5/27/2019

ದೇಶ | ವಿದೇಶ ವಿವರ ಪುಟ

ಈಶಾನ್ಯ ಪದವೀಧರ ಕ್ಷೇತ್ರ ಚುನಾವಣೆ ಕಾಂಗ್ರೆಸ್ ಅಭ್ಯರ್ಥಿಗೆ 321 ಮತಗಳ ಅಂತರದ ರೋಚಕ ಗೆಲುವು

Font size -16+

'ಸುದ್ದಿಮೂಲ ವಾರ್ತೆ, ಕಲಬುರಗಿ, ಜೂ.13
ಕರ್ನಾಟಕ ವಿಧಾನ ಪರಿಷತ್ತಿನ ಸದಸ್ಯ ಸ್ಥಾನಕ್ಕೆ ಈಶಾನ್ಯ ಪದವೀಧರ ಮತ ಕ್ಷೇತ್ರದಿಂದ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಡಾ. ಚಂದ್ರಶೇಖರ ಬಿ. ಪಾಟೀಲ ಅವರು 321 ಮತಗಳ ಅಂತರದಿಂದ ರೋಚಕ ಗೆಲುವು ಸಾಧಿಸಿದ್ದಾರೆ.
ಈಶಾನ್ಯ ಪದವೀಧರ ಮತಕ್ಷೇತ್ರದ ಮತ ಎಣಿಕೆಯು ಮಂಗಳವಾರ ಬೆಳಗಿನ 8 ಗಂಟೆಗೆ ಗುಲಬರ್ಗಾ ವಿಶ್ವವಿದ್ಯಾಲಯದ ಗಣಿತ ವಿಭಾಗದಲ್ಲಿ ಆರಂಭಗೊಂಡು ಬುಧವಾರ ಬೆಳಗಿನ ನಸುಕಿನವರೆಗೆ ನಡೆದು ಅಂತಿಮವಾಗಿ ಎರಡನೇ ಪ್ರಾಶಸ್ತ್ಯ ಮತದಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಜಯಗಳಿಸಿದರು.
ಕಾಂಗ್ರೆಸ್ ಅಭ್ಯರ್ಥಿ ಡಾ. ಚಂದ್ರಶೇ ಖರ ಬಿ. ಪಾಟೀಲ ಅವರು ಒಟ್ಟು 18768 ಮತಗಳನ್ನು ಹಾಗೂ ಅವರ ಸಮೀಪದ ಪ್ರತಿಸ್ಪರ್ಧಿ ಭಾರತೀಯ ಜನತಾ ಪಕ್ಷದ ಕೆ.ಬಿ. ಶ್ರೀನಿವಾಸ ಅವರು ಒಟ್ಟು 18447 ಮತಗಳನ್ನು ಪಡೆದರು. ಮತ ಎಣಿಕೆ ತುಂಬಾ ರೋಮಾಂಚಕಾರಿಯಾಗಿತ್ತು.
ಗುಲಬರ್ಗಾ ವಿಶ್ವವಿದ್ಯಾಲಯದ ಗಣಿತ ವಿಭಾಗದಲ್ಲಿ ಮೊದಲ ಪ್ರಾಶಸ್ತ್ಯದ ಮತ ಎಣಿಕೆ ನಾಲ್ಕು ಸುತ್ತುಗಳಲ್ಲಿ ಕೈಗೊಳ್ಳಲಾಯಿತು. ನಾಲ್ಕನೇ ಸುತ್ತಿನಲ್ಲಿ ಭಾರತೀಯ ಜನತಾ ಪಾರ್ಟಿಯ ಕೆ.ಬಿ.ಶ್ರೀನಿವಾಸ್ 14955, ಇಂಡಿಯನ್ ನ್ಯಾಷನಲ್ ಕಾಂಗ್ರೆಸ್ ಪಕ್ಷದ ಡಾ. ಚಂದ್ರಶೇಖರ ಬಿ. ಪಾಟೀಲ 14305, ಜಾತ್ಯತೀತ ಜನತಾ ದಳದ ಎನ್ ಪ್ರತಾಪ್ ರೆಡ್ಡಿ 13311, ಪಕ್ಷೇತರರಾದ ಡಾ. ರಜಾಕ್ ಉಸ್ತಾದ 4488, ಡಾ. ರಾಹುಲ್ ಬ. ತಮ್ಮನ 1024, ಕನ್ನಡ ಚಳವಳಿ ವಾಟಾಳ್ ಪಕ್ಷದಿಂದ ವಾಟಾಳ್ ನಾಗರಾಜ್ 437, ಪಕ್ಷೇತರರಾದ ನಿಂಗಯ್ಯ ಮಠ 149, ಎಲ್. ಪಿ.ಸುಭಾಷ್ ಚಂದ್ರ ನಾಯಕ 86, ಅಶೋಕ್ ಕುಮಾರ್ ಮನ್ನೂರೆ 49, ರಮೇಶ್ ಶಾಸ್ತ್ರಿ 22 ಮತಗಳನ್ನು ಪಡೆದರು. ಮತದಾನದಂದು ಅಂಚೆ ಮತಪತ್ರ ಸೇರಿದಂತೆ ಒಟ್ಟು 55471 ಮತಗಳು ಚಲಾವಣೆಯಾಗಿದ್ದು, ಈ ಪೈಕಿ ನೋಟಾ 62 ಹಾಗೂ ತಿರಸ್ಕೃತ 6483 ಮತಗಳು ಸೇರಿದಂತೆ 6645 ಮತಗಳು ತಿರಸ್ಕೃತಗೊಂಡವು. ಒಟ್ಟು 48826 ಮತಗಳು ಮಾತ್ರ ಪುರಸ್ಕೃತಗೊಂಡವು. ಈ ಸಂದರ್ಭದಲ್ಲಿ ಭಾರತೀಯ ಜನತಾ ಪಕ್ಷದ ಕೆ.ಬಿ. ಶ್ರೀನಿವಾಸ ಪ್ರಥಮ, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಡಾ. ಚಂದ್ರಶೇಖರ ಬಿ.ಪಾಟೀಲ ಎರಡನೇ ಸ್ಥಾನ ಹಾಗೂ ಜಾತ್ಯಾತೀತ ಜನತಾ ದಳದ ಎನ್.ಪ್ರತಾಪರೆಡ್ಡಿ ಮೂರನೇ ಸ್ಥಾನದಲ್ಲಿ ದ್ದರು.
ಪುರಸ್ಕೃತ 48826 ಮತಗಳ ಪೈಕಿ 24414 ಮತಗಳನ್ನು ಯಾವುದೇ ಅಭ್ಯರ್ಥಿ ಪಡೆದಲ್ಲಿ ಅವರನ್ನು ಜಯ ಶಾಲಿಗಳೆಂದು ಘೋಷಿಸಬಹುದಾಗಿತ್ತು. ಆದರೆ, ಯಾವುದೇ ಅಭ್ಯರ್ಥಿ ಕೋಟಾ ದಷ್ಟು ಮತ ಪಡೆಯದ ಕಾರಣ ಎರಡನೇ ಪ್ರಾಶಸ್ತ್ಯದ ಮತಗಳ ಎಣಿಕೆ ಪ್ರಾರಂಭಿ ಸಲಾಯಿತು.
ಅತೀ ಕಡಿಮೆ ಮತಗಳನ್ನು ಪಡೆದ ಪಕ್ಷೇತರರಾದ ರಮೇಶ ಶಾಸ್ತ್ರೀ, ಅಶೋಕ ಕುಮಾರ ಮನ್ನೂರೆ, ಎಲ್.ಪಿ. ಸುಭಾಷಚಂದ್ರ, ನಿಂಗಯ್ಯ ಮಠ, ಕನ್ನಡ ಚಳುವಳಿ ವಾಟಾಳ ಪಕ್ಷದ ವಾಟಾಳ ನಾಗರಾಜ, ಪಕ್ಷೇತರರಾದ ಡಾ. ರಾಹುಲ ಬಿ. ತಮ್ಮನ್, ಡಾ. ರಜಾಕ ಉಸ್ತಾದ ಅವರನ್ನು ಮತ ಎಣಿಕೆ ಪ್ರಕ್ರಿಯೆಯಿಂದ ತೆಗೆದು ಹಾಕಿ ಅವರು ಪಡೆದಿರುವ ಮತಗಳ ಪೈಕಿ ಎರಡು ಮತ್ತು ಹೆಚ್ಚಿನ ಪ್ರಾಶಸ್ತ್ಯ ಮತಗಳನ್ನು ಉಳಿದ ಅಭ್ಯರ್ಥಿಗಳ ಖಾತೆಗೆ ಜಮಾ ಮಾಡಲಾಯಿತು. ಆದಾಗ್ಯೂ ಅತೀ ಹೆಚ್ಚು ಮತಗಳನ್ನು ಪಡೆದ ಭಾರತೀಯ ಜನತಾ ಪಕ್ಷದ ಕೆ.ಬಿ. ಶ್ರೀನಿವಾಸ, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಡಾ. ಚಂದ್ರಶೇಖರ ಬಿ. ಪಾಟೀಲ ಹಾಗೂ ಜಾತ್ಯಾತೀತ ಜನತಾ ದಳದ ಎನ್. ಪ್ರತಾಪರೆಡ್ಡಿ ಅವರು ಕೋಟಾ ತಲುಪ ಲಿಲ್ಲ. ಕಾರಣ ಈ ಮೂವರ ಪೈಕಿ ಕಡಿಮೆ ಮತಗಳನ್ನು ಪಡೆದ ಜಾತ್ಯಾತೀತ ಜನತಾ ದಳದ ಎನ್.ಪ್ರತಾಪರೆಡ್ಡಿ ಅವರನ್ನು ಅನರ್ಹಗೊಳಿಸಿ ಅವರ ಖಾತೆಯ 14187 ಮತಗಳ ಪೈಕಿ ಎರಡು ಮತ್ತು ಹೆಚ್ಚು ಪ್ರಾಶಸ್ತ್ಯದ ಮತಗಳನ್ನು ಕಾಂಗ್ರೆಸ್ ಮತ್ತು ಭಾರತೀಯ ಜನತಾ ಪಕ್ಷದ ಅಭ್ಯರ್ಥಿಗಳ ಖಾತೆಗೆ ಜಮಾ ಮಾಡಲಾಯಿತು.
ಈ ಸಂದರ್ಭದಲ್ಲಿ ಜಾತ್ಯಾತೀತ ಜನತಾ ದಳದ ಅಭ್ಯರ್ಥಿ ಎನ್. ಪ್ರತಾಪರೆಡ್ಡಿ ಅವರ ಖಾತೆಯಲ್ಲಿರುವ 14187 ಮತಗಳ ಪೈಕಿ 8172 ಮತಗಳು ಎಕ್ಝಾಸ್‌ಟ್ ಆದ ಪ್ರಯುಕ್ತ 3111 ಮತಗಳು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಹಾಗೂ 2904 ಮತಗಳು ಭಾರತೀಯ ಜನತಾ ಪಕ್ಷದ ಅಭ್ಯರ್ಥಿಗಳ ಖಾತೆಗೆ ಜಮಾ ಮಾಡಲಾಯಿತು. ಆಗ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಡಾ. ಚಂದ್ರಶೇಖರ ಬಿ. ಪಾಟೀಲ ಅವರು ಒಟ್ಟು 18768 ಮತಗಳನ್ನು ಹಾಗೂ ಭಾರತೀಯ ಜನತಾ ಪಕ್ಷದ ಕೆ.ಬಿ. ಶ್ರೀನಿವಾಸ ಅವರು ಒಟ್ಟು 18447 ಮತಗಳನ್ನು ಪಡೆದರು. ಇವರ ಪೈಕಿ ಯಾವುದೇ ಅಭ್ಯರ್ಥಿ ಕೋಟಾ ತಲುಪದಿದ್ದರೂ ಹೆಚ್ಚು ಮತ ಪಡೆದ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಡಾ.ಚಂದ್ರಶೇಖರ ಬಿ.ಪಾಟೀಲ ಅವ ರನ್ನು ಜಯಶಾಲಿಯನ್ನಾಗಿ ಘೋಷಿಸಲಾಯಿತು.
ಚುನಾವಣಾಧಿಕಾರಿ ಪಂಕಜಕುಮಾರ ಪಾಂಡೆ ಅವರು ಜಯಶಾಲಿ ಅಭ್ಯರ್ಥಿಗೆ ಪ್ರಮಾಣಪತ್ರ ವಿತರಿಸಿದರು. ಮಂಗಳವಾರ ಬೆಳಗಿನ 8 ಗಂಟೆಗೆ ಪ್ರಾರಂಭವಾದ ಮತ ಎಣಿಕೆಯು ರಾತ್ರೀ ಇಡೀ ನಡೆದು ಬುಧವಾರ ಬೆಳಗಿನ 6 ಗಂಟೆಗೆ ಪೂರ್ಣ ಗೊಂಡಿತು. ಮತ ಎಣಕೆ ಪ್ರಕ್ರಿಯೆಯಲ್ಲಿ ಚುನಾವಣಾ ವೀಕ್ಷಕ ಮಂಜುಳಾ, ಸಹಾಯಕ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಆರ್. ವೆಂಕಟೇಶಕುಮಾರ, ಸಹಾಯಕ ಆಯುಕ್ತೆ ಬಿ. ಸುಶೀಲಾ, ಮಹಾನಗರ ಪಾಲಿಕೆ ಆಯುಕ್ತ ರಘುನಂದನಮೂರ್ತಿ, ಹೆಚ್ಚುವರಿ ಪ್ರಾದೇಶಿಕ ಆಯುಕ್ತೆ ಜಹೀರಾ ನಸೀಂ, ಬೀದರ ಹೆಚ್ಚುವರಿ ಜಿಲ್ಲಾಧಿಕಾರಿ ಭೀಮಾಶಂಕರ ತೆಗ್ಗೆಳ್ಳಿ, ಕಲಬುರಗಿ ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತ ಬಿ. ರಾಚಪ್ಪ, ಶಿಷ್ಟಾಚಾರ ತಹಶೀಲ್ದಾರ ಪ್ರಕಾಶ ಚಿಂಚೋಳಿಕರ ಸೇರಿದಂತೆ ಮತ್ತಿತರ ಅಧಿಕಾರಿಗಳು ಪಾಲ್ಗೊಂಡಿದ್ದರು.
ಮತ ಎಣಿಕೆ ಪ್ರಕ್ರಿಯೆಗೆ ನೇಮಿಸಲಾಗಿರುವ ಎಲ್ಲ ಅಧಿಕಾರಿ ಮತ್ತು ಸಿಬ್ಬಂದಿಗಳು ಕಾಲಕಾಲಕ್ಕೆ ಚುನಾವಣಾಧಿಕಾರಿ ಹಾಗೂ ಸಹಾಯಕ ಚುನಾವಣಾಧಿಕಾರಿಗಳು ಮಾರ್ಗದರ್ಶನ ಮಾಡುತ್ತಾ ರಾತ್ರಿ ಇಡೀ ಉತ್ಸುಕತೆಯಿಂದ ಮತ ಎಣಿಕೆ ಕಾರ್ಯದಲ್ಲಿ ತೊಡಗಿದ್ದರು.'