2/17/2019

ದೇಶ | ವಿದೇಶ ವಿವರ ಪುಟ

ಬಸವಸಾಗರ ಜಲಾಶಯದ ನೀರು ಸೋರಿಕೆ ತಡೆಯಲು ರಾಜೂಗೌಡ ಒತ್ತಾಯ

Font size -16+

'ಸುದ್ದಿಮೂಲ ವಾರ್ತೆ
ಬೆಂಗಳೂರು, ಜು.12
ರಾಯಚೂರು ಮತ್ತು ಯಾದಗಿರಿ ಜಿಲ್ಲೆಗಳಿಗೆ ನೀರಾವರಿ ಕಲ್ಪಿಸುವ ಬಸವಸಾಗರ ಜಲಾಶಯ (ನಾರಾಯಣಪುರ ಜಲಾಶಯ)ದಿಂದ ಸೋರಿಕೆಯಾಗುವ ನೀರು ತಡೆಯುವಂತೆ ಸುರಪುರದ ಶಾಸಕ ರಾಜು ಗೌಡ ಒತ್ತಾಯಿಸಿದರು.
ಅವರು, ವಿಧಾನಸಭೆಯಲ್ಲಿಂದು ಬಜೆಟ್ ಮೇಲಿನ ಚರ್ಚೆಯಲ್ಲಿ ಭಾಗವಹಿಸಿ ಮಾತನಾಡಿ, ನಾರಾಯಣಪುರ ಜಲಾಶಯದಿಂದ ದಿನಾಲು 3 ಸಾವಿರ ಕ್ಯೂಸೆಕ್ ನೀರು ನದಿ ಮೂಲಕ ಅನಗತ್ಯವಾಗಿ ಹರಿದು ಆಂಧ್ರ ಪ್ರದೇಶದ ಪಾಲಾಗುತ್ತಿದ್ದು ಬಸವರಾಜ ಬೊಮ್ಮಾಯಿ ಅವರು ನೀರಾವರಿ ಸಚಿವರಾಗಿದ್ದಾಗ ಗೇಟ್ ದುರಸ್ತಿ ಮಾಡುವ ಮೂಲಕ ಜಲಾಶಯದಿಂದ ಸೋರಿಕೆಯಾಗುವ ನೀರಿನ ಪ್ರಮಾಣವನ್ನು ಕಡಿಮೆ ಮಾಡಿದ್ದರು. ಆದರೂ, ಇನ್ನೂ 1 ಸಾವಿರ ಕ್ಯೂಸೆಕ್ ನೀರು ಕೃಷ್ಣಾ ನದಿಯ ಮೂಲಕ ಆಂಧ್ರ ಪಾಲಾಗುತ್ತಿದೆ ಆ ನೀರು ತಡೆಗೆ ಅಗತ್ಯ ಕ್ರಮ ಕೈಗೊಳ್ಳುವಂತೆ ರಾಜುಗೌಡ ಒತ್ತಾಯಿಸಿದರು.
ನಾರಾಯಣಪುರ ಎಡದಂಡೆ ಅಚ್ಚುಕಟ್ಟು ವ್ಯಾಪ್ತಿಯಲ್ಲಿ ಭತ್ತ ಬೆಳೆಯಲು ಸರಕಾರ ನಿಷೇಧ ಮಾಡಿದೆ.ಆದರೆ, ರೈತರು ತಮಗೆ ಭತ್ತ ಬೆಳೆಯುವುದೇ ಅನುಕೂಲವಾಗಿದ್ದರಿಂದ ಭತ್ತವನ್ನೇ ಬೆಳೆಯುತ್ತಿದ್ದಾರೆ.ಆದರೆ, ಸರಕಾರ ಆ ರೀತಿ ಭತ್ತ ಬೆಳೆಯವ ರೈತರಿಗೆ ದಂಡ ವಿಧಿಸುತ್ತಿದೆ.ಕೆಲ ಒಬ್ಬ ರೈತರು ತಾವು ಬೆಳೆದ ಭತ್ತಕ್ಕಿಂತ ಹೆಚ್ಚಿನ ಮೊತ್ತದ ದಂಡ ಕಟ್ಟುವಂತಹ ದುಸ್ತಿತಿ ಬಂದೊದಗಿದೆ.ಕಾರಣ, ತಕ್ಷಣವೇ ದಂಡ ವಸೂಲಿ ಮಾಡುವುದನ್ನು ತಡೆಯಲು ಒತ್ತಾಯಿಸಿದರು.
ರಾಜ್ಯದ ಬಹುತೇಕ ಗ್ರಾಮೀಣ ಪ್ರದೇಶದಲ್ಲಿ ಮಹಿಳಾ ಶೌಚಾಲಯಗಳ ಕೊರತೆ ಇದೆ. ಕೆಲವೆಡೆ ವೈಯಕ್ತಿಕ ಶೌಚಾಲಯ ಮಾತ್ರ ನಿರ್ಮಾಣವಾಗಿದೆ.ಆದರೆ ಸಾಮೂಹಿಕ ಶೌಚಾಲಯ ನಿರ್ಮಾಣ ಅಗತ್ಯವಿದ್ದು, ಸುಸಜ್ಜಿತವಾದ ಮಹಿಳಾ ಶೌಚಾಲಯ ನಿರ್ಮಿಸುವಂತೆ ಹೇಳಿದರು.
ರಾಜ್ಯದಲ್ಲಿ ಪರಿಶಿಷ್ಟ ಪಂಗಡಕ್ಕೆ ಕೇವಲ ಶೇ.3 ಮೀಸಲಾತಿ ಇದೆ. ಕೇಂದ್ರ ಸರಕಾರದಂತೆ ಶೇ.7ರಷ್ಟು ಮೀಸಲಾತಿ ಪ.ಪಂಗಡದವರಿಗೆ ಹೆಚ್ಚಿಸಬೇಕು.ಏಕೆಂದರೆ, ರಾಜ್ಯದ ಒಟ್ಟು ಜನಸಂಖ್ಯೆಯಲ್ಲಿ 42 ಲಕ್ಷ 48 ಸಾವಿರದ 987 ಜನಸಂಖ್ಯೆಯಿದ್ದು ಅಂದರೆ, ಶೇ.6.95 ರಷ್ಟು ಜನ ಇರುವ ಕಾರಣ ಮೀಸಲಾತಿ ಶೇ.7 ಕ್ಕೆ ಏರಿಸುವಂತೆ ಒತ್ತಾಯಿಸಿದರು.
ಈ ಹಿಂದೆ ಸಮಾಜ ಕಲ್ಯಾಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಹಾಗೂ ಆಗಿನ ಸಮಾಜ ಕಲ್ಯಾಣ ಸಚಿವರಾಗಿದ್ದ ಆಂಜನೇಯ ಅವರಿಗೆ ಪರಿಶಿಷ್ಟ ಪಂಗಡಕ್ಕೆ ಶೇ.7 ರಷ್ಟು ಮೀಸಲಾತಿ ಕಲ್ಪಿಸುವ ಅಗತ್ಯವಿದೆ ಎಂದು ಪ್ರಸ್ತಾವನೆ ಸಲ್ಲಿಸಿದ್ದರೂ ಇಲ್ಲಿಯವರೆಗೆ ಸರಕಾರದ ಆದೇಶವಾಗಿಲ್ಲ ತಕ್ಷಣವೇ ಪರಿಶಿಷ್ಟ ಪಂಗಡದ ಮೀಸಲಾತಿ ಶೇ.7ಕ್ಕೆ ಹೆಚ್ಚಿಸುವಂತೆ ಆಗ್ರಹಿಸಿದರು.
ರಾಜ್ಯ ಮತ್ತು ಕೇಂದ್ರ ಸರಕಾರದ ವಿವಿಧ ವಸತಿ ಯೋಜನೆಗಳ ಉಸ್ತುವಾರಿಗೆ ಅಧಿಕಾರಿಗಳನ್ನು ಗುತ್ತಿಗೆ ಆಧಾರದ ಮೇಲೆ ನೇಮಕ ಮಾಡಿಕೊಳ್ಳಲಾಗಿತ್ತು. ಆದರೆ, ಅವರಿಗೆ ಕಳೆದ 24 ತಿಂಗಳಿನಿಂದ ವೇತನ ನೀಡಿಲ್ಲ ಮತ್ತು ಅವರಿಗೆ ಉಸ್ತುವಾರಿ ಕಾರ್ಯವನ್ನು ಸಹ ಒಪ್ಪಿಸಿಲ್ಲ ಹೀಗಾಗಿ ವಸತಿ ಯೋಜನೆಗಳ ಅನುಷ್ಠಾನಕ್ಕೆ ಅಡಚಣೆಯಾಗಿದೆ ಎಂದರು.
ಆಗ ಮಧ್ಯ ಪ್ರವೇಶಿಸಿದ ವಿ.ಎಸ್.ಸೋಮಣ್ಣ ನಾನು ವಸತಿ ಸಚಿವನಾಗಿದ್ದಾಗ ಈ ವ್ಯವಸ್ಥೆ ಜಾರಿಗೆ ತಂದಿದ್ದೆ.ಆದನ್ನು ಮುಂದುವರೆಸಿದರೆ ವಸತಿ ಯೋಜನೆಗಳನ್ನು ಸಮರ್ಪಕವಾಗಿ ಜಾರಿ ಮಾಡಲು ಸಾಧ್ಯ ಎಂದು ರಾಜುಗೌಡ ಅವರಿಗೆ ಬೆಂಬಲಿಸಿ ಮಾತನಾಡಿದರು.
ನಂತರ ಮಾತು ಮುಂದುವರೆಸಿದ ರಾಜುಗೌಡ, ಲೋಕೋಪಯೋಗಿ ಸಚಿವ ಎಚ್‌ಡಿ.ರೇವಣ್ಣ ಅವರ ಪೂಜೆ ಪುನಸ್ಕಾರ ಮತ್ತು ದೈವ ಭಕ್ತಿಯಿಂದಾಗಿ ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾಗಿದ್ದಾರೆ ಅದಕ್ಕಾಗಿ ರಾಜ್ಯದಲ್ಲಿ ಸುಭೀಕ್ಷೆಗಾಗಿ ಸರಕಾರ ಹೋಮ-ಹವನ ಮಾಡಲು ಆರ್ಥಿಕ ನೆರವು ನೀಡಬೇಕೆಂದು ಕೋರಿದರು.
ಬಿಜೆಪಿ ಅವರನು ಹಿಂದುತ್ವವಾದಿವಾದಿಗಳೆಂದು ಟೀಕಿಸಲಾಗುತ್ತಿದೆ. ಆದರೆ, ನಿಜವಾದ ಹಿಂದುತ್ವವನ್ನು ಎಚ್.ಡಿ ರೇವಣ್ಣ ಪಾಲಿಸುತ್ತಾರೆಂದು ರಾಜುಗೌಡ ರೇವಣ್ಣನವರ ಕಾಲೆಳೆದಾಗ ಸದನದಲ್ಲಿ ನಗೆ ಉಕ್ಕಿತು.
'