11/21/2017

ಜ್ಞಾನ ಮಂಟಪ ವಿವರ ಪುಟ

ನಿಜಗುಣರ ನೆಲೆಯಲ್ಲಿ ಕೆಲ ಸಮಯ

Font size -16+

'ನಾನು ಚಿಕ್ಕವನಾಗಿರುವಾಗಲೇ ಗುರುಗಳಾದ ಸದಾನಂದ ಸ್ವಾಮಿಗಳು ನನಗೆ ನಿಜಗುಣ ಶಿವಯೋಗಿಗಳ ಷಟ್‌ಶಾಸ್ತ್ರಗಳ ಮರ್ಮ ತಿಳಿಸುತ್ತ ಅದರಲ್ಲಿಯ ಅಧ್ಯಾತ್ಮದ ತಿರುಳಿನ ರುಚಿ ಹಚ್ಚಿದರು. ನಾಟಕದ ಹುಚ್ಚು ಹಚ್ಚಿಕೊಂಡು ಸಾಹಿತ್ಯದ ಅಧ್ಯಯನದಲ್ಲಿ ತೊಡಗಿದ ನನ್ನನ್ನು ಮಣ್ಣಿನ ರುಚಿಗೆ ಬಿದ್ದ ಬಾಲಕನಿಗೆ ಹಣ್ಣಿನ ರುಚಿ ತೋರಿಸಿ ಅದನ್ನು ಕೃಬಿಡಿಸಿದಂತೆ ಜ್ಞಾನದ ವಿಷಯಗಳತ್ತ ವಾಲುವಂತೆ ಮಾಡಿದ್ದರಿಂದ ಆ ಹಾದಿ ಹಿಡಿದೆ.
ನಿಜಗುಣ ಶಿವಯೋಗಿಗಳ ಗ್ರಂಥಗಳೆಂದರೆ ಉಕ್ಕಿನ ಕಡಲೆ ಇದ್ದಂತೆ ಅವುಗಳನ್ನು ತಿನ್ನಲು ವಜ್ರದ ಹಲ್ಲುಗಳೇ ಬೇಕೆನ್ನುವ ವದಂತಿಯು ಅಧ್ಯಾತ್ಮ ವಲಯದಲ್ಲಿ ಪ್ರಚಲಿತದಲ್ಲಿರುವುದರಿಂದ ಅಂಥ ಉಕ್ಕಿನ ಕಡಲೆಯನ್ನೇ ತಿನ್ನಬೇಕೆನ್ನುವ ಹಠದಿಂದ ಹಗಲು ರಾತ್ರಿ ಅವರ ಕೃತಿಗಳ ಓದು ಮತ್ತು ಮನನದಲ್ಲಿ ತೊಡಗಿಕೊಂಡೆ, ನಿಜಗುಣರು ಯಾವುದೇ ಧರ್ಮ, ಮತ, ಪಂಥಗಳ ಕಟ್ಟುಪಾಡುಗಳಿಗೆ ಒಳಗಾಗದೆ ನಿಜವನರಿದ ನಿಜಗುಣ ಶಿವಯೋಗಿ ವಿರಚಿತ ಈ ಕೃತಿಯನಿಲ್ಲಿ ಎಂದಿರುವುದಲ್ಲದೆ ಅವರಿವರೆನ್ನದೆ ನಿಜರಿದವರಂಘ್ರಿಗೆ ಅವನತವಾಗಿತವೆ ರಮ್ಯವಾದುದೆನೆ ಪೇಳ್ವೆನೀ ಗತಿಯಿಂದ ಎಂದಿರುವುದು ಇಲ್ಲಿ ಆ ಕಾಲ ಈ ಕಾಲ ಎನ್ನುವುದಿಲ್ಲ, ಆ ಮತ ಈ ಮತ ಎನ್ನುವುದಿಲ್ಲ ಸಣ್ಣವನು ದೊಡ್ಡವನು, ಜಾತಿ ಧರ್ಮಗಳ ಪ್ರಶ್ನೆಯಿಲ್ಲ ಹೆಣ್ಣು ಗಂಡಿನ ಭೇದವಿಲ್ಲ. ನಿಜವನ್ನು ತಿಳಿದವರ ಪಾದಕ್ಕೆ ನಮಸ್ಕರಿಸುವೆ ಎಂದಿರುವುದು ಅವರ ವಿಶಾಲವಾದ ತಾತ್ವಿಕ ದೃಷ್ಟಿ ಮತ್ತು ನಿಜವನ್ನು ಮಾತ್ರ ತಿಳಿಯಬೇಕೆನ್ನುವ ವಿಚಾರ ನನ್ನನ್ನು ಬಹಳಷ್ಟು ಆಕರ್ಷಿಸಿತು.
ಇಂಥ ನಿಜವಾದ ಚಿಂತನೆಯ ವ್ಯಕ್ತಿಯ ಕೃತಿಗಳು ಜನರ ಗಮನಕ್ಕೆ ಬಾರದೆ ಉಳಿದದ್ದರಿಂದ ಹುಬ್ಬಳ್ಳಿ ಸಿದ್ದಾರೂಢ ಮಹಾತ್ಮರು ಅವುಗಳನ್ನು ತಮ್ಮ ಶಿಷ್ಯರ ಮೂಲಕ ಮನೆ ಮನೆಗೆ ತಲುಪುವಂತೆ ಮಾಡಿದರು. ಸಾಮಾನ್ಯರಿಗೆ ತಿಳಿಯುವಂತೆ ಬೋಧಿಸಿದರು ಅವುಗಳನ್ನು ತಲೆಯ ಮೇಲೆ ಹೊತ್ತು ಕುಣಿದು ಅದರಲ್ಲಿಯ ಮಹತ್ವವನ್ನೂ ಜಗತ್ತಿಗೆ ಸಾರಿದರು, ಹೀಗಾಗಿ ನನ್ನಲ್ಲಿ ನಿಜಗುಣರ ಕುರಿತು ನನ್ನ ಕುತೂಹಲ ಹೆಚ್ಚುತ್ತ ಹೋಯಿತು ಅವರ ಬಗ್ಗೆ ತಿಳಿಯಬೇಕೆನ್ನುವ ಹಂಬಲ ಹೆಚ್ಚಾಯಿತಾದರೂ ಅಧ್ಯಾತ್ಮಿಕ ಸಾಧಕರು ತಮ್ಮ ಹೆಸರಿಗೆ ಅಥವಾ ಪ್ರಚಾರಕ್ಕೆ ಎಂದೂ ಮಹತ್ವ ನೀಡಿದವರಲ್ಲ, ತಮ್ಮ ವ್ಯಕ್ತಿಗತ ಬದುಕಿನ ಬಗ್ಗೆ ಹೇಳಿಕೊಂಡವರಲ್ಲ. ಅಹಂಕಾರ ನಾಶವೇ ತನ್ನ ಮುಕ್ತಿಯೆಂದು ತಿಳಿದಿರು ವುದರಿಂದ ಅವರ ತತ್ವ ವಿಚಾರಗಳು ಪ್ರಚಾರಗೊಳ್ಳುತ್ತವೆ ಆದರೆ ಅವರು ಮಾತ್ರ ನಿಗೂಢವಾಗಿಯೆ ಉಳಿಯುತ್ತಾರೆ. ಹಾಗಾಗಿ ಅವರ ಸುತ್ತ ವದಂತಿಗಳೇ ಹೆಚ್ಚಾಗಿ ಹುಟ್ಟಿಕೊಳ್ಳುತ್ತ ಜನ ಸಾಮಾನ್ಯರು ಅದನ್ನು ರೋಚಕವಾಗಿ ಹೇಳುತ್ತ ಹೋದಂತೆಲ್ಲ ಅದರಲ್ಲಿ ಯಾವುದು ನಿಜ ಎನ್ನುವುದು ಉಳಿದುಬಿಡುತ್ತದೆ.
ನಿಜಗುಣರ ಬಗ್ಗೆ ಅವರ ಈಗಿನ ಚಾಮರಾಜನಗರ ಜಿಲ್ಲೆಯ ಕೊಳ್ಳೆಗಾಲ ತಾಲೂಕಿನ ಚಿಲಕವಾಡಿಯಲ್ಲಿ ಪಾಳೇಗಾರ ಅರಸರಾಗಿದ್ದರು. ಅವರು ಸಂಸಾರಿಯಾಗಿದ್ದರೂ ಅಧ್ಯಾತ್ಮಿಕ ಸಾಧಕರಾಗಿದ್ದು ತಮ್ಮ ಪತ್ನಿ ತಾವು ಗುರುವಿನ ಜತೆ ಪ್ರಸಾದಕ್ಕೆ ಕುಳಿತಿದ್ದಾಗ ತಮಗೆ ಬಿಸಿ ಅನ್ನ ಬಡಿಸಿ ಗುರುವಿಗೆ ತಂಗಳನ್ನು ಬಡಿಸಿದ್ದನ್ನು ಗಮನಿಸಿಯೆ ವೈರಾಗ್ಯದಿಂದ ಮನೆ ಬಿಟ್ಟು ಹೋಗಿ ಪಕ್ಕದ ಶಂಭುಲಿಂಗದ ಬೆಟ್ಟದ ಗುಹೆಯಲ್ಲಿ ವಾಸವಾಗಿದ್ದರು. ಅಲ್ಲಿಯೆ ತಪಸ್ಸು ಅಧ್ಯಯನ ನಡೆಸಿ ಕೃತಿ ರಚಿಸಿದರೆನ್ನುವ ಸಂಗತಿ ಬಿಟ್ಟರೆ ಹೆಚ್ಚಿನ ವಿಷಯ ತಿಳಿಯದು ಆದರೆ ಅವರ ಕೃತಿಗಳು ಮಾತ್ರ ತುಂಬಾ ಪ್ರಸಿದ್ದಿಯನ್ನು ಪಡೆದು ಅವರನ್ನು ಸರ್ವಕಾಲಿಕ ಸರ್ವದೇಶಿಕನನ್ನಾಗಿ ಮಾಡಿದವು.
ಇಂಥ ನಿಜಗುಣರು ನೆಲಸಿದ ನೆಲೆಯನ್ನು ಮತ್ತು ಆ ಶಂಭುಲಿಂಗನ ಬೆಟ್ಟ ಹೇಗಿದ್ದೀತು ಎನ್ನುವುದನ್ನು ನೋಡಬೇಕೆನ್ನುವ ಕುತೂಹಲ ನನ್ನಲ್ಲಿ ಚಿಕ್ಕಂದಿನಿಂದ ಹಾಗೆಯೆ ಉಳಿದಿತ್ತು, ನಾನು ಬರೆದ ತನಿಖಾ ವರದಿ ಪುಸ್ತಕವನ್ನು ಆಗಿನ ಗುರುಡನಗಿರಿ ನಾಗರಾಜರ ಅಧ್ಯಕ್ಷತೆಯ ಪತ್ರಿಕಾ ಅಕಾಡೆಮಿ ಚಾಮರಾಜ ನಗರದಲ್ಲಿ ಬಿಡುಗಡೆಗೊಳಿಸಿತು. ಆಗ ನನ್ನನ್ನು ಕರೆಯಿಸಿಕೊಂಡು ಸನ್ಮಾನಿಸಿ ದರಾದರೂ ಆಗ ನನಗೆ ಶಂಭುಲಿಂಗನ ಬೆಟ್ಟಕ್ಕೆ ಕರೆದೊಯ್ದು ತೋರಿಸುವರಿರಲಿಲ್ಲ ಹಾಗು ನಾನೇ ಹೋಗಿ ನೋಡಿ ಬರಲು ಸಮಯವಿರಲಿಲ್ಲ. ಎರಡನೆಯ ಬಾರಿ ಕಸಾಪ ಚುನಾವಣೆ ಪ್ರಚಾರಕ್ಕಾಗಿ ಶೇಖರಗೌಡ ಮಾಲಿ ಪಾಟೀಲರ ಜತೆ ಹೋದಾಗಲೂ ಸಾಧ್ಯವಾಗಿರಲಿಲ್ಲ. ಆದರೆ ಕಳೆದ ದಿ 31 ಮಾರ್ಚ 2017 ರಂದು ಚಾಮರಾಜನಗರ ಜಿಲ್ಲೆಯ ಕನ್ನಡ ಸಾಹಿತ್ಯ ಪರಿಷತ್ತು ಕರ್ನಾಟಕ ಏಕೀಕರಣ ವಜ್ರಮಹೋತ್ಸವದ ಹಿನ್ನೆಲೆಯಲ್ಲಿ ಏರ್ಪಡಿಸಿದ ರಾಜ್ಯಮಟ್ಟದ ವಿಚಾರ ಸಂಕಿರಣಕ್ಕೆ ಸ್ನೇಹಿತರು ಮತ್ತು ಸಾಹಿತಿಗಳಾದ ವೆಂಕಟರಾಜು ಅವರು ನನ್ನನ್ನು ಉಪನ್ಯಾಸಕ್ಕಾಗಿ ಆಹ್ವಾನಿಸಿದ್ದರಿಂದ ಮತ್ತೆ ನನ್ನಲ್ಲಿ ಶಂಭುಲಿಂಗನ ಬೆಟ್ಟ ನೋಡಬೇಕೆನ್ನುವ ಕುತೂಹಲ ಗರಿಗೆದರಿದ ಕಾರಣ ಆ ಆಪೇಕ್ಷೆಯನ್ನು ಸರಳವಾಗಿ ಈಡೇರಿಸುವ ಭರವಸೆಯನ್ನು ವೆಂಕಟರಾಜು ಮತ್ತು ಜಿಲ್ಲಾ ಕಸಾಪ ಅಧ್ಯಕ್ಷರು ನೀಡಿದ್ದರಿಂದ ಅದಕ್ಕಾಗಿ ಒಂದು ದಿನ ಮುಂಚಿತವಾಗಿಯೆ ನಾನು ಚಾಮರಾಜನಗರಕ್ಕೆ ಹೋದೆ.
ಹೇಳಿದಂತೆ ನನಗೆ ಒಬ್ಬ ಶಿಕ್ಷಕ ಮಿತ್ರನನ್ನು ಜತೆಗೂಡಿಸಿ ಚಾಮರಾಜನಗರ ದಿಂದ 20 ಕಿ, ಮೀ ದೂರದ ಶಂಭುಲಿಂಗನ ಬೆಟ್ಟಕ್ಕೆ ತಲುಪಿಸುವ ವ್ಯವಸ್ಥೆ ಮಾಡಿದರು. ನಾನು ಊಹಿಸಿಕೊಂಡಂತೆ ಶಂಭುಲಿಂಗನ ಬೆಟ್ಟ ಅಷ್ಟೇನು ಎತ್ತರವಾಗಿಲ್ಲ. ಇಪ್ಪತ್ತು ಮೂವತ್ತು ಮೀಟರ್ ಏರಿದರೆ ಸಾಕು ಹಾಗಾಗಿ ನನ್ನ ಕಾಲು ನೋವಿನ ಕಾರಣದಿಂದ ಹತ್ತಲಾಗುತ್ತದೋ ಇಲ್ಲವೋ ಎನ್ನುವ ಆತಂಕ ದೂರವಾಯಿತು. ನಿಜಗುಣ ಶಿವಯೋಗಿಗಳು ವಾಸವಾಗಿದ್ದ ಗುಹೆಯನ್ನು ಅಭಿವೃದ್ದಿ ಪಡಿಸಿ ಅದರ ಮುಂದೆ ದೇವಸ್ಥಾನ ನಿರ್ಮಿಸಲಾಗಿದೆ. ಕೆಳಗಡೆ ಶಂಭುಲಿಂಗನ ದೇವಸ್ಥಾನವಿದೆ. ಬೆಟ್ಟವನ್ನೇ ಬಳಸಿಕೊಂಡು ಮಠವನ್ನು ನಿರ್ಮಿಸಿದ್ದರಲ್ಲಿ ಈಗಿನ ಪೀಠಾಧ್ಯಕ್ಷರಾದ 86 ವರ್ಷದ ಶ್ರೀಕುಮಾರ ನಿಜಗುಣ ಮಹಾಸ್ವಾಮಿಗಳು ವಾಸವಾಗಿದ್ದಾರೆ. ಅವರಿಗೆ ನನ್ನನ್ನು ಪರಿಚಯಿಸುತ್ತಲೇ ತುಂಬಾ ಆತ್ಮೀಯವಾಗಿ ನನ್ನಿಂದ ನಿಜಗುಣ ಶಿವಯೋಗಿ ವಿರಚಿತ ಕೈವಲ್ಯ ಪದ್ದತಿಯ ಪದವೊಂದನ್ನು ಆಲಾಪದಲ್ಲಿ ಕೇಳಿಸಿಕೊಂಡು ಮಾತಿಗೆ ಶುರು ಹಚ್ಚಿಕೊಂಡವರು ಸಂಜೆ 4 ಗಂಟೆಯಿಂದ ರಾತ್ರಿ 8 ರವರೆಗೆ ಅವರೊಂದಿಗೆ ಕಳೆದ ಸಮಯ ನನಗೆ ತುಂಬಾ ಮಹತ್ವಪೂರ್ಣ ಎನ್ನಿಸಿತು. ಅವರನ್ನು ಕಂಡಾಗ ನನಗೆ ಸಾಕ್ಷಾತ್ ನಿಜಗುಣ ಶಿವಯೋಗಿಗಳನ್ನು ಕಂಡಷ್ಟೇ ಆನಂದವಾಯಿತು. ಆದರೆ ಅವರು ಸ್ವಲ್ಪ ನಿತ್ಯ ನಿಷ್ಠುರಿಗಳಾಗಿರುವುದರಿಂದ ಸ್ಥಳೀಯರು ಅವರನ್ನು ಅಷ್ಟಕಷ್ಟೇ ಕಾಣುತ್ತಾರೆ. ಅವರು ಬೇರೆಯವರನ್ನು ವಿಮರ್ಶಿಸಿದಂತೆ ತಮ್ಮನ್ನು ತಾವೇ ವಿಮರ್ಶೆಗೆ ಒಳಪಡಿಸಿಕೊಳ್ಳಬಲ್ಲರು. ವಕೀಲ ವೃತ್ತಿಯನ್ನು ಮಾಡಿ ಅದರಿಂದ ಹೊರಬಂದು ವೈರಾಗ್ಯ ತಾಳಿ ಶಂಭುಲಿಂಗನ ಗುಹೆಯಲ್ಲಿ ಜನಸಂಪರ್ಕದಿಂದ ದೂರಾಗಿ ತಪಸ್ಸನ್ನಾಚರಿಸಿಕೊಂಡಿದ್ದವರು. ಆದರೆ ಅವರ ಗುರುಗಳಾದ ತುಮಕೂರಿನ ಸಿದ್ದಗಂಗಾಮಠದ 110 ವರ್ಷ ವಯಸ್ಸಿನ ಕ್ರಿಯಾಶೀಲ ಶಕ್ತಿ ಶಿವಕುಮಾರ ಸ್ವಾಮಿಗಳು ಹೊರಗೆ ಬಂದು ಸಾರ್ವಜನಿಕ ಸೇವೆ ಮಾಡಲು ಆಜ್ಞಾಪಿಸಿದ್ದರಿಂದ ಹೊರಬರಬೇಕಾಯಿತು. ನಿವೃತ್ತಿ ಮಾರ್ಗದಲ್ಲಿದ್ದ ನನ್ನನ್ನು ಗುರುಗಳು ಪ್ರವೃತ್ತಿಮಾರ್ಗಕ್ಕೆ ಹಚ್ಚಿ ತಪ್ಪು ಮಾಡಿದರೆಂದೆ ಹೇಳಿಕೊಂಡು ಕುಮಾರ ನಿಜಗುಣಸ್ವಾಮಿಗಳು ದೊಡ್ಡದಾದ ಅನುಭವ ಮಂಟಪ ಕಟ್ಟಡ ನಿರ್ಮಿಸಿ ಅಲ್ಲಿ ಅನೇಕ ಅನುಭವಿಗಳನ್ನು ಕರೆಯಿಸಿ ಅನುಭವಗೋಷ್ಠಿ ನಡೆಸುತ್ತಾರೆ. ಕುವೆಂಪು ನನ್ನ ಕಾವ್ಯ ಪ್ರೇರಣೆ ಎನ್ನುವ ಸ್ವಾಮಿಗಳು ಜಚನಿಯವರ ಸಾಹಿತ್ಯ ಸೃಷ್ಠಿಯ ಬಗ್ಗೆ ಅಭಿಮಾನ ಹೊಂದಿದ್ದಾರೆ. ಕುಮಾರ ನಿಜಗುಣ ಮಹಾಸ್ವಾಮಿಗಳು ಬೋಳು ಬಸವನ ಬೊಂತೆ ಎನ್ನುವ ಕೃತಿ ಡಿವಿಜಿಯವರ ಮಂಕುತಿಮ್ಮನ ಕಗ್ಗದಂತೆ ತುಂಬಾ ಪ್ರಸಿದ್ದವಾಗಿ ಹಲವಾರು ಆವೃತ್ತಿಯಲ್ಲಿ ಪ್ರಕಟಗೊಂಡಿದೆ. ಅವರಿಗಿರುವ ಛಂದಸ್ಸಿನ ಜ್ಞಾನ ಮತ್ತು ರಚನಾ ವಿಧಾನ ಹಿಂದಿನವರನ್ನೂ ಮೀರಿಸಿ ಮುಂದೆ ಯಾರಾದರೂ ಆ ಮಟ್ಟಕ್ಕೆ ಬರಲು ಸಾಧ್ಯವಿಲ್ಲ ಎನ್ನುವಷ್ಟರ ಮಟ್ಟಿಗೆ ಅಗಾಧವಾಗಿದೆ. ಈ ಹಿನ್ನೆಲೆಯಲ್ಲಿ ರಚಿಸಿದ ಅವರ ಛಂದೋವಿಲಾಸ ವೈಭವ ವಿದ್ವತ್ ಗ್ರಂಥವಾಗಿದೆ. ಚಂಪೂ ಕಾವ್ಯದ ಮೊದಲಿಗನಾದ ಪಂಪ ಕೇವಲ 17 ವೃತ್ತ ಪ್ರಕಾರಗಳನ್ನು ರಚಿಸಿದ್ದರೆ ನಿಜಗುಣರು 630 ಹೊಸವೃತ್ತಗಳನ್ನು ಮಾಡಿದ್ದಾರೆ. ನ ಒಂದೇ ಅಕ್ಷರ ಬಳಸಿ ರಚಿಸಿದ ವೃತ್ತವೊಂದು ಅವರ ವಿದ್ವತ್ತಿಗೆ ಸಾಕ್ಷಿಯಾಗಿದೆ. ಅಪ್ಪಯ್ಯ ದೀಕ್ಷಿತರೆನ್ನುವವರು 186 ವೃತ್ತಗಳಲ್ಲಿ ರಾಮಾಯಣ ಕಲ್ಪವೃಕ್ಷಮು ಕೃತಿಯನ್ನು ತೆಲುಗಿನಲ್ಲಿ ರಚಿಸಿ ಕವಿ ಸಾಮ್ರಾಟರೆನ್ನಿಸಿದರೆ ಕುಮಾರ ನಿಜಗುಣರು ಅದನ್ನು ಮೀರಿಸಿದ್ದಾರೆ. ದೀಕ್ಷಿತರ ಕಾವ್ಯದ ಅಧ್ಯಯನದ ಮೇಲೆಯೆ 100 ಜನ ಡಾಕ್ಟರೇಟ್ ಪಡೆದಿದ್ದಾರೆ. ಆದರೆ ತಮ್ಮ ಕಾವ್ಯ ಪ್ರತಿಭೆಯನ್ನು ಹಾಗೆ ಯಾರೂ ಇನ್ನೂ ಗುರುತಿಸಿಲ್ಲ ಎನ್ನುವ ಕೊರಗು ಸ್ವಾಮಿಗಳಿಗಿದೆ. 100 ಗಣಾಕ್ಷರಗಳ ಒಂದು ಹೊಸವೃತ್ತವನ್ನೆ ಸೃಷ್ಟಿಸಿ ಅವರು ದಾಖಲೆ ನಿರ್ಮಿಸಿದ್ದಾರೆ. ಒಟ್ಟು 12 ಛಂದಸ್ಸಿನ ಕೃತಿಗಳನ್ನು ಸ್ವಾಮಿಗಳು ರಚಿಸಿದ್ದಾರೆ, ಅದರಲ್ಲಿ ಛಂದೋ ವಿಲಾಸ ವೈಭವ ಮತ್ತು ಛಂದಮೆ ಚಂದಂ ಆನಂದಂ ಕೃತಿಗಳು ಪ್ರಸಿದ್ದವಾಗಿವೆ. ಟಿ ಬಿ ವೆಂಕಟಾಲ ಶಾಸ್ತ್ರಿಗಳು ಇವರು ಕೃತಿ ಅಧ್ಯಯನದ ಗ್ರಂಥ ರಚಿಸಿದ್ದಾರೆ. ಶತವಧಾನಿ ಆರ್ ಗಣೇಶರಂಥವರು ಇವರ ಬೋಳು ಬಸವನ ಬೊಂತೆ ಒಂದು ಅವಲೋಕನ ಎನ್ನುವ ವಿಶ್ಲೇಷಣಾತ್ಮಕ ಗ್ರಂಥ ಹೊರತಂದಿದ್ದಾರೆ.
ಕುಮಾರ ನಿಜಗುಣ ಮಹಾಸ್ವಾಮಿಗಳು ಗುಹಾಪ್ರವೇಶದ ನೆನಪಿಗಾಗಿ ನಿಜಗುಣ ರಜತ ಎನ್ನುವ ಸಂಚಿಕೆಯನ್ನು ಮಧುವನ ಶಂಕರ ಮತ್ತು ಮೊರಬದ ಮಲ್ಲಿಕಾರ್ಜುನ ಎನ್ನುವವರು ಪ್ರಕಟಿಸಿದ್ದರೆ ಛಂದೋ ನಿಜಗುಣ ಎನ್ನುವ ಅಭಿನಂದನ ಗ್ರಂಥವನ್ನು ಪ್ರೋ,ಮಲೆಯೂರು ಗುರುಸ್ವಾಮಿ ಪ್ರಧಾನ ಸಂಪಾದಕರಾಗಿ ಪ್ರಕಟಿಸಿದ್ದಾರೆ. ಕನ್ನಡ, ತಮಿಳು, ಇಂಗ್ಲೀಷ್ ಭಾಷೆಯಲ್ಲಿ ವಿದ್ವತ್ ಪೂರ್ಣವಾಗಿ ಮಾತನಾಡಬಲ್ಲ ಇಂಥ ಮಹಾಸ್ವಾಮಿಗಳೊಬ್ಬರು ನಮ್ಮಲ್ಲಿದ್ದಾರೆನ್ನುವುದೆ ಅಭಿಮಾನದ ಸಂಗತಿ. ಹಾಗೆಯೆ ತಾವು ನೀರನ್ನು ಸಹ ಕುಡಿಯದೇ ನನ್ನೊಂದಿಗೆ ಮಾತಿನಲ್ಲಿ ತೊಡಗಿದ್ದರೂ ನನ್ನದನ್ನು ಗಮನಿಸಿ ತಮ್ಮ ಶಿಷ್ಯರಾದ ಪೊನ್ನಪ್ಪ ಅವರಿಂದ ನನಗೆ ಹಣ್ಣು ಫಲಾಹಾರ, ಚಹಾ ತರಿಸಿಕೊಟ್ಟು ಆಗ್ರಹದಿಂದ ತಿನ್ನಿಸಿದ್ದು ಅವರ ಪ್ರೀತಿಯ ಅಂತಃಕರಣಕ್ಕೆ ನಾನು ಶರಣು ಶರಣು ಎನ್ನುವಂತಾಯಿತು. ಕೊನೆಗೆ ಅಲ್ಲಿ ರಾತ್ರಿ ವಸತಿಗೆ ಅನುಕೂಲವಾಗಲಿಕ್ಕಿಲ್ಲ ಎನ್ನುವುದನ್ನು ಗಮನಿಸಿ ಅದೇ ಪೊನ್ನಪ್ಪರಿಗೆ ನನ್ನನ್ನು ಕಾರಿನಲ್ಲಿ ತಮ್ಮ ಊರಾದ ಟಿ ನರಸಿಪುರಕ್ಕೆ ಕರೆದುಕೊಂಡು ಹೋಗಿ ಉಪಚರಿಸಿ ಮಾರನೆಯ ದಿನ ನನ್ನನ್ನು ಕಾರ್ಯಕ್ರಮಕ್ಕೆ ಬಿಡುವಂತೆ ಹೇಳಿದ್ದರಲ್ಲದೆ ತಾವು ಸಹಿತ ಬಂದು ಸಾಮಾನ್ಯರ ಸಾಲಿನಲ್ಲಿ ಕುಳಿತು ನನ್ನ ಉಪನ್ಯಾಸ ಕೇಳಿದ್ದು ನನಗೆ ಎಂದಿಗೂ ಮರೆಯದ ಸಂಗತಿಯಾಗಿದೆ ಮತ್ತು ಇಂಥ ಸ್ವಾಮಿಗಳು ನನಗೆ ಇಷ್ಟು ತಡವಾಗಿ ಪರಿಚಯವಾದರಲ್ಲ ಎನ್ನಿಸುತ್ತದೆ. ಅಚ್ಚರಿಯೆಂದರೆ ಮೂಲ ನಿಜಗುಣ ಶಿವಯೋಗಿಗಳ ಬಗ್ಗೆ ಮತ್ತು ಈ ಕುಮಾರ ನಿಜಗುಣ ಸ್ವಾಮಿಗಳ ಬಗ್ಗೆ ಸ್ಥಳೀಯವಾಗಿ ಹೆಚ್ಚಿನ ಮಹತ್ವ ಇಲ್ಲದಂತಿರುವುದು ಅದಕ್ಕೂ ಒಂದು ಕಾಲ ಕೂಡಿ ಬರಬಹುದೆನ್ನುವ ಭರವಸೆ ನನ್ನದು. ಒಟ್ಟಾರೆ ಅಲ್ಲಿ ಕಳೆದ ನಾಲ್ಕು ಗಂಟೆಯ ಸಾರ್ಥಕ ಸಮಯ ನನ್ನ ಬದುಕಿನ ಮಹತ್ವದ ಗಳಿಗೆಗಳೆಂದು ಭಾವಿಸುವೆ.'