5/27/2019

ದೇಶ | ವಿದೇಶ ವಿವರ ಪುಟ

ನ್ಯಾಯಾಧೀಶರಿಂದಲೇ ದೂರು, ಪರಿಚಾರಕ ಬಂಧನ

Font size -16+

'ಸುದ್ದಿಮೂಲ ವಾರ್ತೆ, ರಾಯಚೂರು, ಜೂ.13
ಕೌಟುಂಬಿಕ ನ್ಯಾಯಾಲಯದ ಅಧೀನ ನೌಕರನ ಮೇಲೆ ನ್ಯಾಯಾಧೀಶರೇ ಪೊಲೀಸರಿಗೆ ದೂರು ಸಲ್ಲಿಸಿರುವ ಅಪರೂಪದ ಪ್ರಕರಣ ಇಲ್ಲಿ ನಡೆದಿದೆ.
ರಾಯಚೂರು ಕೌಟುಂಬಿಕ ನ್ಯಾಯಾಲಯದಲ್ಲಿ ಪರಿಚಾರಕನಾಗಿ ಕಾರ್ಯ ನಿರ್ವಹಿಸುತ್ತಿರುವ ಯರ್ರಿಸ್ವಾಮಿ ನ್ಯಾಯಾಧೀಶರ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಲ್ಲದೆ ಅನುಚಿತ ವರ್ತನೆ ತೋರಿದ್ದಾರೆಂದು ದೂರಿನಲ್ಲಿ ತಿಳಿಸಿರುವ ಕೌಟುಂಬಿಕ ನ್ಯಾಯಾಲಯದ ನ್ಯಾಯಾಧೀಶೆ ಬಿ.ಎಸ್.ಭಾರತಿ ಈ ಕುರಿತಂತೆ ಬುಧವಾರ ಸದರ ಬಜಾರ್ ಪೊಲೀಸ್ ಠಾಣೆ ಎಎಸ್‌ಐ ಅಮರಣ್ಣ ಅವರಿಗೆ ಲಿಖಿತ ದೂರು ನೀಡಿದ್ದು, ಪರಿಚಾರಕ ಯರ್ರಿಸ್ವಾಮಿ ಬಂಧನವಾಗಿದೆ.
ಆದರೆ, ಈಗಾಗಲೇ ನ್ಯಾಯಾಧೀಶೆ ಭಾರತಿ ಅವರ ವಿರುದ್ಧ ತಮಗೆ ದೈಹಿಕ, ಮಾನಸಿಕ ಕಿರುಕುಳ ಇದೆ ಎಂದು ಯರ್ರಿಸ್ವಾಮಿ ಜಿಲ್ಲಾ ಪ್ರಧಾನ ಹಾಗೂ ಸತ್ರ ನ್ಯಾಯಾಧೀಶರಿಗೆ ದೂರು ಸಲ್ಲಿಸಿ ತಮ್ಮನ್ನು ಅಲ್ಲಿಂದ ವರ್ಗಾವಣೆ ಮಾಡುವಂತೆ ಕೋರಿದ್ದರು.
ರಾಯಚೂರು ಕೌಟುಂಬಿಕ ನ್ಯಾಯಾಲಯದಲ್ಲಿ ಪರಿಚಾರಕನಾಗಿರುವ ಯರ್ರಿಸ್ವಾಮಿ ಇತ್ತೀಚೆಗಷ್ಟೇ ದೇವದುರ್ಗ ನ್ಯಾಯಾಲಯದಿಂದ ರಾಯಚೂರಿನ ಕೌಟುಂಬಿಕ ನ್ಯಾಯಾಯಕ್ಕೆ ವರ್ಗಾವಣೆಯಾಗಿದ್ದು, ನಿವೃತ್ತ ಅಂಚಿನಲ್ಲಿರುವ ತಮಗೆ ನೆಮ್ಮದಿಯಿಂದ ಕೆಲಸ ಮಾಡಲು ಬಿಡದೆ ನ್ಯಾಯಾಧೀಶರು ಕಿರುಕುಳ ನೀಡುತ್ತಿದ್ದು ಸ್ಥಳೀಯ ಯಾವುದೇ ನ್ಯಾಯಾಲಯಕ್ಕೆ ವರ್ಗಾವಣೆ ಮಾಡುವಂತೆಯೂ ಸಕ್ಷಮ ಪ್ರಾಧಿಕಾರಕ್ಕೆ ಕೋರಿದ್ದರು.
ಆದರೆ, ನ್ಯಾಯಾಧೀಶೆ ಭಾರತಿ ಅವರು ಯರ್ರಿಸ್ವಾಮಿ ಅವರ ವಿರುದ್ಧ ಪ್ರತಿ ದೂರು ನೀಡಿರುವುದು ಕುತೂಹಲಕ್ಕೆ ಕಾರಣವಾಗಿದೆ.
'