2/17/2019

ದೇಶ | ವಿದೇಶ ವಿವರ ಪುಟ

ಯರಜಂತಿ ಪ್ರಕರಣ: ಎಸಿ ನೇತೃತ್ವದಲ್ಲಿ ಎರಡು ಕೋಮಿನ ಸಂಧಾನ ಸಭೆ

Font size -16+

'ಸುದ್ದಿಮೂಲ ವಾರ್ತೆ, ಲಿಂಗಸೂಗೂರು, ಜು.12
ತಾಲೂಕಿನ ಯರಜಂತಿ ಗ್ರಾಮದಲ್ಲಿ ಕಳೆದ ತಿಂಗಳು ದಲಿತ ಕುಟುಂಬಗಳಿಗೆ ಬಹಿಷ್ಕಾರ ಹಾಕಿದ್ದಾರೆಂಬ ಪ್ರಕರಣ ಕುರಿತು ಗುರುವಾರ ಸಹಾಯಕ ಆಯುಕ್ತ ಎಂ.ಪಿ.ಮಾರುತಿ ನೇತೃತ್ವದಲ್ಲಿ ಎರಡೂ ಕೋಮಿನ ಮುಖಂಡರ ಸಂಧಾನ ಸಭೆ ನಡೆಯಿತು.ಸಭೆಯಲ್ಲಿ ಭಾಗವಹಿಸಿದ ದಲಿತ ಮುಖಂಡರು ಗ್ರಾಮದಲ್ಲಿ ದಲಿತ ಸಮುದಾಯಕ್ಕೆ ಆದ ಅನ್ಯಾಯ ಸರಿಪಡಿಸಿ ಕುಡಿವ ನೀರಿನ ಶಾಶ್ವತ ಪರಿಹಾರ, ಸರಕಾರಿ ರಸ್ತೆಯನ್ನು ಎಲ್ಲರ ಬಳಕೆಗೆ ಅನುಕೂಲವಾಗುವಂತೆ ಯಥಾಸ್ಥಿತಿ ಕಾಪಾಡುವ ಜತೆಗೆ ಸದರಿ ಜಾಗದಲ್ಲಿ ಖಾಸಗಿಯವರು ಬಳಕೆ ಅತಿಕ್ರಮಣಕ್ಕೆ ಕಡಿವಾಣ ಹಾಕಿ ದಲಿತರಿಗೆ ರಕ್ಷಣೆ ನೀಡುವ ವ್ಯವಸ್ಥೆಯಾಗಬೇಕೆಂದು ಆಗ್ರಹಿಸಿದರು.
ನಮ್ಮ ಸಮಾಜ ಬಾಂಧವರಿಂದ ಯಾವುದೇ ಪ್ರಮಾದವಾಗಿಲ್ಲ ನಾವೆಲ್ಲ ಸಹೋದರರಂತೆ ಜೀವನ ನಡೆಸುತ್ತಿದ್ದೇವೆ. ಸಮಾಜದವರಿಂದ ಅಹಿತಕರ ಘಟನೆಗಳು ಜರುಗದಂತೆ ನಿಗಾವಹಿಸುವಂತೆ ಸಭೆ ನಡೆಸಿ ಬುದ್ಧಿ ಮಾತು ಹೇಳಲಾಗುವುದು. ಇನ್ಮುಂದೆಯೂ ಸಹ ಈ ಹಿಂದಿನಂತೆ ಎಲ್ಲರೂ ಸೌಹಾರ್ದತೆ, ಶಾಂತಿಯಿಂದ ಬಾಳಲು ಇಷ್ಟಪಡುವುದಾಗಿ ಕಾಪಾಡುವುದಾಗಿ ಗ್ರಾಮದ ನಾಯಕ ಸಮುದಾಯದ ಮುಖಂಡರು ತಿಳಿಸಿದರು.
ಎರಡೂ ಕೋಮಿನ ಮುಖಂಡರ ವಿಷಯ ಆಲಿಸಿದ ಎಸಿ ಎಂ.ಪಿ.ಮಾರುತಿ, ಜಾತಿಮತ ಬೇಧ ಮರೆತು ಸೌಹಾರ್ದತೆಯಿಂದ ಬಾಳುವುದು ಒಳಿತು. ಒಬ್ಬರಿಗೊಬ್ಬರು ವೈಯಕ್ತಿಕ ನಿಂದನೆ ಮಾಡಿದರೆ ಕಾನೂನು ಕ್ರಮ ಕೈಗೊಳ್ಳಲಾಗುವುದು. ಪುನಃ ಯಾವುದೇ ಅಹಿತಕರ ಘಟನೆಗಳು ಮರುಕಳಿಸದಂತೆ ಒಂದಾಗಿ ಕಾನೂನು ಚೌಕಟ್ಟಿನಲ್ಲಿ ಬಾಳಬೇಕು ಎಂದು ಸಲಹೆ ನೀಡಿದರು. ತಹಸೀಲ್ದಾರ್ ಚಾಮರಾಜ ಪಾಟೀಲ್, ಡಿವೈಎಸ್‌ಪಿ ಶರಬಸಪ್ಪ ಸುಬೇದಾರ, ಬಿಇಒ ಚಂದ್ರಶೇಖರ ಭಂಡಾರಿ, ಸಮಾಜ ಕಲ್ಯಾಣಾಧಿಕಾರಿ ರವಿ ಕುಮಾರ, ಮುಖಂಡರಾದ ಹನುಮಂತಪ್ಪ ವೆಂಕಟಾಪುರ, ಮೋಹನ ಗೋಸ್ಲೆ, ಮಹಾದೇವಪ್ಪ, ಶರಣಪ್ಪ ಕಟ್ಟಿಮನಿ, ರವಿವರ್ಮ, ಬಸವರಾಜ, ಹಾಜಪ್ಪ ಕರಡಕಲ್, ನಾಗರಾಜ, ಬಸಪ್ಪ, ಶಿವಪ್ಪ, ಹುಸೇನಮ್ಮ, ಯಮನಮ್ಮ ಇತರರಿದ್ದರು.'