11/21/2017

ಜ್ಞಾನ ಮಂಟಪ ವಿವರ ಪುಟ

ಕೃಷ್ಣನ ಪಾದದಲ್ಲಿ ಬಾಣದ ‘ಶರ ’ಣಾಗತಿ

Font size -16+

'ಈ ಮಣ್ಣಿನಲ್ಲಿಯೇ ಈ ಮಣ್ಣಿನಿಂದಲೇ ಒಡಮೂಡಿದ್ದಲ್ಲದೇ- ಮಾನವ ಪ್ರಜ್ಞೆ,ಅಂಥ ಮಾನವ ಪ್ರಜ್ಞೆಯು ಈ ಮಣ್ಣನ್ನು ತನ್ನದು ಎಂದುಕೊಳ್ಳುವುದು ಸಹಜವಾಗಿಯೇ ಇದೆ. ತನ್ನದು ಎಂದುಕೊಂಡದ್ದರ ಬಗ್ಗೆ, ಅದನ್ನು ತನ್ನದಾಗಿಯೇ ಉಳಿಸಿಕೊಳ್ಳುವ ಬಗ್ಗೆ ಪ್ರಾಣವಿಟ್ಟು ಹೋರಾಡುವುದೂ ಕರ್ತವ್ಯಬದ್ಧವಾಗಿಯೇ ಇದೆ ಎನ್ನಬಹುದು. ಅಲ್ಲಿಗೆ, ಯುದ್ಧ ಎನ್ನುವುದು ಈ ಮಣ್ಣಿನ ಗುಣ; ಯುದ್ಧದ ಬೀಜ ಯುದ್ಧದ ಬೆಳೆ ಈ ಮಣ್ಣಿನಲ್ಲಿಯೇ ಇದೆ ಎಂದಂತಾ ಯಿತು. ಕುರುಕ್ಷೇತ್ರದಲ್ಲಿ ಈಗಲೂ ಇಬ್ಬರು ಜೊತೆಯಾಗಿ ಆ ನೆಲದಲ್ಲಿ ನಡೆಯಬಾರದು ಎನ್ನುತ್ತಾರೆ. ಅದು ಜನಪ್ರೀತಿ. ಜಗಳವಾಗಿ ಬಿಡಬಹುದಂತೆ. ಇಬ್ಬರು ಇದ್ದರೆ ತಾನೇ ಜಗಳ. ಯುದ್ಧದಲ್ಲಿ ಅಸುನೀಗಿದವರಿಗೆ ವೀರಸ್ವರ್ಗವೆಂದು ನಂಬಿದ ಜನರೇ ಈ ಮಣ್ಣನ್ನು ನಂಬಿದ ರೀತಿ ಇದು. ಇದಕ್ಕನುಗುಣವಾಗಿಯೇ ಇದೆ-ತ್ರೇತಾದಲ್ಲಿ ಒಮ್ಮೆ ಇದೇ ಕುರುಕ್ಷೇತ್ರದಲ್ಲಿ ಪರಶುರಾಮನಿಂದ ಕ್ಷತ್ರಿಯ ರಕ್ತದ ಕೋಡಿ ಹರಿದಿತ್ತು; ಈಗ ದ್ವಾಪರದಲ್ಲಿ ಅದು ಮತ್ತೊಮ್ಮೆ ನಡೆಯಿತೆನ್ನುವ ಮಾತು.ಇತಿಹಾಸದಿಂದ ಪಾಠ ಕಲಿಯುವುದೆಂದರೆ ಇತಿಹಾಸವನ್ನು ಪ್ರತಿಯು ಗದಲ್ಲೂ ಮರಳಿ ಅನುಭವಿಸುವುದೇ ಆಗಿದೆಯೇನೋ. ಅರಿವಿನ ಪಾಠವನ್ನು ಅನುಭವದಿಂದ ಬೇರೆ ಮಾಡಿ ನೋಡಲಾಗುವುದಿಲ್ಲವೇನೋ !
ಆದರೆ, ಮಣ್ಣಿನಿಂದಲೇ ಹುಟ್ಟಿಕೊಂಡ ಮಾನವಪ್ರಜ್ಞೆ ಮಣ್ಣನ್ನು ಮೀರಬೇಕೆನ್ನುವ ತುಡಿತ ಕೂಡ ಸ್ವಾಭಾವಿಕವೇ ಆಗಿದೆ. ಆಕೆಂದರೆ-ಅದು ಪ್ರಜ್ಞೆಯಾಗಿರುವುದರಿಂದ, ವಿಚಾರ ಮಾಡ ಬಲ್ಲದಾದುದರಿಂದ. ವಿಚಾರವೆಂದರೆ ‘ಗತಿ’. ‘ಗತಿ’ಗೆ ನಿಲುಗಡೆ ಇಲ್ಲ. ಇದ್ದರೂ ತಾತ್ಕಾಲಿಕ. ಮೀರುತ್ತಲೇ ಹೋಗುವುದು. ಹಾಗೆ ವಿಕಾಸವನ್ನು ಸಾಧಿಸುವುದು ವಿಚಾರದ ಸ್ವ-ಧರ್ಮ. ಹೀಗಲ್ಲ ; ಹೀಗಿರಬಾರದು ಎನ್ನುವ ನೇತಿ ಅರಿವಿನ ಪಾಠ. ಆದುದರಿಂದಲೇ ಮಣ್ಣನ್ನು ತನ್ನದು ಎಂದು ಬಗೆಯುವುದು ನಿಜವಾದ ವಿಚಾರದ ನಿಲುಗಡೆಯಾದಂತೆ. ಮಣ್ಣು ನಿಜಕ್ಕೂ ತನ್ನದೇ ? ಮಣ್ಣಿನಿಂದಲೇ ಬಂದ ತಾನು ಮಣ್ಣನ್ನು ತನ್ನದೆಂದು ಬಗೆಯುವುದು ವಿಪರ‌್ಯಾಸ ವಲ್ಲವೆ ?-ಎಂದು ಕೇಳಿಕೊಳ್ಳುವುದು ಪ್ರಜ್ಞೆಯ ನಿಜವಾದ ತುಡಿತವಾಗಿದೆ. ಇದು ಪ್ರಜ್ಞೆಗೆ ಮಾತ್ರ ಸಾಧ್ಯ. ಈ ತುಡಿತ ಕಾಣದೆ ಇದ್ದರೆ, ಅಂಥ ರೂಕ್ಷ ನಡವಳಿಕೆಯನ್ನು ತಡೆದುಕೊಳ್ಳುವ ಸಾಮರ್ಥ್ಯ ಮಣ್ಣಿಗೇ ಇಲ್ಲವಂತೆ. ಆಗ ಅದನ್ನು ‘ಭೂ-ಭಾರ’ ಎನ್ನುತ್ತಾರೆ.ಅಹಂಕಾರದಿಂದ ತಮಗೆ ತಾವೇ ಭಾರವಾಗಿರುವವರನ್ನು ಹೊರಲೇಬೇಕಾದ ಭೂಮಿಗೆ ತಾನೇ ತನಗೆ ಭಾರ ವೆಂದು ಕಂಡರೆ ಅಚ್ಚರಿಯಿಲ್ಲ. ಭೂಮಿಗೆ ತಾನು ಭಾರವೆಂದು ಕಂಡರೆ ಯುಗದ ಕೊನೆಯಾ ದಂತೆ. ಹೀಗೆ ಕೊನೆಯಾಗುವುದೂ ನಿಸರ್ಗ ಸಹಜವಾಗಿ ನಡೆಯುವ ವಿದ್ಯಮಾನವಾಗಿದೆ. ಅಂದರೆ, ತಮ್ಮ ಭಾರಕ್ಕೆ ತಾವೇ ಕುಸಿಯುವುದು, ಹಾಗೆ ಕುಸಿಯುವಂತೆ ನಿಸರ್ಗವೇ ಏರ್ಪ ಡಿಸುವುದು,ಹಾಗೆ ತನ್ನನ್ನು ತಾನೇ ಸಮ ದೂಗಿಸಿ ಕೊಳ್ಳುವುದು-ಇದು ಸಹಜ ವಿದ್ಯ ಮಾನ ವೆಂದರೂ ಈ ವಿದ್ಯಮಾನಕ್ಕೆ ‘ಪ್ರಜ್ಞೆ’ಯೇ ಕಾರಣವಾಗಿದೆ. ಈ ಮಣ್ಣು ತನ್ನದಲ್ಲವೆಂದು ಭಾವಿಸಿ, ಹಾಗೆ ಭಾವಿಸುವ ಮೂಲಕ ತನ್ನನ್ನು ತಾನು ಮೀರಲೆಳಸುವ ಪ್ರಜ್ಞೆಯೇ ಈ ವಿದ್ಯಮಾನಕ್ಕೆ ಕಾರಣವಾಗಿದೆ. ಸಮದೂಗಿಸಿ ಕೊಳ್ಳುವುದು ಮತ್ತೆ ಮುನ್ನಡೆ ಸಾಧಿಸುವುದಕ್ಕಲ್ಲವೆ ?
ಈ ‘ಪ್ರಜ್ಞೆ ’ಯನ್ನು ‘ಅವತರಣ ’ ಎನ್ನುತ್ತಾರೆ. ಕೆಳಗಿಳಿದು ಬಂದದ್ದು ಎನ್ನುವ ಅರ್ಥದಲ್ಲಿ. ಭೂಮಿಯ ಮೊರೆ ಕೇಳಿ ಅದಕ್ಕೆ ಸ್ಪಂದಿಸಿ,ಪ್ರೀತಿಯಿಂದ ಇಳಿದು ಬಂದದ್ದು ಎನ್ನುವ ಅರ್ಥದಲ್ಲಿ ಇದು ತನ್ನದಲ್ಲ ಎನ್ನುವುದು ಅದಕ್ಕೆ ಅರ ಅನುಭವದಿಂದಲೇ ಗೊತ್ತು.ಆದರೂ,ಇದು ತನ್ನ ದೆಂಬಂತೆ ಅದು ಇಲ್ಲಿ ದುಡಿಯಬಲ್ಲುದು ಕೂಡ. ಅದರ ನಿರಾಳತೆಯೇ ಭೂಮಿಗೆ ಹಗುರದ ಅನುಭವ ಕೊಡಬಲ್ಲುದು !
ಹೀಗಿದ್ದನಂತೆ ಕೃಷ್ಣ !
ಆದುದರಿಂದಲೇ, ತಿಳಿದವರು-ಭೀಷ್ಮನಂಥವರು-ಕೃಷ್ಣ ಮೆಚ್ಚುವಂತೆ ಹೋರಾಡಬೇ ಕೆಂದು ಕುರುಕ್ಷೇತ್ರ ಯುದ್ಧದಲ್ಲಿ ಹೋರಾಡಿದರು. ಯುದ್ಧ ಮಾಡಲಾರೆನೆಂದ ಅರ್ಜುನನಿಗೆ ಕೃಷ್ಣನೇ ಹೇಳಿದ ; ನೀನು ಯುದ್ಧ ಮಾಡದೆ ಇರಲಾರೆ ; ನೀನು ಕ್ಷತ್ರಿಯ.ಯುದ್ಧ ಮಾಡುವೆನೆ ನ್ನುವುದು ಅಹಂಕಾರವಾದರೆ, ಯುದ್ಧ ಮಾಡಲಾರೆನೆನ್ನುವುದೂ ಇನ್ನೊಂದು ರೀತಿಯಲ್ಲಿ ಅಹಂಕಾರವೇ. ಯುದ್ಧ ಮಾಡಲಾರೆನೆನ್ನುವ ಕ್ಷತ್ರಿಯನೂ ಭೂಮಿಗೆ ಭಾರವೇ. ಈ ವಿಚಿತ್ರ ವನ್ನು ದಯವಿಟ್ಟು ಗಮನಿಸು, ಗಮನಿಸಿದರೆ -ಹೋರಾಟವೇ ನಿನ್ನ ಬಿಡುಗಡೆಯ ದಾರಿ ಎನ್ನುವುದು ಹೊಳೆಯುತ್ತದೆ ; ಎನ್ನುತ್ತ ತನ್ನ ದಾರಿಗೆ ಹಚ್ಚಿದ. ಇದಾವುದೂ ತಿಳಿಯದೆ ಹೊಟ್ಟೆಯ ಪಾಡಿಗೆಂದು ಯುದ್ಧ ಸನ್ನದ್ಧರಾಗಿ ಬಂದ ಸೈನಿಕರು-ಪ್ರಾಣಪಣವಿಟ್ಟೇ ಹೋ ರಾಡಬೇಕಾದುದರಿಂದ-ಏಕಾಗ್ರತೆಯನ್ನು ಸಾಧಿಸಲೇಬೇಕು. ‘ಗುರಿ’ಯನ್ನು ಛೇದಿಸಬಲ್ಲ ಬಾಣದ ಏಕಾಗ್ರತೆಯನ್ನು ನಿರೀಕ್ಷಿಸುತ್ತಲೇ ಇರುವ ‘ಗುರಿ’ಯು ಛೇದನಕ್ಕೆ ಮುನ್ನವೇ ಬಾಣದ ಬಗ್ಗೆ ತಾನು ಏಕಾಗ್ರವಾಗಿಯೇ ಇರುತ್ತದಲ್ಲವೆ ? ಕೃಷ್ಣ ಹಾಗಿದ್ದ !
ಇತ್ತ ಯಾದವರು ಕೊಬ್ಬುತ್ತಿದ್ದರು.ಕುರುಕ್ಷೇತ್ರದ ಕದನದಲ್ಲಿ ನಾಮಾಂಕಿತ ವೀರರೆಲ್ಲ ಅಳಿದ ಮೇಲೆ ಈಗ ಯಾದವರು, ಅಹಂಕಾರದಿಂದ ತೊನೆಯುವುದು ಸಹಜವಾದ ಬೆಳವಣಿಗೆ ಯಾಗಿತ್ತು.ವಿಚಿತ್ರವೆಂದರೆ,ಯಾದವರಿಗೆ ರಾಜಸೂಯದ ಕಾಲದಲ್ಲೇ ಅಗ್ರ ಪೂಜೆಗೊಂಡ ಕೃಷ್ಣನ ನೇತೃತ್ವವೆಂದ ಮೇಲೆ, ಬಲರಾಮನ ನೇತೃತ್ವವೆಂದ ಮೇಲೆ ಇದೇ ಕಾರಣವಾಗಿ ಯಾದ ವರಿಗೆ ತಲೆ ತಿರುಗಿದ್ದರೆ ಆಶ್ಚರ‌್ಯವಿಲ್ಲ. ಹಸ್ತಿನೆಯನ್ನು ಆಳುತ್ತಿರುವ ಪಾಂಡವರು ಯಾದವರ ಪರಮ ಮಿತ್ರರೂ ಆಗಿದ್ದರು. ಇದು ಇನ್ನಷ್ಟು ತಲೆ ತಿರುಗಿಸುವ ಸಂಗತಿಯೇ ಆಗಿತ್ತು. ಸಂಜೆ ಯಾಗುತ್ತಿದ್ದಂತೆ ದ್ವಾರಕೆಯ ಬೀದಿಗಳು ತೊನೆಯುತ್ತಲೂ ಇದ್ದವು. ಬೀದಿ ಬೀದಿಗಳಲ್ಲಿ ಮದ್ಯಶಾಲೆಗಳಿದ್ದವು. ನಾನಾ ಬಗೆಯ ಮದ್ಯಗಳೂ ಇದ್ದವು. ‘ಹಾಲಾ’ ಎಂಬ ಮದ್ಯ ಸ್ವಯಂ ಬಲರಾಮ ದೇವನಿಗೆ ಅತಿಪ್ರಿಯವಾದುದಾಗಿತ್ತು. ‘‘ಹಾಲಾಂ-ಅಭಿಮತರಸಾಂ ’’ಅತಿಪಾನ, ಕಲಹಗಳು ಸಾಮಾನ್ಯ ಸಂಗತಿಗಳೆನಿಸಿದ್ದವು. ಯಾದವರಿಗೆ ಬೇರೆ ಶತ್ರುಗಳೇ ಬೇಕಿರಲಿಲ್ಲ. ಅಂತಃ ಕಲಹ ಅಷ್ಟಿತ್ತು ! ಒಳಗುದಿ ಒಂದು ದಿನ ಹೊರ ಬರಲೇಬೇಕಲ್ಲ !
ಈ ಎಲ್ಲದರ ಮಧ್ಯೆ,ಯಾದವರ ನಡುವೆಯೇ ಉದ್ಧವನಂಥ ಸೂಕ್ಷ್ಮಜ್ಞರಿದ್ದರು. ಉದ್ಧವ ನಿಗೆ ಕೃಷ್ಣನ ವ್ಯಕ್ತಿತ್ವದ ಸೆಳೆತವಿತ್ತು. ಆ ಪ್ರೀತಿಯಂದಲೇ ಕೃಷ್ಣನನ್ನು ಅರ್ಥ ಮಾಡಿಕೊಳ್ಳಲು ಯತ್ನಿಸುತ್ತಿದ್ದ. ಯುಗವೇ ತನಗಾಗಿ ಆಯ್ಕೆ ಮಾಡಿದ ವ್ಯಕ್ತಿಯಂತೆ-ಯುಗಪುರುಷನಂತೆ- ಕೃಷ್ಣ,ಉದ್ಧವನಿಗೆ ಕಂಡು ಬರುತ್ತಿದ್ದ. ಆದರೆ, ಯಾದವರ ಇಂದಿನ ಪರಿಸ್ಥಿತಿ ಉದ್ಧವನಲ್ಲಿ ಕಳ ವಳವನ್ನುಂಟು ಮಾಡುತ್ತಿತ್ತು. ಕೃಷ್ಣನಂಥವನು ಹುಟ್ಟಿ ಬಂದ ಕುಲ ! ಯಾಕೆ ಹೀಗಾಗಿದೆ ? ಏನು ಯುಗವೇ ಕೊನೆಗೊಳ್ಳುವುದೇ ? ಉದ್ಧವ ಕೃಷ್ಣನನ್ನು ಸಂಧಿಸಿದ. ತನ್ನ ಬಗೆಯನ್ನು ತೋಡಿಕೊಂಡ. ಕೃಷ್ಣ ಉದ್ಧವರ ಸಂವಾದವೇ ಉದ್ಧವಗೀತಾ. ಅದಕ್ಕೆ ಅವಧೂತ ಗೀತಾ ; ಭಿಕ್ಷುಗೀತಾ ಎಂದೂ ಹೇಳುವುದುಂಟು. ಅವಧೂತನಿಗೆ ನಿಸರ್ಗವೇ ಗುರು. ಅವಧೂತನೆಂ ದರೆ ನೈಸರ್ಗಿಕ ಮನುಷ್ಯ.ನಿಸರ್ಗಕ್ಕೆ ದ್ವಂದ್ವಗಳಿಲ್ಲ. ನೀನು ಸಹಜವಾಗಿದ್ದರೆ, ನಿಸರ್ಗ ತನ್ನೆಲ್ಲ ಅರಿವನ್ನೂ ನಿನಗೆ ಭಿಕ್ಷೆಯಂತೆ ಎತ್ತಿಕೊಡಲು ಸಿದ್ಧವಾಗಿಯೇ ಇದೆ. ಮಣ್ಣು ಮತ್ತು ಪ್ರಜ್ಞೆ- ಎರಡೂ ಬೇರೆ ಬೇರೆಯಲ್ಲ. ಒಂದೇ ಚಿದಂಶದ ಎರಡು ಮುಖಗಳಿವು. ಇತ್ಯಾದ್ಯನೇಕ ಸೂಕ್ಷ್ಮ ವಿಚಾರಗಳ ಅನುರಣವಿದೆ ; ಉದ್ಧವನೊಡನೆ ಕೃಷ್ಣನಾಡಿದ ಮಾತುಗಳಲ್ಲಿ.
ಕೃಷ್ಣ ಕೊನೆಯದಾಗಿ ಹೇಳಿದ : ನೀನು ದ್ವಾರಕೆಯನ್ನು ಬಿಟ್ಟು ಬದರಿಕೆಗೆ ಹೋಗು. ಬದುಕಿನ ಅರ್ಥವನ್ನು ಚಿಂತಿಸುತ್ತಿರು. ಇತಿಹಾಸವನ್ನು ಸಾಕ್ಷಿಯಾಗಿ ನೋಡುತ್ತಿರು ಬದರಿಕೆ ಯಲ್ಲಿರುವ ನರ-ನಾರಾಯಣ ಬೆಟ್ಟಗಳಂತೆ ! ನಿನ್ನಲ್ಲಿ ತಾನಾಗಿ ಬಂದು ಜಿಜ್ಞಾಸೆ ಮಾಡುವವ ರಿರಬಹುದು. ಅವರೊಡನೆ ನಿನ್ನ ಅನುಭವಕ್ಕೆ ನುಡಿಗೊಡು. ಉದ್ಧವನಿಗೆ,ಕೃಷ್ಣ ತನ್ನನ್ನು ದ್ವಾರಕೆ ಯನ್ನು ಬಿಟ್ಟು ಹೋಗೆಂದುದೇಕೆಂದು ತತ್ ಕ್ಷಣ ತಿಳಿಯಿತು. ಎಲ್ಲ ಮೋಹವನ್ನು ಕಳಚಿಕೋ ಎನ್ನುತ್ತಿದ್ದಾನೆ - ಈ ಮೋಹಕ ಮೂರ್ತಿ ! ದ್ವಾರಕೆಗೆ ಬಾ ಎಂದಿದ್ದ.ಈಗ ಹೋಗೆನ್ನುತ್ತಿದ್ದಾನೆ. ತಾನೇ ಕಟ್ಟಿದ ದ್ವಾರಕೆಯ ಮೇಲೆ ತನಗೇ ಮೋಹವಿಲ್ಲ ಕೃಷ್ಣನಿಗೆ ! ನನಗೂ ಮೋಹವಿರ ಕೂಡದೆನ್ನುತ್ತಾನೆ. ಆ ಮೂಲಕ ತಾನು ಕಟ್ಟಿದ್ದನ್ನು ಅವನ ಭಕ್ತನಾದ ತನ್ನ ಮೂಲಕ ಮುರಿಯುತ್ತಿ ದ್ದಾನೆ ! ಉದ್ಧವನಿಗೆ ಕಂಬನಿ ತುಂಬಿತು. ಉದ್ಧವ ಬದರಿಕೆಗೆ ನಡೆದ. ಆ ಬದರಿಕೆಯಲ್ಲೇ ಮಹಾಕವಿ ವ್ಯಾಸರು ‘ಭಾಗವತ ’ವನ್ನು ಬರೆದದ್ದು !
ದ್ವಾರಕೆಯಲ್ಲಿ ಒಮ್ಮೆ ಹೀಗಾಯಿತು.
ತಪಸ್ವಿಗಳ ಪಂಗಡವೊಂದು ದ್ವಾರಕೆಗೆ ಬಂದಿತ್ತು. ಕೃಷ್ಣನೊಡನೆ ಮಾತುಕತೆಯಾಡ ಲೆಂದಿರಬೇಕು. ಇತ್ತ ‘ಸಾಂಬ ’ ಮತ್ತವನ ಗೆಳೆಯರು ಸೇರಿದರು.ಸಾಂಬನಿಗೆ ಬಸುರಿ ಹೆಂಗಸಿ ನಂತೆ ವೇಷ ತೊಡಿಸಿದರು. ಮೆಲ್ಲನೆ ಸಾಂಬನನ್ನು ನಡೆಸುತ್ತ ತಪಸ್ವಿಗಳ ಬಳಿ ಬಂದು ಈ ಹೆಂಗಸು ಹೆರುವುದು ಗಂಡೋ-ಹೆಣ್ಣೋ ಹೇಳಿ ಎಂದರು. ಋಷಿಗಳು ಒಮ್ಮೆ ಸಾಂಬನನ್ನು ಮೇಲೆ ಕೆಳಗೆ ನೋಡಿದರು. ಕೋಪ ಮಸಗಿತು. ಹೇಳಿದರು : ‘ಏರಡೂ ಅಲ್ಲ,ನಪುಂಸಕವೂ ಅಲ್ಲ .ಹೆರುವುದು ಒಂದು ಒನಕೆಯನ್ನು ಮತ್ತು ಯಾದವ ವಂಶದ ನಾಶಕ್ಕೆ ಆ ಒನಕೆಯೇ ಸಾಕು. ಭವಿಷ್ಯವಾಚನ ಇಲ್ಲಿಗೆ ಸಾಕಲ್ಲ .’
ಹುಡುಗರಿಗೆ ಈಗ ನಿಜಕ್ಕೂ ಗಾಬರಿಯಾಯಿತು. ಬಸುರಿಯಂತೆ ಕಾಣಲು ಸಾಂಬನ ಹೊಟ್ಟೆಗೆ ಒನಕೆಯನ್ನೇ ತುಂಡರಿಸಿ ಕಟ್ಟಿದ್ದರೇನೋ. ಆ ಒನಕೆಯನ್ನು ಕಲ್ಲಿನಲ್ಲಿ ತೇದು ಸಣ್ಣ ಚೂರುಗಳಾಗಿ ಮಾಡಿ ಪ್ರಭಾಸದ ಕಡಲಿನಲ್ಲಿ ಎಸೆದರು. ದ್ವಾರಕೆಯಲ್ಲಲ್ಲ.ಪ್ರಭಾಸದಲ್ಲಿ ಹುಡುಗರಿಗೆ ದ್ವಾರಕೆಯ ಮೇಲೆ ಮೋಹವಿತ್ತು ! ಕಡಲು ಹೆದ್ದೆರೆಗಳ ಮೂಲಕ ಮರಳಿ ಆ ಚೂರುಗಳನ್ನು ದಡದ ಮರಳಿಗೆ ಎಸೆಯಿತು. ನಿಮ್ಮ ‘ಪಾಪ ’ನಿಮಗೇ ಇರಲಿ ಎನ್ನುವಂತೆ. ಆ ಮರಳಿನಲ್ಲಿ ಒಂದು ವಿಧದ ಜೊಂಡು ಹುಲ್ಲು-ಅಲಗಿನಂಥ ಹರಿತ ಎಲೆಯ ಒಂದು ಜಾತಿಯ ಹುಲ್ಲು ದಟ್ಟವಾಗಿ ಬೆಳೆಯುತ್ತಿತ್ತು. ಈ ಒನಕೆಯ ಚೂರು ಆ ಹುಲ್ಲಿಗೆ ಗೊಬ್ಬರವಾ ಯಿತು. ಹುಲ್ಲು ಬೆಳೆಯಿತು. ಒನಕೆಯ ಸ್ವಲ್ಪ ಉದ್ದನೆಯ ಚೂರೊಂದು ಬೇಡನೊಬ್ಬನಿಗೆ ಸಿಕ್ಕಿತು. ತನ್ನ ಬಾಣದ ಮೊನೆಯಾಗುವುದಕ್ಕೆ ಇದು ಸರಿಯಾಗಿದೆ ಎಂದುಕೊಂಡ. ಆ ತುಣು ಕನ್ನು ಮತ್ತಷ್ಟು ಹರಿತ ಮಾಡಿ ಬಾಣಕ್ಕೆ ಸಿಕ್ಕಿಸಿ,ಯಾವಾಗ ಈ ಬಾಣವನ್ನು ಪ್ರಯೋಗ ಮಾಡಿ ಯೇನು ಎಂದು ತವಕಪಡುತ್ತಿದ್ದ. ತುಣುಕಿಗೆ ಯಾವಾಗಲೂ ತವಕ !
ಕೃಷ್ಣ ಒಮ್ಮೆ ಯಾದವರಿಗೆ ಹೇಳಿದ : ಗೋಕುಲದಿಂದ ವೃಂದಾವನಕ್ಕೆ ಬಂದೆವು. ವೃಂದಾ ವನದಿಂದ ಮಧುರೆಗೆ. ಮಥುರೆಯಿಂದ ದ್ವಾರಕೆಗೆ ; ದ್ವಾರಕೆಯೂ ಕ್ಷೇಮದ ನೆಲೆಯಂತೆ ಕಂಡು ಬರುತ್ತಿಲ್ಲ.ಇಲ್ಲೂ ಉತ್ಪಾತಗಳಾಗುತ್ತಿವೆ. ನಾವೊಮ್ಮೆ ಪ್ರಭಾಸಕ್ಕೆ ಹೋಗಿ ನೋಡಿ ಬರೋ ಣ. ಹಾಗೆ. ಹೆಚ್ಚಿನ ಯಾದವರೆಲ್ಲ ಪ್ರಭಾಸಕ್ಕೆ ನಡೆದರು. ಅಲ್ಲೇ ನಡೆದದ್ದು ಆ ಘೋರ.
ಪ್ರಭಾಸದ ಕಡಲ ತೀರದಲ್ಲಿ ಯಾದವರೆಲ್ಲ ಸೇರಿದರು. ದ್ವಾರಕೆಯಿಂದ ಹೊರಟಾಗಲೇ ಅಮಲೇರಿತ್ತು. ಪ್ರಭಾಸದಲ್ಲಿ ಮತ್ತೊಮ್ಮೆ ಪಾನವಾಯಿತು. ಒಳಗುದಿ ಪ್ರಕಟವಾಗತೊಡಗಿತು. ಅವರಲ್ಲೇ ಅಸಂಖ್ಯೆ ಗುಂಪುಗಳಿದ್ದವು. ಮಾತಿಗೆ ಮಾತು ಇರಿಯಿತು. ಉರಿಯಿತು. ಕೈಗೆ ಕೈ ಹಚ್ಚಿದರು. ಗುಪ್ತ ಶಸ್ತ್ರಗಳಿದ್ದವು. ಅವು ಝಳಪಿಸಿದವು. ಕಡಲಿಗೆ ಭರತ ಬಂದಂತಾಯಿತು. ರೋಷದ ತೆರೆಗಳು ಉಕ್ಕೇರಿದವು. ಕೃಷ್ಣ ಬಲರಾಮ ತಡೆಯಬಂದರು.ತಡೆಯಲಾಗಲಿಲ್ಲ. ಪ್ರಭಾಸಕ್ಕೆ ಒಯ್ದದ್ದೇ ಕೃಷ್ಣನ ಸಂಚೆಂಬಂತೆ ಕಾಣಲು ತೊಡಗಿತು. ಪರಸ್ಪರ ಹೊಯ್ದಾಡಿದರು. ನೆತ್ತರು ಚಿಮ್ಮಿದವು. ಶಸ್ತ್ರಗಳು ಮುರಿದವು. ಅಲ್ಲೇ ಬೆಳೆದಿದ್ದ ಹುಲ್ಲು ಕಿತ್ತು, ಅದರ ಅಲಗಿನಂಥ ಎಲೆಗಳನ್ನು ಹೊಯ್ದು ಕಿತ್ತಾಡಿದರು. ತಲೆಗಳುರುಳಿದವು. ಹುಲ್ಲಿಗೂ ಕುಡುಗೋಲಿಗೂ ಅಂತರವಿಲ್ಲದೇ ಹೋಯಿತು ! ಯಾರ ಮಾತು ಯಾರು ಕೇಳದೆ ಹೋದರು. ಬಲರಾಮ ದೇವನಿಗೆ ಜಿಗುಪ್ಸೆಯುಂಟಾಯಿತು.
ಒನಕೆ, ಬಲರಾಮನ ಪ್ರಸಿದ್ಧ ಆಯುಧವಾಗಿತ್ತು ! ಈಗ ಹೀಗಾಗಿದೆ ! ಪಶುಪಾಲಕರಾದ ಯಾದವರಿಗೆ ಹುಲ್ಲು ಜೀವನಾಧಾರವಾಗಿತ್ತು. ಹೂವ ತರು ವರ ಮನೆಗೆ ಹುಲ್ಲ ತರುವ ಎನ್ನುವ ನುಡಿ ಕೃಷ್ಣನನ್ನು ಕೊಂಡಾಡುವ ನುಡಿಯಾಗಿತ್ತು. ಈಗ ಹುಲ್ಲಿನಲ್ಲೇ ಹೊಡೆದಾಡಿ ಸಾಯುತ್ತಿದ್ದಾರೆ ! ಬಲರಾಮ-ದೂರ ನಡೆದ. ಮರ ಒಂದರ ಅಡಿ ನೆರಳಲ್ಲಿ ಕುಳಿತ. ತನ್ನ ಉಸಿರಿನಲ್ಲಿ ಏಕಾಗ್ರನಾಗಿ ದೇಹವನ್ನು, ಹಾವು ಪೊರೆ ಕಳಚಿದಂತೆ, ಎಸೆದ. ಕೃಷ್ಣನಿಗಿಂತ ಮೊದಲು ಬಂದವ ಈ ಭೂಮಿಗೆ. ಮೊದಲು ಹೋದ.
ಕೊನೆಯ ಅಂಕ ನಡೆಯಬೇಕಿತ್ತು.ಪ್ರದ್ಯುಮ್ನ ; ಸಾಂಬ ಹೊಡೆದಾಡಿಕೊಂಡು ಸತ್ತಿದ್ದರು. ಇಬ್ಬರೂ ಕೃಷ್ಣನ ಮಕ್ಕಳು. ಈಗ ಕೃಷ್ಣ ತಾನೇ ಗದೆಯನ್ನು ಹಿಡಿದ. ಕುರುಕ್ಷೇತ್ರದ ಭೀಮನ ಆವೇಶ ಬಂದಂತಾಯಿತು. ಕೃಷ್ಣ ಯಾದವರ ಮೇಲೆ ತಾನೇ ಎರಗಿದ. ಎಷ್ಟು ಹೊತ್ತು ! ಸ್ವಲ್ಪದರಲ್ಲಿ ಎಲ್ಲವೂ ಉಪಶಾಂತವಾಯಿತು !ಜೊಂಡು ಹುಲ್ಲಿನ ಮೇಲೆ ಹೆಣಗಳ ರಾಶಿ ! ದಾರಿ ಮಾಡಿಕೊಳ್ಳುತ್ತ ಕೃಷ್ಣ ಬಲರಾಮನನ್ನು ಹುಡುಕಿಕೊಂಡು ನಡೆದ. ಬಲರಾಮನ ದೇಹ ಅಲ್ಲಿತ್ತು. ಜೊತೆಯಲ್ಲಿ ಹೋಗಲಾಗಲಿಲ್ಲ ಎಂದುಕೊಂಡ. ಮರದ ನೆರಳಲ್ಲಿ ವಾಲಿದ. ಬೇರಿಗೆ ತಲೆ ಒರಗಿಸಿದ. ಮೊಣಕಾಲ ಮೇಲೆ ಮೊಣಕಾಲು ಹಾಕಿ ಬೆರಳು ಅಲುಗಿಸುತ್ತ ಕಣ್ಣು ಮುಚ್ಚಿದ. ಅಷ್ಟು ನಿರಾಳ !
ದೂರದಲ್ಲಿ ಬೇಡ,ಹೊಂಚುತ್ತಿದ್ದ.ಬಾಣ ಗುರಿಯನ್ನು ಹೊಂಚುತ್ತಿತ್ತು. ಒನಕೆಯ ತುಣು ಕು ಹೊಂಚುತ್ತಿತ್ತು. ಋಷಿ ಶಾಪ ಕೃಷ್ಣನಿಗೂ ಹೊಂಚುತ್ತಿತ್ತು. ಒನಕೆಯಿಂದ ತಪ್ಪಿಸಿಕೊಂಡವ ಒಬ್ಬನೇ ಒಬ್ಬ ಯಾದವ ; ಅದು ನಮ್ಮಣ್ಣ ಬಲರಾಮ ; ಅವನು ಒನಕೆಯನ್ನೇ ಆಯುಧವಾಗಿ ಹೊತ್ತದ್ದು ಸಾರ್ಥಕವಾಯಿತು ; ಒನಕೆ ಹೆಗಲ ಮೇಲೆ ಇದ್ದರೂ ಅದರ ಅರ್ಥವಾಗುವುದು ಎಷ್ಟು ದೂರದಲ್ಲಿದೆ ಎಂದುಕೊಂಡು ಕೃಷ್ಣ ಸಣ್ಣ ನಗು ತುಳುಕಿಸುತ್ತಿದ್ದಂತೆ, ಸರಕ್ಕನೆ ಬಲಪಾದಕ್ಕೆ ಬಾಣ ನಾಟಿತು.ನೆತ್ತರು ಚಿಮ್ಮಿತು. ಕಾಲಿನ ನರ ನೋವಿನಿಂದ ಪತರಗುಟ್ಟಿತು. ಆದರೂ ಮೊಣ ಕಾಲ ಮೇಲೆ ಮೊಣಕಾಲು ಹಾಗೇ ಇತ್ತು.
ತನ್ನ ಗುರಿಗಾಗಿ ಹುಡುಕುತ್ತ ಬೇಡ ಹತ್ತಿರ ಬಂದ. ನೋಡಿದರೆ ಆಘಾತ. ‘ಮೃಗ ’ವೆಂದು ಕೊಂಡರೆ ಇದು ‘ದೇವರು ’. ಆತ ಕೃಷ್ಣನ ಬಗ್ಗೆ ಕೇಳಿದ್ದ. ದೂರದಿಂದ ಒಮ್ಮೆ ನೋಡಿದ್ದ. ಈಗ ಕುಸಿದು ಕುಳಿತ. ಕೃಷ್ಣನೇ ಅವನನ್ನು ಸಾಂತ್ವನ ಮಾಡಿದ. ‘ನನ್ನನ್ನು ದೇವರೆಂದು ಕೊಂಡೆ ಯಾ ? ಒಳ್ಳೆಯದು. ಎಲ್ಲರೂ ಹೊಗಳುವ ಪಾದಗಳನ್ನು ನಿನ್ನ ಬಾಣದ ಗುರಿಯಾಗಿಸಿ ಕೊಂಡೆಯಲ್ಲ. ನೀನು ಭೀಷ್ಮನಿಗೆ ಸರಿ ಸಮನಾದೆ. ಕುರುಕ್ಷೇತ್ರದ ಬಯಲು ಪ್ರಭಾಸದವರೆಗೆ ವಿಸ್ತರಿಸಿತು ನೋಡು. ನಿನ್ನ ಗುರಿಯನ್ನು ಮೆಚ್ಚಿದೆನಯ್ಯ ; ನಿನ್ನ ಏಕಾಗ್ರತೆಯನ್ನು ಮೆಚ್ಚಿದೆ. ಎಲ್ಲಿ ಏಕಾಗ್ರತೆ ಇದೆ ಅಲ್ಲಿ ನನ್ನ ‘ಪಾದ ’ಇದೆ. ಅಲ್ಲಿ ನನ್ನದೇ ‘ನಡೆ ’ಇದೆ. ನೀನು ಸ್ವರ್ಗಕ್ಕೆ ಸೇರಿ ಹೋದೆ ! ’-ಅದು ವೀರಸ್ವರ್ಗವೇ ಇರಬೇಕು !
ಕೃಷ್ಣನನ್ನು ಹುಡುಕುತ್ತ ಅವನ ಪ್ರಿಯ ಸಾರಥಿ,ದಾರುಕ ಬಂದ. ನೋಡಿ ದಾರುಕನಿಗೆ ಎದೆಯೊಡೆಯಿತು. ಕೃಷ್ಣ ತನ್ನ ಕೊನೆಯ ಸಂದೆೀಶವನ್ನು ದಾರುಕನಿಗೆ ಹೇಳಿದ : ದ್ವಾರಕೆ ಇನ್ನೇಳು ದಿನಗಳಲ್ಲಿ ಕಡಲ ಹೆದ್ದೆರೆಗಳಲ್ಲಿ ಮುಳುಗಲಿದೆ. ಅದಕ್ಕೆ ಮುನ್ನ ದ್ವಾರಕೆಯಲ್ಲಿರುವ ಎಲ್ಲರೂ ಹೆಂಗಸರು ;ಮಕ್ಕಳು ಮುದುಕರು ಎಲ್ಲರೂ ರಾಜಧಾನಿಯನ್ನು ಬಿಟ್ಟು ತೆರಳಬೇಕು. ಹಸ್ತಿನೆಯಲ್ಲಿರುವ ಅರ್ಜುನನಿಗೆ ನಡೆದುದೆಲ್ಲವನ್ನೂ ತಿಳಿಸಿ, ಇವರೆಲ್ಲರನ್ನೂ ಕಾಪಾಡುವ ಹೊಣೆಯನ್ನು ಅರ್ಜುನನಿಗೆ ವಹಿಸಿರುವೆನೆಂದು -ಕೂಡ ಹೇಳಿ. ಓ ನನ್ನ ದಾರುಕ ; ಮೋಹ ವನ್ನು ಬಿಟ್ಟುಕೊಟ್ಟು ಇಷ್ಟು ಕರ್ತವ್ಯವನ್ನು ಮಾಡುವೆಯೇನು ? ನೀರವನಾಗಿ ರೋದಿಸುತ್ತಿದ್ದ ದಾರುಕನಿಗೆ ಅನ್ನಿಸಿತು- ಈ ಮಹಾನುಭಾವನ ಕಾಲ ಮೇಲೆೆ ಹೊರಳಿ, ಮೋಹವನ್ನು ನೀನೇ ಬಿಡಿಸು ಎಂದು ಕೇಳುವುದಲ್ಲದೆ ಬೇರೆ ದಾರಿ ಇಲ್ಲವೆಂದು !
ಹೀಗೆ ಯುಗದ ಅಂತ್ಯವಾಯಿತು. ದೇವರ ಸ್ವಭಾವ-ಗುಣ ‘ಆಶ್ಚರ‌್ಯ’ವೆನ್ನುತ್ತಾರೆ. ದೇವ ರನ್ನು ಮುಟ್ಟಿದವನು ಆಶ್ಚರ‌್ಯದಲ್ಲಿ ಮುಳುಗುತ್ತಾನಂತೆ. ಇರಬಹುದು.ಲೌಕಿಕದಲ್ಲಿ ಕಾಲು ನೆಟ್ಟ ನಮಗೆ ಆ ಆಶ್ಚರ‌್ಯವೇ ‘ದಿಗ್ಭ್ರಮೆ’ಯಾಗಿ ಪರಿಣಮಿಸಿದರೆ ಆಶ್ಚರ‌್ಯವಿಲ್ಲ ! ‘ದಿಗ್ಭ್ರಮೆ ’ಏನು ಸಾಮಾನ್ಯ ಅನುಭವವೇ ?
ಪರಿಕ್ಷಿದ್ರಾಜ -ತನ್ನ ಪೂರ್ವಜರ ಕಥೆಯನ್ನು ತಾನು ಕೇಳುತ್ತಿದ್ದ. ಶುಕಮುನಿ ಕಥೆ ಹೇಳುತ್ತಿದ್ದರೆ, ಸ್ವಯಂ ಕೃಷ್ಣನೇ ಇನ್ನೊಂದು ರೂಪದಿಂದ ಹೇಳುತ್ತಿದ್ದಂತೆ ಇತ್ತು.
ಕೃಷ್ಣನು ಶಾಪವನ್ನು ಸ್ವೀಕರಿಸಿದ ಬಗೆಯನ್ನು ನೆನೆದು, ಶಾಪವನ್ನು ವರವಾಗಿಸಬಲ್ಲ, ಬದುಕಿನ ವಿಚಿತ್ರ ಪರಿವರ್ತಕ ಶಕ್ತಿಯನ್ನು ಚಿಂತಿಸುತ್ತ,ವಿಸ್ಮಯದಿಂದ ಪರೀಕ್ಷಿದ್ರಾಜನಿಗೆ ಕಂಬನಿ ದುಂಬಿತ್ತು. ಸಾವು ತನ್ನ ಮಿತ್ರನೆಂಬ ಸತ್ಯ ಹೊಳೆಯಿತು. ತಕ್ಷಕ, ತನ್ನ ಅತಿಥಿ ಎಂಬ ಸಂಭ್ರಮ ಉಂಟಾಯಿತು.
ಇತ್ತ ತಕ್ಷಕನಿಗೆ ವಿಷದ ಪೊಟರೆ ತುಂಬುತಿತ್ತು. ಆತ ಅವಸರವಸರವಾಗಿ ಗಂಗೆಯ ದಡದತ್ತ ಸರಿದು ಬರುತ್ತಿದ್ದ. ನಡುವಿನ ಬಯಲಲ್ಲಿ ಒಬ್ಬ ಬ್ರಾಹ್ಮಣ ಭೆಟ್ಟಿಯಾದ, ಅವನು ಕಶ್ಯಪ. ಪ್ರಚಂಡ ವಿಷ ವೈದ್ಯ. ತಕ್ಷಕನ ವಿಷದಿಂದ ರಾಜನನ್ನು ಕಾಪಾಡಲೆಂಬಂತೆ ಬರುತ್ತಿದ್ದವ. ತಕ್ಷಕನಿಗೆ ಅದನ್ನು ಪರೀಕ್ಷಿಸೋಣ ಎನ್ನಿಸಿತು. ಬಳಿಯಲ್ಲಿದ್ದ ಹಸಿರಿನಿಂದ ಕಂಗೊಳಿಸುತ್ತಿದ್ದ ಮರವನ್ನು ಕಡಿದ. ವಿಷದ ಉರಿಗೆ ಮರ ಒಣಗಿ ಹೋಯಿತು. ತಕ್ಷಕ ನೋಡುತ್ತಿದ್ದಂತೆ, ಈ ವಿಷ ವೈದ್ಯ ಅದೇನೋ ಮೂಲಿಕೆ ; ಅದೇನೋ ಮಂತ್ರ ಮಾಡಿದ. ಮರ ಮತ್ತೆ ನಳನಳಿಸಿತು. ತಕ್ಷಕನಿಗೆ ವಿವಂಚನೆಯಾಯಿತು.ಆತ, ಕಶ್ಯಪನನ್ನು ಒಡಂಬಡಿಸಿ, ಆತನಿಗೆ ಹೇರಳ ಹಣವನ್ನು ಕೊಟ್ಟು ಮರಳಿ ಕಶ್ಯಪನನ್ನು ಮನೆಯತ್ತ ಕಳುಹಿಸಿಕೊಟ್ಟು ತಾನು ರಾಜನತ್ತ ನಡೆದ. ವಿಚಿತ್ರವೆಂದರೆ, ಆ ಮರದಲ್ಲಿ ಒಬ್ಬ ಮನುಷ್ಯನಿದ್ದ. ಒಣಗಿದ ಗೆಲ್ಲುಗಳಿದ್ದರೆ, ಕಡಿದರೆ,ಸೌದೆಗಾಯಿತೆಂದು ಮರವನ್ನು ಹತ್ತಿದ್ದ. ತಕ್ಷಕ ಮತ್ತು ವಿಷ ವೈದ್ಯನ ಸಂಭಾಷಣೆ ಕೇಳಿಸಿಕೊಂಡಿದ್ದ. ತಕ್ಷಕನೆಂದು ತಿಳಿದು ಹೆದರಿ ಅಲ್ಲೇ ಮರವನ್ನು ಅವಚಿ ಅಡಗಿದ್ದ. ತಕ್ಷಕನ ವಿಷಕ್ಕೆ ಬೆಂದು ಹೋದ. ವಿಷ ವೈದ್ಯನ ಪ್ರಯೋಗಕ್ಕೆ ಮರಳಿ ಜೀವ ಕಳೆ ತಳೆದು,ಪುನರ್ಜನ್ಮ ಪಡೆದವನಂತೆ, ಅವರೀರ್ವರೂ ಹೊರಟು ಹೋದ ಮೇಲೆ, ಮೆಲ್ಲನೆ ಮರವನ್ನಿಳಿದು, ಅದ್ಭುತವಾದ ಈ ಘಟನೆಯನ್ನು ಊರಿ ಗೆಲ್ಲ ಬಿತ್ತರಿಸಿದನಂತೆ.
ಸೂತ ಪುರಾಣಿಕ ಈ ಕಥೆಯನ್ನು ಹೇಳಿ ; ಸ್ವಲ್ಪ ತಡೆದು, ಶೌನಕಾದಿಗಳಿಗೆ ಹೇಳಿದನತೆ ಈ ಕಥೆ ವ್ಯಾಸರ ಉನ್ನತ ಪ್ರತಿಭೆಗೆ ಸೂಚಕವಾಗಿದೆ. ಇದನ್ನು ಯಾರಾದರೂ ಸ್ವಲ್ಪ ಬಿಡಿಸಿ ಹೇಳಿ, ಕೇಳೋಣ ಎಂದ. ಸ್ವಲ್ಪ ಯೋಚಿಸಿ, ರೋಮಾಂಚನಗೊಂಡವನಂತೆ,ಶೌನಕ ಮಹ ರ್ಷಿ ಹೇಳಿದ ; ಓ ಸೂತ ಪುರಾಣಿಕ ; ಮರದ ಮೇಲೆ ಅಡಗಿಕೊಂಡಿದ್ದ ವ್ಯಕ್ತಿ ಇದ್ದಾನಲ್ಲ- ಅವನೊಬ್ಬ ನಿಜವಾದ ಕೇಳುಗ.
ಭಾಗವತವನ್ನು ಹೇಗೆ ಕೇಳಬೇಕು ಎಂಬುದನ್ನು ಆ ಘಟ ನೆಯ ಮೂಲಕ ವ್ಯಾಸರು ಸೂಚಿಸುತ್ತಿದ್ದಾರೆನ್ನಿಸುತ್ತದೆ. ಅವನು ಚಿರಾಯು. ಅವನ ಕೇಳ್ಮೆಯ ಮೂಲಕ ಕತೆ ಚಿರಾಯು. ತಕ್ಷಕ ಸೋತಂತಯೇ. ಅಲ್ಲವೆ ? ಸೂತ ಪುರಾಣಿಕ ಹೇಳಿದನಂತೆ ; ಸರಿಯಾಗಿದೆ ಮಾತು. ಭಾಗವತದ ಒಂದು ಬದಿಯಲ್ಲಿ ಮರದ ಕೆಳಗೆ ತನ್ನ ಕೊನೆಯ ಕ್ಷಣಗಳನ್ನು ಕಳೆದ ಕೃಷ್ಣನಿದ್ದರೆ, ಇನ್ನೊಂದು ಬದಿಯಲ್ಲಿ ಮರದ ಮೇಲೆ ಅಡಗಿದ್ದ ಇಂಥ ಕೇಳುಗನಿದ್ದಾನೆ ! ಇಬ್ಬರನ್ನೂ ಇನ್ನೊಮ್ಮೆ ನೆನೆದು ವಿರಮಿಸೋಣವೇ ?
ಸಂಪಿಗೆ ಭಾಗವತ -41
- ಲಕ್ಷ್ಮೀಶ ತೋಳ್ಪಾಡಿ
ಸೆಲ್ ನಂ.8971128105'