11/21/2017

ಜ್ಞಾನ ಮಂಟಪ ವಿವರ ಪುಟ

ಅರಿವಿನ ಪರಿಮಳ ಸಿದ್ಧರಾಮ ಶಿವಯೋಗಿಗಳ ವಚನಾನುಭವ 1 ಬಸವರಾಜ ಸ್ವಾಮಿ

Font size -16+

'ಅಂಕುಸದರಳಿನ ಸಂಪಗೆಯ ಹುವ್ವಿನ ಕಂಪು !
ಇತ್ತಲಿತ್ತ ಬಿಜಯಂಗೈಯದಿರು ಶಿವನೆ !
ಅರಿಯಾ ಮಗನೆ ! ಮನೆಯ ಮಲ್ಲಯ್ಯಾ ನಿನಗೆಂದು ಬಂದುದನು.
ನೀವು ಭಕ್ತರಂಗಳದಲ್ಲಿ ಆಡುವ
ತೊತ್ತು ವೇಶಿಯ ಮಗನೆಂದು ಬಂದಿರಿ ಶಿವನೆ !
ಕಪಿಲಸಿದ್ಧ ಮಲ್ಲಿಕಾರ್ಜುನ !

ಅಂಕುಸದರಳಿನ ಸಂಪಗೆಯ ಹುವ್ವಿನ ಕಂಪು :
ಅಂಕುಶದಲ್ಲಿ ಹೂವು ಅರಳಿದೆ. ಸಂಪಗೆಯ ಕಂಪು ಬೀರುತ್ತಲಿದೆ. ಅದನ್ನು ಆನಂದ ದಿಂದ ಆಸ್ವಾದಿಸುತ್ತಿದ್ದಾನೆ ಶರಣ. ಇದನ್ನು ಮತ್ತೊಬ್ಬ ಶರಣ ಮಾತ್ರ ಬಲ್ಲ. ಶರಣನಲ್ಲದೆ ಮತ್ಯಾರಿಗೂ ಈ ಪರಿಮಳದ ವಿಷಯ ತಿಳಿಯದು.
ಶರಣನೆಂದರೆ ಜ್ಞಾನಿ ! ತನ್ನ ಜ್ಞಾನಕ್ಕೆ ತಾನೇ ಶರಣು ಹೋದವನು. ಅದರ ಪರಿಮಳವನ್ನು ಹೀರುತ್ತಾ ಮೈಮರೆತವನು.
ಸ್ಥೂಲತನು, ಸೂಕ್ಷ್ಮತನು, ಕಾರಣ ತನು ; ಹೀಗೆ ತನುಗಳು ಮೂರು ಕೂಡಿ ಒಂದು ತನುವಾಗಿದೆ. ಸೂಕ್ಷ್ಮ ತನುವಿನ ಮೂಲಕ ಜ್ಞಾನ (ಕಾರಣ) ತನುವಿಗೆ ಪಲ್ಲಟಗೊಂಡು ಸ್ಥೂಲ ತನುವಿನಲ್ಲಿ ಸಂಗಮವಾಗುವುದೇ ಮೂರೊಂದಾದ ಘನ. ಇದು ಘಟಿಸದ ಹೊರತು ತನು ಜ್ಞಾನ ತನುವಲ್ಲ. ತನುವಿನ ರೂಪದಲ್ಲಿದ್ದ ಮದ್ದಾನೆ ! ಇದರಲ್ಲಿ ಸಂಪಿಗೆ ಮೊಗ್ಗಿದೆ ; ಅರಳುವು ದಿಲ್ಲ.
ಮದ್ದಾನೆಯನ್ನು ಅಂಕುಶ ಹಿಡಿದ ಮಾವುತ ಮಾತ್ರ ನಡೆಸಬಲ್ಲ. ಅದು ತಾನಾಗಿಯೇ ಸುಂದರವಾಗಿ ನಡೆಯದು. ಅಂಕುಶವಿದ್ದು ಮಾವುತ ಇಲ್ಲದಿದ್ದರೆ ನಡೆಯದು. ಹಾಗೆಯೇ ತನುವಿದೆ ; ತನುವಿನಲ್ಲಿ ಜ್ಞಾನವೊಂದಿದೆ ; ಈ ಜ್ಞಾನವನ್ನು ಜಾಣತನದಿಂದ ಬಳಸಿಕೊಳ್ಳುವ ಮನವೆಂಬ ಜಾಣತನುವೊಂದಿದೆ. ಇದರ ಸಹಾಯದಿಂದ ಜ್ಞಾನವನ್ನು ಬಳಸಿಕೊಳ್ಳದಿದ್ದರೆ ಅದು ತನುವಲ್ಲ ; ಮನದ ತನು ; ರಕ್ಕಸ ತನು !
ಜ್ಞಾನ ಬಳಸಿಕೊಳ್ಳದ ತನು ; ತನುವಿನಿಂದಲೇ ಕಳ್ಳ, ಗೂಂಡಾ, ಭ್ರಷ್ಟಾಚಾರಿ, ವಿಷಯ ಲಂಪಟ, ಮೋಸಗಾರ,ವಿಟ,ವೇಶ್ಯೆ,ಹಾದರಿಗ ಎಂದು ಕರೆಯಿಸಿಕೊಳ್ಳುತ್ತದೆ. ತನುವನ್ನು ಹೀಗೆ ಕರೆಯುವ ತನುಗಳು ಕೂಡಾ ಅಜ್ಞಾನಿ ತನುಗಳೇ ಆಗಿವೆ.
ತನು, ತನುವನ್ನು ಅಜ್ಞಾನಿ ಎಂದು ಕರೆಯುವುದೆಂದರೇನು ? ತನುವಿನಲ್ಲಿ ಸಂಗಮವಾದ ಜ್ಞಾನದರ್ಶನ ತನುವಿಗೆ ಆಗಿಲ್ಲವೆಂದೇ ಅರ್ಥ. ಸಸಿಯಲ್ಲಿ ಗುಲಾಬಿ ಅರಳದಿದ್ದರೇನಾಯಿತು ? ಆ ಸಸಿಯನ್ನು ಬೇರೆ ಹೆಸರಿನಿಂದ ಕರೆಯಲು ಸಾಧ್ಯವೆ ? ಗುಲಾಬಿ ಸಸಿಯಲ್ಲಿ ಸಂಗಮವಾಗಿದೆ. ಬೇರು ಕಾಂಡ ಮುಳ್ಳು ಎಲೆಗಳಲ್ಲಿ ಸಂಗಮವಾಗಿದೆ. ಸಸಿ ಪ್ರೌಢಾವಸ್ಥೆಗೆ ಬಂದಾಗ ಗುಲಾಬಿ ಅರಳುತ್ತದೆ. ಅಂತೆಯೇ ಸಕಲ ತನುಗಳಲ್ಲಿ ಜ್ಞಾನದ ಸಂಪಿಗೆಯ ಹೂ ಅರಳಿ ಅರಿವಿನ ಪರಿಮಳ ಬೀರಬೇಕಾಗಿತ್ತು ; ಆದರೆ ಬೀರುವುದಿಲ್ಲ.
ಮನದ ತನುವಿನ ಮೂಲಕ ಜ್ಞಾನದ ತನುವಿಗೆ ಪರಕಾಯ ಪ್ರವೇಶ ಮಾಡಿ ಸ್ಥೂಲ ತನುವಿನಲ್ಲಿ ಸಂಗಮಗೊಂಡು, ಜ್ಞಾನದ ಸಂಪಿಗೆಯ ಕಂಪು ಬೀರಬೇಕು. ಕಾಯದ ಈ ಕಾಯಕ ಕಾಯದಲ್ಲಿಯೇ ಘಟಿಸಬೇಕು. ಈ ಕಾಯಕ ಬಲು ಜಟಿಲ. ಮಾವುತ ಅಂಕುಶ ಹಿಡಿದು ಮದ್ದಾನೆಯನ್ನು ಪಳಗಿಸಿದಂತೆ ! ಕಾಯದಲ್ಲಿ ಈ ಕಾಯಕ ಘಟಿಸಿದರೆ ಅಂಕುಶದಲ್ಲಿ ಅರಳಿದ ಸಂಪಿಗೆಯ ಹೂವಿನ ಕಂಪಿನಂತೆ. ಅರಿವಿನ ಪರಿಮಳದಂತೆ. ಮಾತನಾಡುತ್ತಾ ನಡೆದಾಡುವ ಅರಿವಿನ ಸೊಬಗು ಬೋಧೀ ವೃಕ್ಷದಂತೆ !
ಇತ್ತಲಿತ್ತ ಬಿಜಯಂಗೈಯದಿರು ಶಿವನೆ ! :
ತನುವೆಂದರೆ ಸಿದ್ಧಾರ್ಥನದೂ ಹೌದು, ಅಂಗುಲಿಮಾಲನದೂ ಹೌದು, ವರ್ಧಮಾನ ನದೂ ಹೌದು, ಬುದ್ಧನದೂ ಹೌದು. ಮಹಾವೀರನದೂ ಹೌದು !
ತನುವಿನಲ್ಲಿ ಬುದ್ಧನೂ ಇದ್ದಾನೆ ; ಅಂಗುಲಿಮಾಲನೂ ಇದ್ದಾನೆ, ಸಿದ್ಧಾರ್ಥನೂ ಇದ್ದಾನೆ. ಅಂಗುಲಿಮಾಲನಿದ್ದ ತನುವಿನಲ್ಲಿ ಬುದ್ಧನಿದ್ದರೂ ಬುದ್ಧನ ಪರಿಚಯ ಅಂಗುಲಿಮಾಲನಿಗೆ ಇಲ್ಲ. ಅಂಗುಲಿಮಾಲ ಪರಕಾಯ ಪ್ರವೇಶ ಮಾಡಿ ಬುದ್ಧನಾದ ಮೇಲೆ ಅಂಗಲಿಮಾಲನಿಗೆ ಆ ತನುವಿನಲ್ಲಿ ಅವಕಾಶವಿಲ್ಲ. ಬುದ್ಧನೆಂದರೆ ಶಿವ ; ಮಹಾಜ್ಞಾನಿಯಾತ.
ಅಂಗುಲಿಮಾಲನಿರುವ ಈ ಕಾಯದಲ್ಲಿ ಹೇಗಿದ್ದೆ ಪ್ರಭುವೆ ? ಇತ್ತ ಬಿಜಯಂಗೈಯದಿರು ಶಿವನೆ ! ಈ ಜಾಗ ನಿನಗೆ ಸೂಕ್ತವಲ್ಲ ಎಂದು ಅಂಗುಲಿಮಾಲ ಸತ್ತಮೇಲೆ ಬುದ್ಧನಾಡುವ ಮಾತಿದು. ಅರವಟ್ಟಿಗೆ, ಕೆರೆ, ದೇವಾಲಯಗಳನ್ನು ಕಟ್ಟಿಸಿದ ಅಹಂಕಾರಿ ವಡ್ಡರಾಮ ಇಲ್ಲವಾದ ಮೇಲೆ ಮಹಾಜ್ಞಾನಿ ಸಿದ್ಧರಾಮ ಶಿವಯೋಗಿ ಆಡಿದ ಮಾತಿದು.ಮಾತನಳಿಯುವ ಜ್ಞಾನದ ಮಾತು. ಮಾತಲ್ಲದ ಮಾತು.
ಅರಿಯಾ ! ಮನೆಯ ಮಲ್ಲಯ್ಯಾ ನಿನಗೆಂದು ಬಂದುದನು :
ತನುವೆಂಬುದು ಅರಿವಿನ ಮನೆ. ಇದರ ಒಡೆಯ ಅರಿವಿನ ಮಲ್ಲಯ್ಯ. ಈ ಮನೆಯನ್ನು ಮನವೆಂಬ ಅಜ್ಞಾನಿ ಆವರಿಸಿಕೊಂಡಿದ್ದಾನೆ. ಈತ ಅರಿವಿನ ಮಲ್ಲಯ್ಯನನ್ನು ಅರಿಯುತ್ತಿಲ್ಲ. ಅರಿಯದ ಮಗನ ಕಿವಿ ಹಿಂಡಿ, ಅರಿಯಾ ! ಎಲೆ ಮಗನೆ ; ಮನೆಯ ಮಲ್ಲಯ್ಯ ನಿನಗೆಂದು ಬಂದಿದ್ದಾನೆ. ನಿನ್ನ ಉದ್ದಾರಕ್ಕೆಂದು ಬಂದಿದ್ದಾನೆ. ನಿನ್ನನ್ನು ತನ್ನ ವಾರಸುದಾರನನ್ನಾಗಿಸಿಕೊಳ್ಳಲು ಬಂದಿದ್ದಾನೆ. ನೀನು ನಿನ್ನ ತಂದೆಯನ್ನು ಅರಿತರೆ ಸಾಕು. ತಂದೆ ನೀನು, ತಾಯಿ ನೀನು, ಬಂಧು ನೀನು, ಬಳಗ ನೀನು, ನೀನಲ್ಲದೆ ಮತ್ತಾರೂ ಇಲ್ಲವೆಂದು ಕೂಗಿ ಕರೆದರೆ ಸಾಕು ; ಅರಿವಿನ ಸಂಪತ್ತನ್ನೆಲ್ಲ ನಿನಗೆ ಧಾರೆ ಎರೆಯುತ್ತಾನೆ ಎಂದು ತಿಳಿಸಲು ಬಂದ ಅರಿವಿನ ಮಲ್ಲ ಯ್ಯನಾತ. ನಿನಗೆಂದೇ ಬಂದವನಾತ !
ನೀವು, ಭಕ್ತರಂಗಳದಲ್ಲಿ ಆಡುವ ತೊತ್ತು ವೇಶಿಯ ಮಗನೆಂದು ಬಂದಿರಿ ಶಿವನೆ !
ಹೌದು ! ತನುವೆಂಬುದು ಅರಿವಿನ ಶಿವ ನಡೆದಾಡುವ ಅಂಗಳ ! ತನುವನ್ನು ಆವರಿಸಿದ ಮನಕ್ಕೆ ಅರಿವೆಂಬ ಶಿವ ಪರಿಚಯವಿಲ್ಲದಿದ್ದರೆ ತನುವನ್ನೇ ತನ್ನ ಸುಖಕ್ಕಾಗಿ ವೇಶಿಯನ್ನಾಗಿ ಸುತ್ತದೆ. ದಾಸಿಯನ್ನಾಗಿಸುತ್ತದೆ. ವಿಟ ಕಳ್ಳ ಭ್ರಷ್ಟಾಚಾರಿ ವಿಷಯ ಲಂಪಟ ಎಂದು ಹಣೆಪಟ್ಟಿ ಹಚ್ಚಿಕೊಂಡು ಕರೆಯಿಸಿಕೊಳ್ಳುತ್ತದೆ. ವಿಟ ಕಳ್ಳ ವೇಶಿ ದಾಸಿ ಹಾದರಿಗ ಎಂದು ಕರೆಯಿಸಿ ಕೊಂಡ ತನು ಒಮ್ಮೆ ಇಲ್ಲವಾಗುತ್ತದೆ. ತನುವಿನಲ್ಲಿ ತನ್ಮಯವಾದ ಅರಿವಿನ ಶಿವನನ್ನೇ ಮರೆತ ಮನ ಅಜ್ಞಾನದ ಜನ್ಮಕ್ಕೆ ಅಂತ್ಯ ಹಾಡುತ್ತದೆ.
ಇದೆಲ್ಲ ಘಟಿಸುವ ಮುನ್ನ ನೀನು ನನ್ನ ಅಂಗವನ್ನೇ ನಿನ್ನ ಅಂಗಳ ಮಾಡಿಕೊಂಡು ತೊತ್ತು ವೇಶಿಯ ಮಗನೆಂದು ಬಂದು ಎನ್ನ ಕೈಹಿಡಿದು ಹರಿಸಿದಿರಿ ಶಿವನೆ ! ಏನೊಂದೂ ತಿಳಿಯದ ಕಪಿಲೆಯನ್ನು ಸಿದ್ಧನನ್ನಾಗಿಸಿದಿರಿ ತಂದೆ. ಅಂಕುಶದಲ್ಲಿ ಸಂಪಿಗೆಯನ್ನು ಅರಳಿಸಿ ಹೂವಿನ ಜ್ಞಾನದ ಕಂಪು ಬೀರಿದಿರಿ ತಂದೆ ; ಮಲ್ಲಿಕಾರ್ಜುನನೆ ಮನೆಯ ಮಲ್ಲಯ್ಯನೆ ಎನಗಾಗಿ ಬಂದಿರಿ ತಂದೆ ಎಂದು ಸಿದ್ಧರಾಮ ಶಿವಯೋಗಿಗಳು ಅರಿವಿನ ಶಿವನನ್ನು ಕುರಿತು ಮೈಮರೆತು ಹಾಡಿದ್ದಾರೆ.'