5/27/2019

ದೇಶ | ವಿದೇಶ ವಿವರ ಪುಟ

ಜನರ ತೀರ್ಪಿಗೆ ತಲೆ ಬಾಗುತ್ತೇವೆ - ಬೋಸರಾಜು

Font size -16+

'ಮಾನ್ವಿಯಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಸಭೆ : ಶಾಸಕ ದದ್ದಲ ಬಸನಗೌಡಗೆ ಸನ್ಮಾನ

ಸುದ್ದಿಮೂಲ ವಾರ್ತೆ, ಮಾನ್ವಿ, ಜೂ.13
ವಿಧಾನಸಭಾ ಚುನಾವಣೆಯ ಮತದಾರರ ತೀರ್ಪಿಗೆ ತಲೆಬಾಗುವುದಾಗಿ ಕೆಪಿಸಿಸಿ ಉಪಾಧ್ಯಕ್ಷರು ಹಾಗೂ ವಿಧಾನ ಪರಿಷತ್ತು ಸದಸ್ಯರಾದ ಎನ್.ಎಸ್.ಬೋಸರಾಜು ಹೇಳಿದರು.
ಅವರು ಬುಧವಾರ ಮಾನ್ವಿ ನಗರದ ಎಪಿಎಂಸಿ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಮಾನ್ವಿ ವಿಧಾನಸಭಾ ಕ್ಷೇತ್ರದ ಮಾನ್ವಿ ಮತ್ತು ಸಿರವಾರ ಬ್ಲಾಕ್ ಕಾಂಗ್ರೆಸ್ ಸಮಿತಿ ಪದಾಧಿಕಾರಿಗಳ, ಕಾರ್ಯಕರ್ತರ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ಚುನಾವಣೆಯಲ್ಲಿ ಸೋಲು-ಗೆಲುವು ಸಹಜ, ಪ್ರಸಕ್ತ ಚುನಾವಣೆಯಲ್ಲಿ ನಾವು ಮಾನ್ವಿ ಕ್ಷೇತ್ರದಲ್ಲಿ ಸೋತಿದ್ದು, ಸಂತೋಷದಿಂದ ಸ್ವೀಕರಿಸುತ್ತೇವೆ, ಸೋತಿರುವ ಬಗ್ಗೆ ನಮ್ಮ ಮನಸ್ಸಿಗೆ ಬೇಜಾರು ಇಲ್ಲ. ಕಳೆದ 20 ವರ್ಷಗಳಿಂದ ನಾವು ಅಭಿವೃದ್ದಿ ಕೆಲಸ ಮಾಡಿದ ಸಂತೃಪ್ತಿ ಇದೆ. ಕ್ಷೇತ್ರದಲ್ಲಿ ಶಾಂತಿ ಸೌಹಾರ್ದತೆ ಕಾಪಾಡಿಕೊಂಡು ಬಂದಿರುವ ತೃಪ್ತಿ ಇದೆ. ಈ ಚುನಾವಣೆಯಲ್ಲಿ ನಾವು ಸೋತಿರುವುದಕ್ಕೆ ಯಾರನ್ನೂ ದೂರುವ ಅವಶ್ಯಕತೆ ಇಲ್ಲ. ಪಕ್ಷದ ಮುಖಂಡರು, ಕಾರ್ಯಕರ್ತರು ಪ್ರಾಮಾಣಿಕತೆಯಿಂದ ಕೆಲಸ ಮಾಡಿದ್ದಾರೆ. ಆದರೆ ಪ್ರಜಾಪ್ರಭುತ್ವದಲ್ಲಿ ಜನಾಭಿಪ್ರಾಯಕ್ಕೆ ನಾವು ಮನ್ನಣೆ ನೀಡಲೇಬೇಕು. ಜನರು ಬದಲಾವಣೆ ಬಯಸಿದ ಕಾರಣ ನಮಗೆ ಸೋಲಾಗಿದೆ ಎಂದರು.
ಸೋತಿದ್ದೇವೆ ಎಂದು ನಾವು ನಿರಾಶೆಯಾಗಿ ಧೈರ್ಯಗುಂದಬಾರದು. ರಾಜ್ಯದಲ್ಲಿ ಅನೇಕ ಸಚಿವರು, ಪ್ರಮುಖ ಮುಖಂಡರು ಸೋತಿರುವ ಉದಾಹರಣೆಗಳಿವೆ. ಮುಂದಿನ ದಿನಗಳಲ್ಲಿ ಪಕ್ಷ ಸಂಘಟಿಸಿ ಬೆಳಸಬೇಕಾಗಿದೆ. ಮುಂದಿನ ದಿನಗಳಲ್ಲಿ ಸ್ಥಳೀಯ ಸಂಸ್ಥೆಗಳ ಚುನಾವಣೆ, ಲೋಕಸಭಾ ಚುನಾವಣೆಯಲ್ಲಿ ನಾವು ಭಾರತೀಯ ಜನತಾ ಪಕ್ಷ ಎದುರಿಸಬೇಕಾಗಿದೆ. ಹೈದ್ರಾಬಾದ್ ಕರ್ನಾಟಕದಲ್ಲಿ ನಮ್ಮ ಪಕ್ಷಕ್ಕೆ ಯಾವುದೇ ಹಾನಿ ಇಲ್ಲ. ಕಳೆದ ಸಲ ಹೈ-ಕ ಭಾಗದ 40 ಶಾಸಕ ಸ್ಥಾನಗಳಲ್ಲಿ 23 ಸ್ಥಾನದಲ್ಲಿ ಗೆದ್ದಿದ್ದೆವು. ಈ ಬಾರಿ 21 ಸ್ಥಾನಗಳಲ್ಲಿ ಗೆಲುವು ಕಂಡಿದ್ದೇವೆ. ಕಳೆದ ಸಲಕ್ಕೆ ಹೋಲಿಸಿದರೆ ಕಾಂಗ್ರೆಸ್‌ಗೆ ಕೇವಲ 2 ಸ್ಥಾನಗಳ ಕೊರತೆಯಾಗಿದೆ. ಈಶಾನ್ಯ ಪದವೀಧರ ಕ್ಷೇತ್ರದಲ್ಲಿ ಈ ಸಾರಿ ಕಾಂಗ್ರೆಸ್ ಪಕ್ಷ ಗೆಲುವು ಸಾಧಿಸಿರುವುದು ಪಕ್ಷದ ಉತ್ತಮ ಬೆಳವಣಿಗೆ ಎಂದು ಬೋಸರಾಜು ಹೇಳಿದರು.
ಮಾಜಿ ಶಾಸಕ ಹಂಪಯ್ಯ ನಾಯಕ ಮಾತನಾಡಿ ಸೋಲು, ಗೆಲುವಿನ ಮೆಟ್ಟಿಲಾಗಿದೆ. ನಾನು ಸೋತಿರುವ ಕುರಿತು ಯಾರನ್ನೂ ದೂರುವುದಿಲ್ಲ. ಈ ಚುನಾವಣೆಯಲ್ಲಿ ನಾನು ಸೋತರೂ ಸಂತೋಷದಿಂದ ಜನರ ತೀರ್ಪಿಗೆ ತಲೆ ಬಾಗುತ್ತೇನೆ. ಜನಾಭಿಪ್ರಾಯಕ್ಕೆ ನಾವು ಮನ್ನಣೆ ನೀಡಲೇಬೇಕು. ಪಕ್ಷಕ್ಕೆ ಕಾರ್ಯಕರ್ತರು ಜೀವಾಳವಾಗಿದ್ದಾರೆ. ಚುನಾವಣೆಯಲ್ಲಿ ನಾವು ಸೋತರೂ ಗೆದ್ದಿರುವ ತರಹ ಮುಂಬರುವ ಚುನಾವಣೆಗಳಲ್ಲಿ ಪಕ್ಷ ಸಂಘಟನೆ ಮಾಡಿ ಪಕ್ಷವನ್ನು ಗಟ್ಟಿಗೊಳಿಸಬೇಕೆಂದು ಸಲಹೆ ನೀಡಿದ ಅವರು ನನ್ನ ಪರವಾಗಿ ಕೆಲಸ ಮಾಡಿದ ಪಕ್ಷದ ಮುಖಂಡರಿಗೆ, ಕಾರ್ಯಕರ್ತರಿಗೆ ಕೃತಜ್ಞತೆ ಸಲ್ಲಿಸುವುದಾಗಿ ಮಾಜಿ ಶಾಸಕ ಹಂಪಯ್ಯನಾಯಕ ಹೇಳಿದರು.
ರಾಯಚೂರು ಗ್ರಾಮೀಣ ಶಾಸಕ ಬಸನಗೌಡ ದದ್ದಲ ಮಾತನಾಡಿ ಒಬ್ಬ ಸಾಮಾನ್ಯ ವ್ಯಕ್ತಿಯಾದ ನನ್ನನ್ನು ವಿಧಾನ ಪರಿಷತ್ತು ಸದಸ್ಯರಾದ ಎನ್.ಎಸ್.ಬೋಸರಾಜು ಇವರು ನನ್ನನ್ನು ಶಾಸಕನನ್ನಾಗಿ ಮಾಡಿ ಉನ್ನತ ಮಟ್ಟಕ್ಕೆ ಕೊಂಡೊಯ್ದಿದ್ದಾರೆ. ಎನ್.ಎಸ್. ಬೋಸರಾಜು, ಮತ್ತು ಮಾಜಿ ಶಾಸಕ ಹಂಪಯ್ಯ ನಾಯಕ ಇವರ ಮಾರ್ಗದರ್ಶನದಲ್ಲಿ ಸದಾ ಮುನ್ನಡೆಯುವುದಾಗಿ ಹೇಳಿದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಬ್ದುಲ್ ಗೂರ್‌ಸಾಬ್, ನಯೋಪ್ರಾ ಮಾಜಿ ಅಧ್ಯಕ್ಷ ಬಿ.ಕೆ.ಅಮರೇಶಪ್ಪ, ಜಿ.ಪಂ.ಸದಸ್ಯ ಕಿರಿಲಿಂಗಪ್ಪ, ಮುಖಂಡ ಮಲ್ಲಿಕಾರ್ಜುನ ನಾಡಗೌಡ, ವೀರನಗೌಡ ಪೋತ್ನಾಳ್ ವಕೀಲರು ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಿದರು.
ನೂತನವಾಗಿ ಆಯ್ಕೆಯಾದ ರಾಯಚೂರು ಗ್ರಾಮೀಣ ಶಾಸಕ ಬಸನಗೌಡ ದದ್ದಲ ಇವರನ್ನು ಬ್ಲಾಕ್ ಕಾಂಗ್ರೆಸ್ ವತಿಯಿಂದ ಸನ್ಮಾನಿಸಲಾಯಿತು.
ವೇದಿಕೆಯ ಮೇಲೆ ಎಪಿಎಂಸಿ ಅಧ್ಯಕ್ಷ ಬೀರಪ್ಪ ಕಡದಿನ್ನಿ, ಜಿ.ಪಂ.ಸದಸ್ಯರಾದ ಗಂಗಣ್ಣ ನಾಯಕ, ವೀರಭದ್ರಪ್ಪಗೌಡ ಭೋಗಾವತಿ, ಸಿರವಾರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಯ್ಯನಗೌಡ ಜಂಬಲದಿನ್ನಿ, ಪ್ರಧಾನ ಕಾರ್ಯದರ್ಶಿ ಮಹಾಂತೇಶಸ್ವಾಮಿ ರೌಡೂರು, ಡಾ.ರೋಹಿಣಿ ಮಾನ್ವಿಕರ್, ರಾಜಾ ವಸಂತ ನಾಯಕ, ಲಕ್ಷ್ಮೀ ನಾರಾಯಣ ಯಾದವ್, ಹನುಮೇಶ ಮದ್ಲಾಪುರ, ಬಸವರಾಜ ಕಲ್ಲೂರು, ಮನ್ಸಾಲಿ ಯಂಕಯ್ಯಶೆಟ್ಟಿ, ತಾ.ಪಂ.ಉಪಾಧ್ಯಕ್ಷ ಮಲ್ಲಗೌಡ ಕರಾಬದಿನ್ನಿ, ಮುಖಂಡರಾದ ಈರಪ್ಪಗೌಡ ಚೀಕಲಪರ್ವಿ, ಎಸ್.ಎಂ.ಪಾಟೀಲ್, ಹುಸೇನಪ್ಪ ಜಗ್ಲಿ, ಹೊನ್ನಪ್ಪ ಹೆಳವರ್, ತಿಪ್ಪಣ್ಣ ಬಾಗಲವಾಡ, ಕೃಪಾಸಾಗರ್ ಪಾಟೀಲ್, ಬಸನಗೌಡ ಜಾನೇಕಲ್, ಬಂಡೆಯ್ಯಸ್ವಾಮಿ, ಚಂದ್ರು ಕಳಸ ಸಿರವಾರ, ದಾನನಗೌಡ ಸಿರವಾರ, ಸೈಯದ್ ಹುಸೇನ್, ಗುಂಡಮ್ಮ ವಕೀಲರು, ಈರಮ್ಮ, ಸಾದಿಖ್ ಖುರೇಶಿ, ಗೋವಿಂದರಾಜು ವಕೀಲರು, ರಡ್ಡೆಪ್ಪಗೌಡ ಕವಿತಾಳ, ದೇವಣ್ಣ ನವಲಕಲ್ ಉಪಸ್ಥಿತರಿದ್ದರು.
ಕಾಂಗ್ರೆಸ್ ಮುಖಂಡ ಸೈಯದ್ ಖಾಲಿದ್‌ಖಾದ್ರಿ ನಿರೂಪಿಸಿ ವಂದಿಸಿದರು.'