5/27/2019

ದೇಶ | ವಿದೇಶ ವಿವರ ಪುಟ

ಶಾಂತಿಯುತವಾಗಿ ರಂಜಾನ್ ಆಚರಿಸಿ : ಜಿಲ್ಲಾಧಿಕಾರಿ

Font size -16+

'ಸುದ್ದಿಮೂಲ ವಾರ್ತೆ, ರಾಯಚೂರು, ಜೂ.13
ಮುಸ್ಲಿಂ ಬಾಂಧವರ ಪವಿತ್ರ ಹಬ್ಬ ರಂಜಾನ ಹಬ್ಬ ಶಾಂತಿ, ಸೌಹಾರ್ದತೆಯಿಂದ ಆಚರಿಸಬೇಕೆಂದು ಜಿಲ್ಲಾಧಿಕಾರಿ ಗೌತಮ್ ಬಗಾದಿ ಸಾರ್ವಜನಿಕರಲ್ಲಿ ಮನವಿ ಮಾಡಿದರು.
ನಗರದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿ ಸಭಾಂಗಣದಲ್ಲಿಂದು ಜಿಲ್ಲಾ ಪೊಲೀಸ್‌ಮತ್ತು ಜಿಲ್ಲಾಡಳಿತ ವತಿಯಿಂದ ಹಮ್ಮಿಕೊಂಡಿದ್ದ ಶಾಂತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿ, ಅಂದು ಈದ್ಗಾ ಮೈದಾನದಲ್ಲಿ ಜರುಗುವ ಪ್ರಾರ್ಥನೆಯ ವೇಳೆಯಲ್ಲಿ ಯಾವುದೇ ಅಹಿತಕರ ಘಟನೆಗಳಿಗೆ ಆಸ್ಪದ ಕೊಡದೇ, ಶಾಂತಿ ಕದಡುವ ಪ್ರಯತ್ನ ಮಾಡದೇ ಶಾಂತಿಯುತವಾಗಿ ಆಚರಿಸುವಂತೆ ತಿಳಿಸಿದರು.
ರಂಜಾನ್ ಹಬ್ಬದ ಸಂದರ್ಭದಲ್ಲೂ ನಗರದಲ್ಲಿ ಕುಡಿವ ನೀರು ಸರಬರಾಜಿನಲ್ಲಿ ವ್ಯತ್ಯಯ, ಅನಿಯಮಿತ ವಿದ್ಯುತ್ ಲೋಡ್ ಶೆಡ್ಡಿಂಗ್, ಸಂಚಾರದಲ್ಲಿ ಆಗುತ್ತಿರುವ ವ್ಯತ್ಯಯ ಕುರಿತು ಮುಸ್ಲಿಂ ಸಮುದಾಯದ ಮುಖಂಡರು ಪ್ರಸ್ತಾಪಿಸಿ ನಗರಸಭೆಯ ಅಲಕ್ಷ್ಯದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು.
ಅಂದ್ರೂನ್ ಕಿಲ್ಲಾ, ಬೆರೂನ್ ಕಿಲ್ಲಾ ಸೇರಿದಂತೆ ಪ್ರಮುಖ ಬಡಾವಣೆಗಳಲ್ಲಿ ದಿನ ಬಿಟ್ಟು ದಿನ ಬದಲಾಗಿ ನಾಲ್ಕು ದಿನಕ್ಕೊಮ್ಮೆ ತಡರಾತ್ರಿ ನೀರು ಸರಬರಾಜು ಮಾಡಿದರೆ ರಂಜಾನ್ ಮಾಸದಲ್ಲಿ ರೋಜಾ ಮಾಡುವುದಾದರೂ ಹೇಗೆ ಎಂದು ಪ್ರಶ್ನಿಸಿದರು. ರಂಜಾನ್ ತಿಂಗಳ ಮುಗಿಯುವವರೆಗೆ ಅನವಶ್ಯಕವಾಗಿ ವಿದ್ಯುತ್ ಸರಬರಾಜು ಕಡಿತಗೊಳಿಸದಂತೆ ಜೆಸ್ಕಾಂ ಇಲಾಖೆಗೆ ಸೂಚನೆ ನೀಡುವಂತೆ ಮುಖಂಡ ನಜೀರ್ ಪಂಜಾಬಿ ಜಿಲ್ಲಾಧಿಕಾರಿಗಳನ್ನು ಒತ್ತಾಯಿಸಿದರು.
ರಾತ್ರಿ 8 ಗಂಟೆಗೆ ವಿದ್ಯುತ್ ಕಡಿತಗೊಳಿಸಿದರೆ ಮಸ್ಜೀದ್‌ಗಳಲ್ಲಿ ಮುಸ್ಲಿಂ ಬಾಂಧವರು ವಿಶೇಷ ಪ್ರಾರ್ಥನೆ ಸಲ್ಲಿಸುವುದಾದರೂ ಹೇಗೆ ಎಂದು ಪ್ರಶ್ನಿಸಿದರು. ಪವಿತ್ರ ರಂಜಾನ್ ತಿಂಗಳಲ್ಲಿ ದಿನ ಬಳಕೆ ಸಾಮಗ್ರಿ ಖರೀದಿಗೂ ಪ್ರಮುಖ ರಸ್ತೆಗಳಲ್ಲಿ ಸಂಚಾರ ದಟ್ಟಣೆ ತಲೆನೋವಾಗಿ ಪರಿಣಮಿಸಿದೆ. ಶಾಲಾ ಮಕ್ಕಳು ಇಕ್ಕಟ್ಟಿನಲ್ಲಿ ಸಂಚರಿಸುವ ದುಸ್ಥಿತಿಯಿದ್ದರೂ, ಸಂಚಾರಿ ಪೊಲೀಸರು ಈ ಬಗ್ಗೆ ಗಮನ ಹರಿಸುತ್ತಿಲ್ಲ ಎಂದು ಮುಖಂಡರು ದೂರಿದರು.
ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿಗಳು ರಂಜಾನ್ ಹಬ್ಬದ ನಿಮಿತ್ಯ ಕೆಲ ಬಡಾವಣೆ ಗಳಿಗೆ ಟ್ಯಾಂಕರ್ ಮೂಲಕ ನೀರು ವ್ಯವಸ್ಥೆ ಕಲ್ಪಿಸುವಂತೆ ಪೌರಾಯುಕ್ತರಿಗೆ ಈಗಾಗಲೇ ನಿರ್ದೇಶನ ನೀಡಲಾಗಿದೆ. ಕೆಲ ಅನಿವಾರ್ಯ ಕಾಮಗಾರಿ ನಿರ್ವಹಣೆಯಿಂದಾಗಿ ಕುಡಿವ ನೀರಿನ ಸರಬರಾಜಿನಲ್ಲಿ ವ್ಯತ್ಯಯವಾಗಿದೆ. ಪ್ರಮುಖ ವೃತ್ತ ಸೇರಿ ಬಡಾವಣೆಗಳಲ್ಲಿ ಬೇಕಾ ಬಿಟ್ಟಿ ವಿದ್ಯುತ್ ಕಡಿತಗೊಳಿಸುವ ಸಂಬಂಧಪಟ್ಟವರ ವಿರುದ್ಧ ಶಿಸ್ತು ಕ್ರಮ ವಹಿಸಲಾ ಗುವುದೆಂದರು. ನಗರದ ಪ್ರಮುಖ ವೃತ್ತಗಳಲ್ಲಿ ಸ್ವಚ್ಛತೆ ಕಾಯ್ದುಕೊಂಡು ಕುಡಿವ ನೀರಿನ ಪರ್ಯಾಯ ವ್ಯವಸ್ಥೆಗೆ ಕಟ್ಟೆಚ್ಚರ ವಹಿಸುವಂತೆ ಪೌರಾಯುಕ್ತ ರಮೇಶ ನಾಯಕ ಅವರಿಗೆ ಸ್ಪಷ್ಟವಾಗಿ ತಿಳಿಸಿದರು. ಹಬ್ಬದ ಸಂದರ್ಭದಲ್ಲಿ ಬಿಗಿ ಬಂದೋಬಸ್ತ ಕಲ್ಪಿಸಲು ಎಸ್ಸಿಗೆ ಸೂಚಿಸಿದರು.
ಎಸ್‌ಸ್ಪಿ ಕಿಶೋರ್ ಬಾಬು ಮಾತನಾಡಿ, ಯಾವುದೇ ಕೋಮು ಸಂಘರ್ಷಕ್ಕೆ ಅವಕಾಶ ನೀಡದಂತೆ ಶಾಂತಿಯಿಂದ ರಂಜಾನ್ ಆಚರಿಸುವಂತೆ ಕೋರಿದರು. ಶಾಂತಿ ಕದಡಲು ಪ್ರಯತ್ನಿಸಿದಲ್ಲಿ ಕಾನೂನು ಕ್ರಮ ಜರುಗಿಸುವುದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ಎ.ಎಸ್.ಪಿ. ಶಿವಕುಮಾರ ಗುನಾರೆ, ನಗರ ಸಭಾ ಉಪಾಧ್ಯಕ್ಷ ಜಯಣ್ಣ ಸೇರಿದಂತೆ ಇನ್ನಿತರರು ಸಭೆಯಲ್ಲಿ ಭಾಗವಹಿಸಿದ್ದರು.'