2/17/2019

ದೇಶ | ವಿದೇಶ ವಿವರ ಪುಟ

ರಾಜ್ಯಪಾಲರ ಅಂಕಿತದ ನಂತರ ರಾಯಚೂರು ವಿ.ವಿ. ಆರಂಭ- ಜಿಟಿಡಿ

Font size -16+

'ಬಿ.ವೆಂಕಟಸಿಂಗ್
ಬೆಂಗಳೂರು, ಜು.12
ರಾಜ್ಯಪಾಲರ ಅಂಗೀಕಾರಗೊಂಡ ನಂತರ ರಾಯಚೂರು ವಿಶ್ವವಿದ್ಯಾಲಯದಲ್ಲಿ ಶೈಕ್ಷಣಿಕ ಚಟುವಟಿಕೆ ಆರಂಭಿಸುವುದಾಗಿ ಉನ್ನತ ಶಿಕ್ಷಣ ಸಚಿವ ಜಿ.ಟಿ.ದೇವೇಗೌಡ ವಿಧಾನ ಪರಿಷತ್ತಿಗಿಂದು ತಿಳಿಸಿದ್ದಾರೆ.
ಕಾಂಗ್ರೆಸ್‌ನ ಎನ್. ಎಸ್ ಬೋಸರಾಜು ಅವರ ಪ್ರಶ್ನೆಗೆ ಲಿಖಿತ ಉತ್ತರ ನೀಡಿದ ಅವರು, 2017ರಲ್ಲಿ ಕರ್ನಾಟಕ ರಾಜ್ಯವಿಶ್ವವಿದ್ಯಾಲಯ ಮಸೂದೆಯಲ್ಲಿ ರಾಯಚೂರು ವಿಶ್ವವಿದ್ಯಾಲಯ ಸ್ಥಾಪನೆ ಬಗ್ಗೆ ಕರ್ನಾಟಕ ವಿಧಾನಮಂಡಳದ ಉಭಯ ಸದನದಲ್ಲಿ ಅಂಗೀಕಾರ ಪಡೆಯಲಾಗಿತ್ತು ಎಂದು ಸಚಿವರು ಉತ್ತರದಲ್ಲಿ ತಿಳಿಸಿದ್ದಾರೆ.
ರಾಯಚೂರು ವಿಶ್ವವಿದ್ಯಾಲಯ ಸ್ಥಾಪನೆಗೆ ಸಂಬಂಧಪಟ್ಟಂತೆ ಈಗಾಗಲೇ ವಿಶೇಷ ಅಧಿಕಾರಿಯನ್ನು ನೇಮಿಸಲಾಗಿದೆ. ಕರ್ನಾಟಕ ರಾಜ್ಯ ವಿಶ್ವವಿದ್ಯಾಲಯದ ತಿದ್ದುಪಡಿ ಮಸೂದೆ 2017ಕ್ಕೆ ರಾಜ್ಯಪಾಲರು ಅಂಗೀಕಾರ ನೀಡಿದ ತಕ್ಷಣ ರಾಯಚೂರು ವಿವಿಯಲ್ಲಿ ಶೈಕ್ಷಣಿಕ ಚಟುವಟಿಕೆ ಆರಂಭಿಸಲಾಗುವುದೆಂದು ತಿಳಿಸಿದ್ದಾರೆ.
ರಾಯಚೂರು ಸರಕಾರಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ 46 ಹುದ್ದೆಗಳ ಪೈಕಿ 25 ಹುದ್ದೆಗಳು ಭರ್ತಿಯಾಗಿದ್ದು ಇನ್ನೂ 21ಹುದ್ದೆಗಳು ಭರ್ತಿ ಮಾಡಲು ಸರಕಾರ ಕ್ರಮ ಕೈಗೊಂಡಿದೆಯೆಂದು ತಿಳಿಸಿದ್ದಾರೆ.
ಹೈದ್ರಾಬಾದ್ ಕರ್ನಾಟಕ ಪ್ರದೇಶದ ಖಾಲಿ ಹುದ್ದೆಗಳ ಭರ್ತಿಗೆ ಆರ್ಥಿಕ ಮಿತವ್ಯಯದ ಸಡಿಲಿಕೆಯಿದ್ದು ತಾಂತ್ರಿಕ ಶಿಕ್ಷಣ ಇಲಾಖೆಯಲ್ಲಿ ಹೈದ್ರಾಬಾದ್ ಕರ್ನಾಟಕ ಪ್ರದೇಶದಲ್ಲಿ ಖಾಲಿ ಹುದ್ದೆಗಳು ಸೇರಿದಂತೆ ರಾಜ್ಯದಲ್ಲಿ ಖಾಲಿಯಿರುವ 501 ಗ್ರುಪ್-ಬಿ ಹುದ್ದೆಗಳು ಭರ್ತಿ ಮಾಡಲು ಕರ್ನಾಟಕ ಲೋಕಸೇವಾ ಆಯೋಗಕ್ಕೆ 17-12-2016ರಲ್ಲಿ ಅಧಿಸೂಚನೆ ಹೊರಡಿಸಲಾಗಿತ್ತು.ಆದರೆ,ವೃಂದ ಮತ್ತು ನೇಮಕಾತಿ ನಿಯಾಮಾವಳಿಗೆ ಎಐಸಿಪಿಇ ನಿಯಮಾವಳಿಗಳ ಅನ್ವಯ ವಿದ್ಯಾರ್ಹತೆ ತಿದ್ದುಪಡಿ ತರಬೇಕಾದ ಹಿನ್ನೆಲೆಯಲ್ಲಿ ನೇರ ನೇಮಕ ಪ್ರಕ್ರಿಯೆ ತಿದ್ದುಪಡಿಯ ನಂತರ ಮುಂದುವರೆಸಲು ಸೂಚಿಸಲಾಗಿದೆ ಎಂದು ಸಚಿವರು ಉತ್ತರಿಸಿದ್ದಾರೆ.
ಪ್ರಸ್ತುತ ಖಾಲಿಯಿರುವ ಹುದ್ದೆಗಳನ್ನು ಅತಿಥಿ ಉಪನ್ಯಾಸಕರನ್ನು ನೇಮಕ ಮಾಡಿಕೊಂಡು ವಿದ್ಯಾರ್ಥಿಗಳ ಶಿಕ್ಷಣಕ್ಕೆ ಅಡ್ಡಿಯಾಗದಂತೆ ಕ್ರಮ ವಹಿಸಲಾಗಿದೆ ಎಂದು ಸಚಿವರು ಉತ್ತರಿಸಿದ್ದಾರೆ.
ಸದರಿ ಪಾಲಿಟೆಕ್ನಿಕ್‌ಗೆ ಕೇಂದ್ರ ಸರಕಾರದ ವತಿಯಿಂ 1 ಕೋಟಿ ರೂ.ವೆಚ್ಚದಲ್ಲಿ ವಿದ್ಯಾರ್ಥಿನಿಯರ ನಿಲಯ ನಿರ್ಮಿಸಲಾಗಿದೆ ಹಾಗೂ ಎಸ್‌ಸಿಪಿ ಹಾಗೂ ಟಿಎಸ್‌ಪಿ ಯೋಜನೆಯಡಿ 99 ಲಕ್ಷ ರೂ.ವೆಚ್ಚದಲ್ಲಿ ವಿದ್ಯಾರ್ಥಿ ನಿಲಯ ನಿರ್ಮಾಣ ಮಾಡಲು ಅನುಮೋದನೆ ನೀಡಿದ್ದು, ಸೆಪ್ಟೆಂಬರ್ 2018ರೊಳಗಾಗಿ ಕಾಮಗಾರಿ ಪೂರ್ಣಗೊಳ್ಳಲಿದೆ ಎಂದು ಶಿಕ್ಷಣ ಸಚಿವರು ತಿಳಿಸಿದ್ದಾರೆ.
2017ಮತ್ತು 2018 ನೇ ಸಾಲಿನಲ್ಲಿ ಒಟ್ಟು 84 ಲಕ್ಷ ರೂ.ಕಾಲೇಜಿನ ಕಟ್ಟಡ ದುರಸ್ತಿಗೆ ಅನುಮತಿ ನೀಡಲಾಗಿದ್ದು ಕಾಮಗಾರಿ ಪ್ರಗತಿಯಲ್ಲಿದೆ ಎಂದು ಹೇಳಿದ್ದಾರೆ.
ರಾಯಚೂರು ಸರಕಾರಿ ಇಂಜಿನಿಯರಿಂಗ್ ಕಾಲೇಜು ಆರಂಭಿಸಲು ತಾಂತ್ರಿಕ ಶಿಕ್ಷಣ ಇಲಾಖೆ ವತಿಯಿಂದ ರೂ.25 ಕೋಟಿ 31 ಲಕ್ಷ ರೂ.ಬಿಡುಗಡೆ ಮಾಡಿದ್ದು ಕಾಮಗಾರಿ ಅಗಸ್‌ಟ್ 2018ಕ್ಕೆ ಪೂರ್ಣಗೊಳ್ಳಲಿದೆ ಎಂದು ತಿಳಿಸಿದ್ದಾರೆ.
ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ಯವಿದ್ಯಾಲಯ ವತಿಯಿಂದ ಈ ಕಾಲೇಜು ನಿರ್ಮಾಣ ಕಾರ್ಯ ಕೈಗೆತ್ತಿಕೊಳ್ಳಬೇಕಾಗಿತ್ತು ಆದರೆ, ಆದಾಯ ತೆರಿಗೆ ಇಲಾಖೆ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ 400 ಕೋಟಿ ರೂ.ಮುಟ್ಟುಗೋಲು ಹಾಕಿ ಕೊಂಡಿರುವುದರಿಂದ ಈ ಕಾಮಗಾರಿ ವಿಳಂಬವಾಗಿದೆ ಎಂದು ಸಚಿವರು ಉತ್ತರದಲ್ಲಿ ಸ್ಪಷ್ಟಪಡಿಸಿದ್ದಾರೆ.
ಮಾನ್ವಿ ತಾಲೂಕಿನ ಕವಿತಾಳದಲ್ಲಿ ಸರಕಾರಿ ಪ್ರಥಮ ದರ್ಜೆ ವಸತಿ ಕಾಲೇಜು ಆರಂಭಿಸಲು ಈಗಾಗಲೇ 9 ಎಕರೆ ಜಮೀನು ನೀಡಲಾಗಿದೆ 23 ಕೋಟಿ 50 ಲಕ್ಷ ವೆಚ್ಚದಲ್ಲಿ ಈ ಕಾಮಗಾರಿ ಕೈಗೆತ್ತಿಕೊಳ್ಳಲು ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗೆ ವಹಿಸಿ ಈಗಾಗಲೇ 8 ಕೋಟಿ 28 ಲಕ್ಷ ರೂ.ಬಿಡುಗಡೆ ಗೊಳಿಸಲಾಗಿದೆ ಎಂದು ತಿಳಿಸಿದ್ದಾರೆ.'