2/17/2019

ದೇಶ | ವಿದೇಶ ವಿವರ ಪುಟ

ಟ್ರ್ಯಾಕ್ಟರ್ ಪಲ್ಟಿ : ರಾಯಚೂರು ಜಿಲ್ಲಾಧಿಕಾರಿಯಾಗಿದ್ದ ನಾಗರಾಜು ಸಾವು

Font size -16+

'ಸುದ್ದಿಮೂಲ ವಾರ್ತೆ, ಪಾಂಡವಪುರ, ಜು.12
ರಾಯಚೂರು ಜಿಲ್ಲಾಧಿಕಾರಿಯಾಗಿದ್ದ ನಾಗರಾಜು ಟ್ರ್ಯಾಕ್ಟರ್ ಮಗುಚಿದ ಪರಿಣಾಮ ಧಾರುಣವಾಗಿ ಸಾವನ್ನಪ್ಪಿರುವ ಘಟನೆ ಮಂಡ್ಯ ಜಿಲ್ಲೆಯ ಪಾಂಡವಪುರ ತಾಲೂಕಿನ ಬ್ಯಾಡರಹಳ್ಳಿ ಗ್ರಾಮದಲ್ಲಿ ಸಂಭವಿಸಿದೆ.
ಮೂಲತಃ ಮಂಡ್ಯ ತಾಲೂಕಿನ ಸಿದ್ದಯ್ಯನಕೊಪ್ಪಲು ಗ್ರಾಮದ ನಾಗರಾಜು, ತಮ್ಮ ಾರಂ ಹೌಸ್‌ನಲ್ಲಿ ಉಳುಮೆ ಮಾಡುವಾಗ ಟ್ರಾಕ್ಟರ್ ಮಗುಚಿ ಸಾವನ್ನಪ್ಪಿದ್ದಾರೆ.
ತಮ್ಮ ಜಮೀನಿನಲ್ಲಿ ಟ್ರ್ಯಾಕ್ಟರ್ ಸ್ವತಃ ಚಾಲನೆ ಮಾಡುತ್ತಾ ಉಳುಮೆ ಮಾಡುವಾಗ ಏರಿ ಹತ್ತುತ್ತಿರುವ ಸಂದರ್ಭದಲ್ಲಿ ಟ್ರ್ಯಾಕ್ಟರ್ ಮಗುಚಿದೆ. ತಕ್ಷಣವೇ ಪ್ರಾಣಾಪಾಯದಿಂದ ಪಾರಾಗಲು ಕೆಳಗೆ ಜಿಗಿದರೂ ಟ್ರ್ಯಾಕ್ಟರ್‌ನ ಗಾಲಿ ಅವರ ಎದೆಯ ಮೇಲೆ ಹೋಗಿದ್ದರಿಂದ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ.
ಮಂಡ್ಯದ ಸಿದ್ದಯ್ಯನಕೊಪ್ಪಲಿನಲ್ಲಿ ಜನಿಸಿದ ನಾಗರಾಜು, ಕೆಎಎಸ್ ಅಧಿಕಾರಿಯಾಗಿ ವಿವಿಧ ಇಲಾಖೆಗಳಲ್ಲಿ ಕಾರ್ಯನಿರ್ವಹಿಸಿದ್ದರು ನಂತರ ಐ.ಎ.ಎಸ್. ಪಾಸ್ ಮಾಡಿ ರಾಯಚೂರು ಜಿಲ್ಲಾಧಿಕಾರಿಯಾಗಿ ಮೇ 2013ರಿಂದ ಜೂನ್ 2014ರ ವರೆಗೆ ಕೆಲಸ ನಿರ್ವಹಿಸಿ ರಾಯಚೂರಿನಲ್ಲಿಯೇ ನಿವೃತ್ತಿ ಹೊಂದಿದ್ದರು.
ಸಾವಿನ ಬಳಿಕ ಇವರ ಎರಡು ಕಣ್ಣು ದಾನ ಮಾಡಲಾಗಿದೆ. ರಾಯಚೂರು ಜಿಲ್ಲಾಧಿಕಾರಿಯಾಗಿದ್ದ ಸಂದರ್ಭದಲ್ಲಿ ಹಲವು ವರ್ಷಗಳಿಂದ ವಿಲೇವಾರಿಯಾಗಿ ಬಾಕಿ ಉಳಿದಿದ್ದ 500ಕ್ಕೂ ಹೆಚ್ಚು ಕಂದಾಯ ಇಲಾಖೆಯ ಆರ್‌ಆರ್‌ಟಿ ಪ್ರಕರಣಗಳನ್ನು ಇತ್ಯರ್ಥಪಡಿಸಿ ಮೆಚ್ಚುಗೆಗೆ ಪಾತ್ರರಾಗಿದ್ದರು.
ಒಮ್ಮೆ ಜಿಲ್ಲಾ ಕ್ರೀಡಾಂಗಣದಲ್ಲಿ ಮೈದಾನ ಸ್ವಚ್ಛಗೊಳಿಸುವ ಸಂದರ್ಭದಲ್ಲಿ ಸ್ವತಃ ಟ್ರ್ಯಾಕ್ಟರ್ ಹತ್ತಿ ಕೆಲಸ ಮಾಡಿ ತೋರಿಸುವ ಮೂಲಕ ಚಾಲಕರಿಗೆ, ಅಧಿಕಾರಿಗಳಿಗೆ ಬಿಸಿ ಮುಟ್ಟಿಸಿದ್ದನ್ನು ಸ್ಮರಿಸಬಹುದು.
ಘಟನೆ ಸಂಬಂಧ ಪಾಂಡವಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.'