9/18/2019

ದೇಶ | ವಿದೇಶ ವಿವರ ಪುಟ

ಪಂಚಭೂತಗಳಲ್ಲಿ ಲೀನವಾದ ಅರುಣ ಜೇಟ್ಲಿ

Font size -16+

'ಯುಎನ್‌ಐ, ನವದೆಹಲಿ, ಆ.25
ರಾಜಕೀಯ ಧುರೀಣ ಹಾಗೂ ಬಿಜೆಪಿ ಮುಖಂಡ ಅರುಣ್ ಜೇಟ್ಲಿ ಅವರ ಪಾರ್ಥೀವ ಶರೀರಕ್ಕೆ ಇಲ್ಲಿನ ನಿಗಮ್ ಬೋಧ್ ಘಾಟ್ ನಲ್ಲಿ ಸಕಲ ಸರ್ಕಾರಿ ಗೌರವದೊಂದಿಗೆ ಅಂತ್ಯಕ್ರಿಯೆ ನೆರವೇರಿಸಲಾಯಿತು.
ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು, ಬಿಜೆಪಿ ಹಿರಿಯ ನಾಯಕ ಲಾಲ್ ಕೃಷ್ಣ ಅಡ್ವಾಣಿ, ಕೇಂದ್ರ ಸಚಿವರಾದ ರಾಜನಾಥ್ ಸಿಂಗ್, ಅಮಿತ್ ಶಾ, ಸ್ಮೃತಿ ಇರಾನಿ, ರವಿಶಂಕರ್ ಪ್ರಸಾದ್, ಲೋಕಸಭಾ ಸ್ಪೀಕರ್ ಓಂ ಬಿರ್ಲಾ, ಹಣಕಾಸು ಇಲಾಖೆ ರಾಜ್ಯ ಸಚಿವ ಅನುರಾಗ್ ಠಾಕೂರ್, ರಾಜ್ಯಸಭೆಯ ವಿಪಕ್ಷ ನಾಯಕ ಗುಲಾಮ್ ನಬಿ ಆಜಾದ್, ಯೋಗ ಗುರು ರಾಮದೇವ್ ಸೇರಿದಂತೆ ನೂರಾರು ಗಣ್ಯರು ಉಪಸ್ಥಿತರಿದ್ದರು.
ನಿತೀಶ್ ಕುಮಾರ್, ದೇವೇಂದ್ರ ಡ್ನವೀಸ್, ವಿಜಯ್ ರೂಪಾನಿ, ಮನೋಹರ್ ಲಾಲ್ ಕಟ್ಟರ್ ಸೇರಿದಂತೆ ಹಲವು ರಾಜ್ಯಗಳ ಮುಖ್ಯಮಂತ್ರಿಗಳು ಅಂತಿಮ ಸಂಸ್ಕಾರದಲ್ಲಿ ಪಾಲ್ಗೊಂಡು ಗೌರವ ನಮನ ಸಲ್ಲಿಸಿದರು.
ಇದಕ್ಕೂ ಮುನ್ನ ಬಿಜೆಪಿ ಪ್ರಧಾನ ಕಚೇರಿಯೆದುರು ಅನೇಕ ರಾಜಕೀಯ ಗಣ್ಯರು ಹಾಗೂ ನಾಗರಿಕರು ಅಂತಿಮ ದರ್ಶನ ಪಡೆದರು. ಬೆಳಗ್ಗೆ ರಾಷ್ಟ್ರಪತಿ ರಾಮನಾಥ್ ಕೋವಿಂದ್, ಹಿರಿಯ ಬಿಜೆಪಿ ನಾಯಕರು, ಹಿರಿಯ ಕಾಂಗ್ರೆಸ್ ನಾಯಕ ಮೋತಿಲಾಲ್ ನೆಹರು, ಎನ್ ಸಿಪಿ ನಾಯಕ ಶರದ್ ಪವಾರ್ ಹಾಗೂ ಪ್ರುಲ್ ಪಟೇಲ್, ಆರ್ ಎಲ್ ಡಿ ನಾಯಕ ಅಜಿತ್ ಸಿಂಗ್ , ಟಿಡಿಪಿ ನಾಯಕ ಎನ್. ಚಂದ್ರಬಾಬು ನಾಯ್ಡು ಜೇಟ್ಲಿ ಅವರ ಮನೆಗೆ ಭೇಟಿ ನೀಡಿ ಅಂತಿಮ ನಮನ ಸಲ್ಲಿಸಿದರು.
ಬಹ್ರೈನ್ ನಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಅವರು ಒಂದು ಕಾರ್ಯಕ್ರಮದಲ್ಲಿ ತಮ್ಮ ’ಸ್ನೇಹಿತ’ ಜೇಟ್ಲಿ ಅವರನ್ನು ಸ್ಮರಿಸಿದ್ದಾರೆ. ’ನನ್ನ ಸ್ನೇಹಿತ ಇಹಲೋಕ ತ್ಯಜಿಸಿರುವಾಗ ನಾನು ಇಷ್ಟು ದೂರದಲ್ಲಿರುವೆ ಎಂಬುದನ್ನು ಊಹಿಸಲೂ ಕಷ್ಟವಾಗುತ್ತಿದೆ. ಕೆಲ ದಿನಗಳ ಹಿಂದಷ್ಟೇ ನಾವು ಮಾಜಿ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಜಿ ಅವರನ್ನು ಕಳೆದುಕೊಂಡೆವು. ಇಂದು ನಾನು ನನ್ನ ಸ್ನೇಹಿತ ಅರುಣ್ ಅವರನ್ನು ಕಳೆದುಕೊಂಡಿರುವೆ’ ಎಂದು ದುಃಖ ವ್ಯಕ್ತಪಡಿಸಿದ್ದಾರೆ.'