2/17/2019

ದೇಶ | ವಿದೇಶ ವಿವರ ಪುಟ

2ಲಕ್ಷ 24ಸಾವಿರ 110 ಕೋ ರೂ ಬಜೆಟ್‌ಗೆ ಅಂಗೀಕಾರ ಜೀವತೆತ್ತಾದರೂ ರೈತರ ಸಾಲಮನ್ನಾ : ಸಿಎಂ

Font size -16+

'ಸುದ್ದಿಮೂಲ ವಾರ್ತೆ ಬೆಂಗಳೂರು, ಜು.12
ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ ರೈತರು ಪಡೆದಿರುವ 29,650 ಕೋಟಿ ರೂ ಸಾಲವನ್ನು ಮುಂದಿನ ನಾಲ್ಕು ವರ್ಷಗಳಲ್ಲಿ ಹಂತ ಹಂತವಾಗಿ ಮನ್ನಾ ಮಾಡಲಾಗುವುದು. ಜೀವ ತೆತ್ತಾದರೂ ಸಾಲ ಮನ್ನಾ ಮಾಡುವುದಾಗಿ ಎಂದು ಮುಖ್ಯಮಂತ್ರಿ ಎಚ್.ಡಿ. ಕುಮಾರ ಸ್ವಾಮಿ ವಿಧಾನಸಭೆಯಲ್ಲಿಂದು ತನ್ನ ಬದ್ಧತೆ ಪ್ರಕಟಿಸಿದರು.
ಬಜೆಟ್ ಮೇಲಿನ ಚರ್ಚೆಗೆ ಉತ್ತರ ನೀಡಿದ ಅವರು, ಭಾರೀ ನಿರೀಕ್ಷೆ ಮೂಡಿಸಿದ್ದ ಪೆಟ್ರೋಲ್, ಡೀಸೆಲ್, ವಿದ್ಯುತ್, ಮದ್ಯದ ಮೇಲಿನ ತೆರಿಗೆ ಇಳಿಕೆ ಮಾಡುವ ನಿರೀಕ್ಷೆ ಹುಸಿಯಾಗಿದೆ. ಅನ್ನ ಭಾಗ್ಯ ಯೋಜನೆಯಡಿ ನೀಡುತ್ತಿದ್ದ ಏಳು ಕೆ.ಜಿ. ಅಕ್ಕಿಯನ್ನು ಮುಂದುವ ರೆಸುವ ಬಗ್ಗೆ ಪರಿಶೀಲನೆ ಮಾಡುವು ದಾಗಿ ಆಶ್ವಾಸನೆ ನೀಡಿದರು. ಬಿಜೆಪಿ ಸದಸ್ಯರ ಸಭಾತ್ಯಾಗದ ನಡುವೆ ಪೂರ್ಣ ಪ್ರಮಾಣದ ಬಜೆಟ್‌ಗೆ ಸದನ ಅನುಮೋದನೆ ನೀಡಿತು.
ಪೆಟ್ರೋಲ್, ಡೀಸೆಲ್, ವಿದ್ಯುತ್ ಮೇಲೆ ಹೆಚ್ಚಳ ಮಾಡಿರುವ ತೆರಿಗೆಯನ್ನು ಸಮರ್ಥಿಸಿಕೊಂಡ ಅವರು, ಮೈತ್ರಿ ಸರ್ಕಾರ ಸಮಗ್ರ ರಾಜ್ಯದ ಅಭಿವೃದ್ಧಿಗೆ ಬದ್ಧವಾಗಿದೆ.
ರಾಜ್ಯದ ಯಾವುದೇ ಭಾಗವನ್ನು ನಿರ್ಲಕ್ಷ್ಯ ಮಾಡಿಲ್ಲ. ಎಲ್ಲಾ ಭಾಗಗಳಿಗೂ ನ್ಯಾಯ ಒದಗಿಸಲಾಗಿದೆ. ಈ ಬಗ್ಗೆ ಅಪ ಪ್ರಚಾರ ಮಾಡುವುದು ಸರಿಯಲ್ಲ ಎಂದರು.
ಶಾಲಾ, ಕಾಲೇಜು ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್ ವಿತರಣೆ ಮಾಡುವಂತೆ ಮನವಿ ಬಂದಿದ್ದು, ಕಳೆದ ಬಜೆಟ್‌ನಲ್ಲಿ ಇದಕ್ಕೆ ಹಣ ನಿಗದಿ ಮಾಡಿರಲಿಲ್ಲ. ಈ ಬಗ್ಗೆಯೂ ಸರ್ಕಾರ ಪರಿಶೀಲನೆ ನಡೆಸಲಿದೆ ಎಂದು ಹೇಳಿದರಾದರೂ ಸ್ಪಷ್ಟ ಭರವಸೆ ಕೊಡಲಿಲ್ಲ.
ರಾಷ್ಟ್ರೀಕೃತ ಹಾಗೂ ಸಹಕಾರ ಬ್ಯಾಂಕುಗಳ ರೈತರ ಸಾಲ ಮನ್ನಾ ಮಾಡುವ ಬದ್ಧತೆ ಸಮ್ಮಿಶ್ರ ಸರ್ಕಾರಕ್ಕಿದೆ. ಇದಕ್ಕಾಗಿ ಅಗತ್ಯ ಪೂರ್ವ ಸಿದ್ಧತೆ ಮಾಡಿಕೊಂಡಿದ್ದೇವೆ. ಸಹಕಾರಿ ಬ್ಯಾಂಕುಗಳಲ್ಲಿನ ಒಂದು ಲಕ್ಷ ರೂವರೆಗಿನ ರೈತರ ಸಾಲ ಮನ್ನಾ ಹಾಗೂ ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ರೈತರು ಪಡೆದಿರುವ ಎರಡು ಲಕ್ಷ ರೂವರೆಗಿನ ಸಾಲ ಮನ್ನಾ ಮಾಡಲು ಸರ್ಕಾರ ಸಿದ್ಧವಾಗಿದೆ. ಆ ನಿಟ್ಟಿನಲ್ಲಿ ಬ್ಯಾಂಕುಗಳ ಮುಖ್ಯಸ್ಥರೊಂದಿಗೆ ಸಮಾಲೋಚನೆ ಮಾಡಲಾಗಿದೆ. ಒಂದು ತಿಂಗಳೊಳಗೆ ರೈತರಿಗೆ ಋಣಮುಕ್ತ ಪತ್ರ ಹಾಗೂ ಹೊಸ ಸಾಲ ಪಡೆಯುವ ಅವಕಾಶ ಕಲ್ಪಿಸಿಕೊಡುವ ಎಲ್ಲ ಪ್ರಯತ್ನ ಮಾಡಲಿದೆ ಎಂದು ಪ್ರಕಟಿಸಿದರು.
ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ರೈತರ ಒಟ್ಟು ಸಾಲ 29,279 ಕೋಟಿ ರೂ ಸಾಲ ಮನ್ನಾ ಆಗಲಿದೆ. ಪ್ರತಿ ವರ್ಷ ರಾಷ್ಟ್ರೀಕೃತ ಬ್ಯಾಂಕುಗಳಿಗೆ 6500 ಕೋಟಿ ರೂ ಪಾವತಿ ಮಾಡಲಾಗುತ್ತದೆ. ಬೆಳಗಾವಿಗೆ 2670 ಕೋಟಿ ರೂ, ಬಾಗಲಕೋಟೆಗೆ 1820 ಕೋಟಿ ರೂ, ವಿಜಯಪುರ 1510 ಕೋಟಿ ರೂ, ಧಾರವಾಡ, 1026 ಕೋಟಿ ರೂ, ಹಾವೇರಿ 1036 ಕೋಟಿ ರೂ. ಗದಗ 722 ಕೋಟಿ ರೂ, ಉತ್ತರ ಕನ್ನಡ 407 ಕೋಟಿ ರೂ, ದಾವಣಗೆರೆ 1212 ಕೋಟಿ ರೂ, ತುಮಕೂರು 1185 ಕೋಟಿ ರೂ, ಶಿವಮೊಗ್ಗ 988 ಕೋಟಿ ರೂ, ಚಿತ್ರದುರ್ಗ 918 ಕೋಟಿ ರೂ, ಬೆಂಗಳೂರು ಗ್ರಾಮಾಂತರ 731 ಕೋಟಿ ರೂ, ರಾಮನಗರ 630 ಕೋಟಿ ರೂ ಮನ್ನಾ ಆಗಲಿದೆ ಎಂದರು.
ರಾಜ್ಯದ ದಕ್ಷಿಣದ ಜಿಲ್ಲೆಗಳಿಗಿಂತ ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿ ರೈತರ ಸಾಲ ಮನ್ನಾ ಹೆಚ್ಚಿದೆ. ಹಿಂದಿನ ಸರ್ಕಾರದ ಎಲ್ಲ ಕಾರ್ಯಕ್ರಮಗಳನ್ನು ಮುಂದುವರೆಸುವುದಾಗಿ ಹೇಳಿದರು.
ರಾಜ್ಯ ಸರ್ಕಾರದ ಇತಿಮಿತಿಯೊಳಗೆ ಆರ್ಥಿಕ ಶಿಸ್ತನ್ನು ಕಾಪಾಡುವುದರ ಜತೆಗೆ ಸಮಗ್ರ ಕರ್ನಾಟಕದ ಅಭಿವೃದ್ಧಿಗೆ ಆದ್ಯತೆ ನೀಡಲು ಸರ್ಕಾರ ಬದ್ಧವಾಗಿದೆ ಎಂದರು.
ಯಡಿಯೂರಪ್ಪ ಮಾತನಾಡಿ, ಯಾವ ರಾಷ್ಟೀಕೃತ ಬ್ಯಾಂಕು ಕೂಡ ಸಾಲ ಕಟ್ಟದೇ ರೈತರಿಗೆ ಎನ್‌ಓಸಿ ಕೊಡುವುದಿಲ್ಲ. ಇದು ರೈತರ ಮೂಗಿಗೆ ತುಪ್ಪ ಸವರುವ ಕೆಲಸ. ಅಸಾಧ್ಯವಾದ ಮಾತು. ನಂಬಲಿಕ್ಕಾಗದು ಎಂದರು.
ಮಾತು ಮುಂದುವರೆಸಿದ ಮುಖ್ಯಮಂತ್ರಿ ಅವರಿಗೆ ಸಾಧ್ಯವಾಗದು ನಮಗೆ ಸಾಧ್ಯವಾಗುತ್ತದೆ ಎಂದಾಗ ಆಡಳಿತ ಪಕ್ಷದ ಸದಸ್ಯರು ಮೇಜು ಕುಟ್ಟಿ ಸ್ವಾಗತಿಸಿದರು. ರೈತರ ಬಗ್ಗೆ ಬದ್ಧತೆ ನಿಮ್ಮೊಬ್ಬರಿಗೆ ಅಲ್ಲ; ನಮಗೂ ಇದೆ ಎಂದು ತಿರುಗೇಟು ನೀಡಿದರು. ಕಳೆದ 25-30 ವರ್ಷದಿಂದ ಮಂಡ್ಯ ಏಗಿತ್ತೋ ಹಾಗೇ ಇದೆ. 50 ಕೋಟಿ ರೂ ಆ ಜಿಲ್ಲೆಗೆ ಕೊಟ್ಟಿದ್ದೇ ದೊಡ್ಡದು ಎಂಬ ಟೀಕೆ ಮಾಡುತ್ತಾರೆ ಎಂದರು.
ರಾಜ್ಯದ ಎಲ್ಲ ಹಾಲು ಒಕ್ಕೂಟಗಳಲ್ಲಿ ಏಕ ರೂಪ ದರವನ್ನು ಹಾಲು ಉತ್ಪಾದಕರಿಗೆ ನೀಡಿ ಎಂದು ಬಿಜೆಪಿ ಶಾಸಕ ಸಿ.ಟಿ.ರವಿ ಸಲಹೆ ಮಾಡಿದರು. ಶಾಸಕ ಮಾಧುಸ್ವಾಮಿ ಮಾತನಾಡಿ ಕೋಲಾರದಲ್ಲಿ ಮೆಗಾಡೈರಿ ಮಾಡಬೇಕಿತ್ತು ಎಂದರು. ಇದಕ್ಕೆ ಸ್ಪಂದಿಸಿದ ಮುಖ್ಯಮಂತ್ರಿ ಕೋಲಾರ ಜಿಲ್ಲೆಯಲ್ಲಿ ಮೆಗಾಡೈರಿ ಬಗ್ಗೆ ಇದೇ ವರ್ಷದಲ್ಲಿ ತೀರ್ಮಾನ ಕೈಗೊಳ್ಳಲಾಗುವುದು. ರಾಜ್ಯದಲ್ಲಿ 85 ಲಕ್ಷ ಲೀಟರ್ ಹಾಲು ಉತ್ಪಾದನೆಯಾಗುತ್ತಿದೆ. ಸದ್ಯದಲ್ಲೇ ಹಾಲು ಉತ್ಪಾದಕರ ಒಕ್ಕೂಟಗಳ ಸಭೆ ಕರೆಯಲಾಗುವುದು ಎಂದರು.
ಬೆಂಗಳೂರಿನ ಆದಾಯವನ್ನು ಇಡೀ ರಾಜ್ಯಕ್ಕೆ ಹಂಚಲಾಗುತ್ತಿದೆ. ಬೆಂಗಳೂರು ಅಭಿವೃದ್ಧಿಗೆ ಖಾಸಗಿ ಸಾರ್ವಜನಿಕ ಸಹಭಾಗಿತ್ವದಲ್ಲಿ ಔಟರ್ ೆರಿಫಿರಲ್ ರಿಂಗ್ ರೋಡ್ ಸೇರಿದಂತೆ ಕೆಲವು ಯೋಜನೆಗಳನ್ನು ಪ್ರಕಟಿಸಲಾಗಿದೆ.
ಸಮಗ್ರ ಕರ್ನಾಟಕದ ಅಭಿವೃದ್ಧಿಯೇ ಸಮ್ಮಿಶ್ರ ಸರ್ಕಾರದ ಗುರಿ. ೆಬ್ರವರಿ ತಿಂಗಳಲ್ಲಿ ಸಿದ್ಧರಾಮಯ್ಯ ಅವರು ಹೊಸ ವೈದ್ಯಕೀಯ ಕಾಲೇಜು ಆರಂಭಕ್ಕೆ ನಿಗದಿಮಾಡಿರುವ ಅನುದಾನ ಕಡಿತ ಮಾಡಿಲ್ಲ ಎಂದು ಹೇಳಿದರು.
ಸಹಕಾರಿ ಸಂಘಗಳ ಚಾಲ್ತಿ ಸಾಲ ಒಂದು ಲಕ್ಷ ರೂ ವರೆಗೂ ಮನ್ನಾ ಮಾಡುವ ಬಗ್ಗೆ ತೀರ್ಮಾನ ಕೈಗೊಳ್ಳಲಾಗುವುದು. ಇದಕ್ಕಾಗಿ 10700 ಕೋಟಿ ರೂ ಹೊರೆಯಲಾಗಲಿದೆ.
ಅನ್ನಭಾಗ್ಯ ಯೋಜನೆಯಡಿ ಪ್ರತಿ ವ್ಯಕ್ತಿಗೆ ನೀಡುವ 5 ಕೆ.ಜಿ.ಅಕ್ಕಿಯನ್ನು 7 ಕೆ.ಜಿ.ಗೆ ಹೆಚ್ಚಿಸಲು ಎರಡೂವರೆ ಸಾವಿರ ಕೋಟಿ ರೂ ಹೊರೆಯಾಗಲಿದೆ. ಈ ಬಗ್ಗೆಯೂ ತೀರ್ಮಾನ ಕೈಗೊಳ್ಳಲಾಗುವುದು ಎಂದರು.
ಯಡಿಯೂರಪ್ಪ ಮಾತನಾಡಿ ನಾಲ್ಕು ಕಂತುಗಳ ಸಾಲ ಮನ್ನಾ, ಸಾಲ ತೀರುವಳ್ಳಿ ಪತ್ರ, ಸ್ತ್ರೀಶಕ್ತಿ ಸಂಘಗಳ ಸಾಲ ಮನ್ನಾ ಸೇರಿದಂತೆ ಹಲವು ವಿಚಾರಗಳಲ್ಲಿ ಸ್ಪಷ್ಟನೆ ಬಯಸಿದರು.
ಮುಖ್ಯಮಂತ್ರಿ ಮಾತನಾಡಿ, ರೈತರ ಸಾಲ ಮನ್ನಾ ವಿಚಾರ ಸಮ್ಮಿಶ್ರ ಸರ್ಕಾರದ ಬದ್ಧತೆ. ರೈತರಿಗೆ ಜೀವ ಕೊಟ್ಟಾದರೂ ಘೋಷಣೆ ಮಾಡಿದ ಸಾಲ ಮನ್ನಾ ಮಾಡಿ ರೈತರನ್ನು ಉಳಿಸಲಾಗುವುದು. ಮಹಾದಾಯಿ ಯೋಜನೆ ತೀರ್ಪು ಆಗಸ್‌ಟ್ನಲ್ಲಿ ಬರಲಿದೆ. ತೀರ್ಪು ಬಂದ ಕೂಡಲೇ ಕೆಲಸ ಪ್ರಾರಂಭಿಸಲಾಗುವುದು ಎಂದು ಹೇಳಿ ಆಯ ವ್ಯಯಕ್ಕೆ ಒಪ್ಪಿಗೆ ನೀಡುವಂತೆ ಮನವಿ ಮಾಡಿದರು.
ಮುಖ್ಯಮಂತ್ರಿ ನೀಡಿದ ಉತ್ತರದಿಂದ ತೃಪ್ತರಾಗದ ಬಿಜೆಪಿ ಶಾಸಕರು ವಿರೋಧ ಪಕ್ಷದ ನಾಯಕ ಬಿ.ಎಸ್.ಯಡಿಯೂರಪ್ಪ ನೇತೃತ್ವದಲ್ಲಿ ಸಭಾತ್ಯಾಗ ಮಾಡಿದರು.
ಸಭಾತ್ಯಾಗದ ನಡುವೆ ಸಭಾಧ್ಯಕ್ಷ ರಮೇಶ್‌ಕುಮಾರ್, ಧನ ವಿನಿಯೋಗ ವಿಧೇಯಕ 2018 ಎರಡು, ಕರ್ನಾಟಕ ಮೌಲ್ಯವರ್ಧಿತ ತಿದ್ದುಪಡಿ ವಿಧೇಯಕ 2018 ಹಾಗೂ ಕರ್ನಾಟಕ ವಿದ್ಯುತ್ ಚಕ್ತಿ(ಬಳಕೆ ಅಥವಾ ಮಾರಾಟದ ಮೇಲೆ ತೆರಿಗೆ ನಿರ್ಧರಣೆ ) ತಿದ್ದುಪಡಿ ವಿಧೇಯಕ ಸೇರಿದಂತೆ ಪೂರ್ಣ ಪ್ರಮಾಣದ ಎರಡು ಲಕ್ಷ ಇಪ್ಪತ್ನಾಲ್ಕು ಸಾವಿರದ ನೂರ ಹತ್ತುಕೋಟಿ ಎಪ್ಪತ್ತೇಳು ಲಕ್ಷ ರೂಪಾಯಿ ಬಜೆಟ್‌ನ್ನು ಮತಕ್ಕೆ ಹಾಕಿದಾಗ ಧ್ವನಿಮತದ ಒಪ್ಪಿಗೆ ದೊರೆಯಿತು ಎಂದು ಪ್ರಟಕಟಿಸಿದರು.'