ದಶಕದ ನಂತರವೂ ವಿಶ್ವ ವಿದ್ಯಾಲಯ ಈ ಕಾರ‌್ಯಕ್ಕೆ ಮುಂದಾ ಗದಿರುವುದು ಅದರ ಸಾಂಸ್ಕೃತಿಕ ಅದರಲ್ಲೂ ಪ್ರಾದೇಶಿಕ ಸಾಂಸ್ಕೃತಿಕ ಹೊಣೆಗೇಡಿತನದ ಪರ ಮಾವಧಿಯಾಗಿದೆ ಎಂದು ಹೇಳಿದರೆ ಅದು ಅತ್ಯಂತ ಸೌಮ್ಯವಾದ ಟೀಕೆಯಾದೀತು. ವಿಶ್ವ ವಿದ್ಯಾಲಯ ಈ ಸಂಬಂಧ ಯೋಜನೆಯೊಂದನ್ನು ಸಿದ್ಧಪಡಿಸಿ ಮಂಡಳಿ ಮೂಲಕ ಸರಕಾರಕ್ಕೆ ಸಲ್ಲಿಸಿದ್ದರೆ ಇತಿಹಾಸ ರಚನೆ ಕಾರ‌್ಯ ಈ ಹೊತ್ತಿಗಾಗಲೇ ಒಂದು ಹಂತ ತಲುಪಬಹುದಿತ್ತು ಆದರೆ ಅದಾವುದನ್ನು ಮಾಡುವ ಗೊಡವೆಗೇ ಅದು ಹೋಗಲಿಲ್ಲ.
ಇಂಗ್ಲೀಷ್‌ನಲ್ಲಿ ಆಛಿಠಿಠಿಛ್ಟಿ ್ಝಠಿಛಿ ಠಿಚ್ಞ ್ಞಛಿಛ್ಟಿ ಎಂಬುದೊಂದು ಸುಂದರ ಮಾತಿದೆ. ಅಂದರೆ, ವಿಳಂ ಬವಾಗಿ ಮಾಡುವುದು ಎಂದೂ ಮಾಡದಿರುವುದಕ್ಕಿಂತ ಉತ್ತಮ ಯಾವ ವಿಳಂಬವೂ ವಿಳಂಬವಾಗಲಾರದು. ಈಗಲೂ ವಿಶ್ವ ವಿದ್ಯಾಲಯಕ್ಕೆ ಕಾಲ ಮಿಂಚಿಲ್ಲ. ಅದು ಮನಸ್ಸು ಮಾಡಬೇಕಷ್ಟೆ.
ಅದೇನೆ ಇರಲಿ,ಗುಲ್ಬರ್ಗಾ ವಿಶ್ವ ವಿದ್ಯಾಲಯ ಹೈದ್ರಾಬಾದ ಕರ್ನಾಟಕ ವಿಮೋಚನಾ ಹೋರಾಟದ ಇತಿಹಾಸ ರಚನಾ ಕಾರ‌್ಯವನ್ನು ಕೈಕೊಳ್ಳದಿದ್ದರೂ ಅದಕ್ಕೆ ಸಂಬಂಧಿಸಿದ ಒಂದು ಕಾರ‌್ಯಕ್ಕೆ ಸ್ಥಾಪನೆಯ 36ನೇ ವಯಸ್ಸಿನಲ್ಲಿ ಕೈಹಾಕಿದೆ ಅಷ್ಟರ ಮಟ್ಟಿಗೆ ಅದು ಪ್ರಾದೇಶಿಕ ಸಾಂಸ್ಕೃತಿಕ ನ್ಯಾಯವನ್ನು ಮಾಡಿದಂತಾಗಿದೆ. ವಿಶ್ವ ವಿದ್ಯಾಲಯದ ಪ್ರಸಾರಾಂಗವು ಕಳೆದ ವರ್ಷ ಅಂದರೆ 2016ರಲ್ಲಿ ‘ಹೈದ್ರಾಬಾದ ಕರ್ನಾಟಕ ವಿಮೋಚನಾ ಹೋರಾಟಗಾರರ ಮಾಲೆ ’ ಎಂಬ ಯೋಜನೆಯನ್ನು ಪ್ರಾರಂಭಿಸಿ ಹೈದ್ರಾಬಾದ ಹೋರಾಟದಲ್ಲಿ ಪಾಲ್ಗೊಂಡ ವೀರ ಯೋಧರ ಜೀವನ ಸಾಹಸಗಾಥೆಯನ್ನು ಪ್ರಕಟಿಸುವ ಕಾರ‌್ಯಕ್ಕೆ ಮುಂದಾಗಿದೆ. ಈಗ ಮೊದಲ ಹಂತದಲ್ಲಿ ಹತ್ತು ಪುಸ್ತಕಗಳನ್ನು ಹೊರ ತಂದಿದೆ. ಈ ಹತ್ತು ಪುಸ್ತಕಗಳ ಪೈಕಿ ಹೈದ್ರಾಬಾದ ವಿಮೋಚನೆಯ ಹರಿಕಾರನೆನಿಸಿದ ಅಪ್ರತಿಮ ಸ್ವಾತಂತ್ರ್ಯ ಹೋರಾಟಗಾರ,ವೀರ ಸನ್ಯಾಸಿ ‘ಸ್ವಾಮಿ ರಾಮಾನಂದ ತೀರ್ಥ’ರ ಕುರಿತಾದ ಇದೇ ಶೀರ್ಷಿಕೆಯ ಗ್ರಂಥವನ್ನು ರಚಿಸುವ ಸೌಭಾಗ್ಯ ನನ್ನದಾಗಿದೆ.
‘‘ ಹೈದ್ರಾಬಾದ ನಿಜಾಮನ ವಿರುದ್ಧ ಹೈದ್ರಾಬಾದ್ ಕರ್ನಾಟಕದ ವಿಮೋಚನಾ ಹೋರಾ ಟಕ್ಕಾಗಿ ಮಡಿದವರು ಅನೇಕರು. ಅಂತಹವರಲ್ಲಿ ಬಹುತೇಕರು ಈಗಲೂ ಬದುಕಿದ್ದಾರೆ. ಅಂತಹವರ ಜೀವನ-ಹೋರಾಟ ಕಥನಗಳು ಒಂದೆಡೆ ದಾಖಲಾಗಬೇಕೆಂಬ ಕಾರಣದಿಂದ ಗುಲ್ಬರ್ಗಾ ವಿಶ್ವ ವಿದ್ಯಾಲಯದ ಪ್ರಸಾರಾಂಗವು ‘‘ ಹೈದ್ರಾಬಾದ ಕರ್ನಾಟಕದ ವಿಮೋಚನಾ ಹೋರಾಟಗಾರರ ಮಾಲೆ ’’ ಎಂಬ ಯೋಜನೆಯನ್ನು ಹಾಕಿಕೊಂಡು ವಿವಿಧ ಲೇಖಕರಿಂದ ಪುಸ್ತಕ ಬರೆಯಿಸಿ ಪ್ರಕಟಿಸುತ್ತಿದೆ. ಇದೊಂದು ಮಹತ್ವದ ಯೋಜನೆಯಾಗಿದೆ ’’ ಹೀಗೆಂದು ಯೋಜನೆಯ ಸಂಪಾದಕರೂ, ಪ್ರಸಾರಾಂಗದ ನಿರ್ದೇಶಕರೂ ಆಗಿರುವ ಎಚ್.ಟಿ.ಪೋತೆ ಹೇಳುತ್ತಾರೆ. ಈ ಮಾಲೆಯಲ್ಲಿ ಇದೀಗ ಹತ್ತು ಪುಸ್ತಕಗಳು ಪ್ರಕಟವಾಗಿವೆ. ಅವುಗಳೆಂದರೆ : ಕಂಸದಲ್ಲಿರುವ ಹೆಸರು ಆಯಾ ಪುಸ್ತಕದ ಲೇಖಕರದ್ದು.
ಸ್ವಾಮಿ ರಾಮಾನಂದ ತೀರ್ಥ (ಶ್ರೀನಿವಾಸ ಸಿರನೂರಕರ್),ವಿದ್ಯಾಧರ ಗುರೂಜಿ (ಎ.ಕೆ. ರಾಮೇಶ್ವರ),ಚಂದ್ರಶೇಖರ ಪಾಟೀಲ್ (ಸಿದ್ಧರಾಮ ಪೊಲೀಸ್ ಪಾಟೀಲ್), ಕೊಳೂರು ಮಲ್ಲಪ್ಪ (ಡಾ.ಬಿದರಿ ಚಂದ್ರಕಲಾ),ಅಗಡಿ ಸಂಗಣ್ಣ (ಶಾಂತಪ್ಪ ಬೂದಿಹಾಳ),ಚನ್ನಬಸಪ್ಪ ಕುಳಗೇರಿ (ಸುಭಾಶ್ಚಂದ್ರ ಕಶಟ್ಟಿ ಬಾಚನಾಳ),ವಿರುಪಾಕ್ಷಪ್ಪಗೌಡ (ಪ್ರಭುಲಿಂಗ ನಿಲೂರೆ), ಮಾಣಿಕ್ಯಪ್ಪ ಜೆ.ಪಾಟೀಲ್ (ಡಾ.ಜೆ.ಸಿ.ನಿಂಗಣ್ಣ ),ಸಂಗನಬಸ್ಸಯ್ಯ (ಕವಿತಾ ಬಿ.ಮಾಸ್ಟರ್ ಯಾಳವಾರ) ಮತ್ತು ಎಚ್.ಟಿ.ಪೋತೆ ಸಂಪಾದಿತ ನಾಲ್ವರು ಹೋರಾಟಗಾರರು. ಈ ನಾಲ್ವರ ಹೋರಾಟಗಾರರೆಂದರೆ : ಕೋನಾಪುರ ರಾಮರಾಯರು (ಪ್ರಭಾಕರ ಜೋಶಿ), ಕೊಟ್ರ ಬಸಯ್ಯ(ಸಿ.ಎಂ.ಚುರ್ಚಿಹಾಳಮಠ),ಎಲೇರಿ ಅನ್ನಪೂರ್ಣಯ್ಯಸ್ವಾಮಿ (ಡಾ.ಸುಷ್ಮಾ ಎನ್. ಹಾಗರಗಿ) ಮತ್ತು ನರಸಿಂಗರಾವ್ ಜಾಧವ್ ( ಗಿರಿಜಾ ಇಟಗಿ).
ಈ ಕಾರ‌್ಯ ಸಾಧನೆಯ ಮೂಲಕ ಹೈದ್ರಾಬಾದ ಹೋರಾಟದ ಇತಿಹಾಸದ ರಚನಾ ಕಾರ‌್ಯ ಸಾಧ್ಯವಾಗದಿದ್ದರೂ ಹೋರಾಟದಲ್ಲಿ ಪಾಲ್ಗೊಂಡವರ ಜೀವನ ಚರಿತ್ರೆ ದಾಖಲಿಸಲು ಸಾಧ್ಯವಾಗುತ್ತದೆ. ಇದು ಒಂದು ರೀತಿಯಲ್ಲಿ ಬಿಡಿಬಿಡಿಯಾಗಿ ಪರೋಕ್ಷವಾಗಿ ಹೋರಾಟದ ಇತಿಹಾಸವನ್ನು ಕಟ್ಟಿ ಕೊಡುವಂತಹುದು. ಈ ಮೊದಲ ಕಂತಿನ ಹೊತ್ತಿಗೆಗಳು ಸಮಗ್ರವೂ ಅಲ್ಲ, ಪರಿಪೂರ್ಣವೂ ಅಲ್ಲ ಎಂಬು ದನ್ನು ಓದುಗರು ಜ್ಞಾಪಕದಲ್ಲಿಡಬೇಕು. ಯಾಕೆಂದರೆ, ಪ್ರತಿ ಪುಸ್ತಕಕ್ಕೂ 40ರಿಂದ 60 ಪುಟಗಳ ಮಿತಿ ಇದೆ. ‘ಸ್ವಾಮಿ ರಾಮಾನಂದ ತೀರ್ಥ ’ಮಾತ್ರ 140 ಪುಟಗಳದ್ದಾಗಿದೆ. ಪುಟಗಳ ಮಿತಿಯಿಂದಾಗಿ ಹೋರಾಟಗಾರರ ಜೀವನಗಾಥೆಯನ್ನು ಸಂಕ್ಷಿಪ್ತದಲ್ಲಿ ಸಮಗ್ರವಾಗಿ ಹೇಳುವ ಅನಿವಾರ‌್ಯತೆ ಉಂಟಾಗುತ್ತದೆ.
ಅದೇನೋ ದೌರ್ಬಲ್ಯಗಳಿದ್ದರೂ ಯೋಜನೆ ಮಾತ್ರ ಸ್ತುತ್ಯಾರ್ಹವಾದದ್ದು. ಬರಲಿರುವ ವರ್ಷಗಳಲ್ಲಿ ಅದು ಇನ್ನಷ್ಟು ಸಮರ್ಪಕವಾಗಿ ಮುಂದುವರೆ ಯಬೇಕು. ಬೀದರ, ಕಲಬು ರಗಿ, ಯಾದಗಿರಿ,ರಾಯಚೂರು ಮತ್ತು ಕೊಪ್ಪಳ - ಈ ಐದು ಜಿಲ್ಲೆಗಳಿಂದ ಪ್ರತಿ ಜಿಲ್ಲೆಗೆ ತಲಾ ನಾಲ್ವರು ಪ್ರಮುಖ ಹೋರಾ ಟಗಾರರನ್ನು ಪರಿಚಯಿಸುವ ಕಾರ‌್ಯ ಆಗಬೇಕು. ಹೀಗೆ ಮಾಡುವುದರಿಂದ ಪ್ರತಿ ವರುಷ 20 ಪುಸ್ತಕಗಳನ್ನು ಪ್ರಕಟಿಸಲು ಸಾಧ್ಯವಾಗುತ್ತದೆ. ಹತ್ತು ವರುಷಗಳಲ್ಲಿ ಯೋಜನೆಯನ್ನೇ ಪೂರ್ಣಗೊಳಿಸಬಹುದು.
ವಿಶ್ವ ವಿದ್ಯಾಲಯ ಈ ಕಾರ‌್ಯದಲ್ಲಿ ಶೈಕ್ಷಣಿಕ ಮಡಿವಂತಿಕೆಗೆ ಅಂಟಿಕೊಳ್ಳದೆ ವಿಶ್ವ ವಿದ್ಯಾ ಲಯ ಮತ್ತು ಕಾಲೇಜುಗಳ ಆಚೆ ಇರುವ ಆಸಕ್ತ ಪ್ರತಿಭೆಗಳನ್ನು ಧಾರಾಳವಾಗಿ ಬಳಸಿ ಕೊಳ್ಳುವ ಔದಾರ‌್ಯವನ್ನು ತೋರಬೇಕು.
ಅಂತು ಇಂತು ಹೈದ್ರಾಬಾದ ವಿಮೋಚನಾ ಹೋರಾಟದ ಇತಿಹಾಸಕ್ಕೆ ಸಂಬಂಧಿಸಿದಂತೆ ಒಂದು ಚಿಕ್ಕದಾದ ಪ್ರಾರಂಭಿಕ ಹೆಜ್ಜೆಯನ್ನು ಇಟ್ಟಂತಾಗಿದೆ. ಇದು ಮಗುವಿನ ಅಂಬೆಗಾಲಿ ನಂತೆ. ಮಗು ದಷ್ಟಪುಷ್ಟವಾಗಿ ಬೆಳೆದು ದಾಪುಗಾಲು ಹಾಕುವಂತಾದರೆ ವಿಶ್ವ ವಿದ್ಯಾಲಯದ ಶ್ರಮ ನಿಜಕ್ಕೂ ಸಾರ್ಥಕ.
- ಶ್ರೀನಿವಾಸ ಸಿರನೂರಕರ್
ಮೊ.ನಂ.9448040567'