5/27/2019

ದೇಶ | ವಿದೇಶ ವಿವರ ಪುಟ

ಮಾನ್ವಿ : ಆಡಳಿತದಲ್ಲಿ ಪ್ರಾಮಾಣಿಕತೆ, ಪಾರದರ್ಶಕತೆ ಇರಲಿ - ಬಸನಗೌಡ ದದ್ದಲ

Font size -16+

'ತಾ.ಪಂ. ಸಭಾಂಗಣದಲ್ಲಿ ಅಧಿಕಾರಿಗಳ ಸಭೆ

ಸುದ್ದಿಮೂಲ ವಾರ್ತೆ, ಮಾನ್ವಿ, ಜೂ.13
ಸರಕಾರಿ ಆಡಳಿತದಲ್ಲಿ ಪ್ರಾಮಾಣಿಕತೆ, ಪಾರದರ್ಶಕತೆ ಹಾಗೂ ದಕ್ಷತೆ ಹೊಂದಿರಬೇಕೆಂದು ರಾಯಚೂರು ಗ್ರಾಮೀಣ ಶಾಸಕ ಬಸನಗೌಡ ದದ್ದಲ ವಿವಿಧ ಇಲಾಖೆಯ ಅಧಿಕಾರಿಗಳಿಗೆ ಸಲಹೆ ನೀಡಿದರು.
ಬುಧವಾರ ಮಾನ್ವಿ ತಾ.ಪಂ. ಸಭಾಂಗಣದಲ್ಲಿ ಕರೆದಿದ್ದ ಸರಕಾರಿ ಅಧಿಕಾರಿಗಳ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು ನಾನು ಅಧಿಕಾರಿಗಳಿಂದ ಯಾವುದೇ ಆಪೇಕ್ಷೆ ಹೊಂದಿಲ್ಲ. ಅಧಿಕಾರಿಗಳಾದ ನೀವು ಪ್ರಾಮಾಣಿಕತೆ, ಪಾರದರ್ಶಕತೆ ಹಾಗೂ ದಕ್ಷತೆಯಿಂದ ಕೆಲಸ ಮಾಡಿ ಕ್ಷೇತ್ರದ ಜನರ ಸಮಸ್ಯೆಗಳಿಗೆ ಪರಿಹಾರ ಒದಗಿಸಬೇಕೆಂದು ಸೂಚಿಸಿದರು.
ಮಾನ್ವಿ ತಾಲೂಕಿನ ಕುರ್ಡಿ ಹೋಬಳಿಯ 23 ಗ್ರಾಮಗಳು ರಾಯಚೂರು ಗ್ರಾಮೀಣ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುತ್ತಿದ್ದು ಈ ಭಾಗದ ಗ್ರಾಮಗಳಲ್ಲಿ ಅಧಿಕಾರಿಗಳು ಕುಡಿಯುವ ನೀರು, ರಸ್ತೆ, ವಿದ್ಯುತ್, ಶಿಕ್ಷಣ, ಆರೋಗ್ಯಕ್ಕೆ ಮೊದಲ ಆದ್ಯತೆ ನೀಡಬೇಕು. ನೆನೆಗುದಿಗೆ ಬಿದ್ದಿರುವ ಕುಡಿಯುವ ನೀರಿನ ಯೋಜನೆಯ ಕಾಮಗಾರಿಗಳು, ಕಟ್ಟಡ ಕಾಮಗಾರಿಗಳಿಗೆ ಶೀಘ್ರವೇ ಚಾಲನೆ ನೀಡಬೇಕೆಂದು ಅಧಿಕಾರಿಗಳಿಗೆ ಸೂಚನೆ ನೀಡಿದರು. ಎಲ್ಲಾ ಇಲಾಖೆಯ ಅಧಿಕಾರಿಗಳು 2013 ರಿಂದ ಇಲ್ಲಿಯವರೆಗೆ ತಮ್ಮ ಇಲಾಖೆಯ ವತಿಯಿಂದ ಜರುಗಿದ ಪ್ರಗತಿ ಕಾಮಗಾರಿಗಳ ಮಾಹಿತಿ ಕೊಡಬೇಕೆಂದು ತಿಳಿಸಿದ ಶಾಸಕ ಬಸನಗೌಡ ದದ್ದಲ ಶಿಕ್ಷಕರ ಖಾಲಿ ಹುದ್ದೆಗಳ ಮಾಹಿತಿ, ನೆನೆಗುದಿಗೆ ಬಿದ್ದಿರುವ ಶಾಲಾ ಕಟ್ಟಡಗಳ ಮಾಹಿತಿ, ಬಹುಗ್ರಾಮ ಯೋಜನೆಯಡಿ 2003 ರಲ್ಲಿ ಆರಂಭವಾದ ಕುರ್ಡಿ ಗ್ರಾಮದ ಕುಡಿಯುವ ನೀರಿನ ಯೋಜನೆಯ ಸಂಪೂರ್ಣ ಮಾಹಿತಿ ನೀಡಬೇಕೆಂದು ಅಧಿಕಾರಿಗಳಿಗೆ ಸೂಚಿಸಿದರು.
ಒಟ್ಟಾರೆಯಾಗಿ ಸಭೆಯಲ್ಲಿ ಭಾಗವಹಿಸಿದ್ದ ಶಿಕ್ಷಣ, ಕೃಷಿ, ತೋಟಗಾರಿಕೆ, ಪಶು ಸಂಗೋಪನೆ, ರೇಷ್ಮೆ, ಕೆಪಿಟಿಸಿಎಲ್, ಗ್ರಾಮೀಣಾಭಿವೃದ್ದಿ, ಪಂಚಾಯತ್ ರಾಜ್ಯ, ಗ್ರಾಮೀಣ ಕುಡಿಯುವ ನೀರು, ಸಮಾಜ ಕಲ್ಯಾಣ, ಪರಿಶಿಷ್ಟ ಪಂಗಡ ಕಲ್ಯಾಣ, ಹಿಂದುಳಿದ ವರ್ಗಗಳ ಇಲಾಖೆ, ಲೋಕೋಪಯೋಗಿ ಇಲಾಖೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ, ಆರೋಗ್ಯ ಇಲಾಖೆ ಸೇರಿದಂತೆ ಇತರ ಇಲಾಖೆಯ ಅಧಿಕಾರಿಗಳಿಂದ ಅಭಿವೃದ್ದಿಯ ವರದಿ ಪಡೆದು ಕೂಡಲೇ ಬರವಣಿಗೆ ರೂಪದಲ್ಲಿ ಹಿಂದಿನ ಐದು ವರ್ಷದ ಎಲ್ಲಾ ಪ್ರಗತಿ ಮಾಹಿತಿಯನ್ನು ನೀಡಬೇಕೆಂದು ಅಧಿಕಾರಿಗಳಿಗೆ ಸೂಚಿಸಿ ದರು.
ಈ ಸಭೆಯಲ್ಲಿ ತಹಸೀಲ್ದಾರ್ ಶ್ರೀನಿವಾಸಮೂರ್ತಿ, ತಾ.ಪಂ.ಸಹಾಯಕ ಕಾರ್ಯ ನಿರ್ವಾಹಕ ಅಧಿಕಾರಿ ಶಶಿಕಾಂತ ಶಿವಪುರ, ಸಿಪಿಐ ಶ್ರೀನಿವಾಸರಾವ್ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಭಾಗವಹಿಸಿದ್ದರು.'