5/27/2019

ದೇಶ | ವಿದೇಶ ವಿವರ ಪುಟ

ಸ್ವಚ್ಛತಾ ಐಕಾನ್ ತಾಣವಾಗಿ ಮಂತ್ರಾಲಯ ಆಯ್ಕೆ - ಸುಬುಧೇಂದ್ರ ಶ್ರೀ

Font size -16+

'ಸುದ್ದಿಮೂಲ ವಾರ್ತೆ, ಮಂತ್ರಾಲಯ, ಜೂ.13
ರಾಜ್ಯದ ಭಕ್ತಾದಿಗಳ ಆಶಯದಂತೆ ಆಂಧ್ರ ಪ್ರದೇಶದ ಕರ್ನೂಲ್ ಜಿಲ್ಲೆಯಲ್ಲಿರುವ ಶ್ರೀ ರಾಘವೇಂದ್ರ ಮಠವನ್ನು ಸ್ವಚ್ಛತಾ ಐಕಾನ್ ಸ್ಥಳವನ್ನಾಗಿ ಆಯ್ಕೆ ಮಾಡಲಾಗಿದೆ ಎಂದು ಕೇಂದ್ರ ಕುಡಿಯುವ ನೀರು ಮತ್ತು ನೈರ್ಮಲ್ಯ ಖಾತೆ ಸಚಿವ ರಮೇಶ ಜಿಗಜಿಣಗಿ ತಿಳಿಸಿದ್ದಾರೆ ಎಂದು ಮಂತ್ರಾಲಯ ಮಠದ ಪೀಠಾಧಿಪತಿ ಸುಬುಧೇಂದ್ರ ತೀರ್ಥರು ಹೇಳಿದರು.
ಅವರು ಇಂದು ಮಂತ್ರಾಲಯದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತ, ಕೇಂದ್ರ ಸರ್ಕಾರದ ಕುಡಿಯುವ ನೀರು ಮತ್ತು ನೈರ್ಮಲ್ಯ ಸಚಿವಾಲಯವು 3ನೇ ಹಂತದಲ್ಲಿ 10 ಸ್ವಚ್ಛತಾ ಐಕಾನ್ ತಾಣ ಆಯ್ಕೆ ಮಾಡಲಾಗಿದ್ದು, ಮಂತ್ರಾಲಯದ ಶ್ರೀ ರಾಘವೇಂದ್ರ ಮಠ, ಶಬರಿಮಲೈಸೇರಿದಂತೆ ವಿವಿಧ ಪ್ರಮುಖ ಸ್ಥಳಗಳನ್ನು ಆಯ್ಕೆ ಮಾಡಲಾಗಿದೆ ಎಂದರು.
ಸಾರ್ವಜನಿಕರು, ಯಾತ್ರಿಗಳು ಹೆಚ್ಚಾಗಿ ಭೇಟಿ ನೀಡುವ ಪ್ರಮುಖ ಧಾರ್ಮಿಕ ಕೇಂದ್ರವಾದ ಮಂತ್ರಾಲಯ ಸ್ವಚ್ಛತಾ ಐಕಾನ್ ಸ್ಥಳಗಳೆಂದು ಘೋಷಿಸಿ, ಆ ಸ್ಥಳದಲ್ಲಿ ಮೂಲಭೂತ ಸೌಕರ್ಯ, ಸ್ವಚ್ಛತೆ ಸೇರಿದಂತೆ ಅಗತ್ಯ ಅಭಿವೃದ್ಧಿ ಕಾಮಗಾರಿ ಕೈಗೊಳ್ಳಳು ಕೇಂದ್ರ ಸರ್ಕಾರದ ನಗರಾಭಿವೃದ್ಧಿ ಇಲಾಖೆ, ಸಂಸ್ಕೃತಿ ಮತ್ತು ಪ್ರವಾಸೋದ್ಯಮ ಇಲಾಖೆಗಳ ಸಹಯೋಗದೊಂದಿಗೆ ಕೇಂದ್ರ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯು ಈ ಯೋಜನೆ ಅನುಷ್ಟಾನಗೊಳಿಸುತ್ತವೆ ಎಂದು ಶ್ರೀಗಳು ವಿವರಿಸಿದರು.
ಸ್ಥಳೀಯ ಜಿಲ್ಲಾಡಳಿತ, ಸಾರ್ವಜನಿಕ ಉದ್ದಿಮೆ ಹಾಗೂ ಖಾಸಗಿ ಸಂಸ್ಥೆಗಳ ನೆರವಿನಿಂದ ಈ ಪ್ರದೇಶ ಮಾದರಿಯಾಗಿ ರೂಪಿಸಲಾಗುತ್ತದೆ. ಖಾಸಗಿ ಸಂಸ್ಥೆಗಳು ಸಿಎಸ್‌ಆರ್(ಉದ್ದಿಮೆಗಳ ಸಾರ್ವಜನಿಕ ಜವಾಬ್ದಾರಿ ನಿಧಿ) ಯೋಜನೆಯಡಿ ಸ್ವಚ್ಛತಾ ಐಕಾನ್ ಸ್ಥಳಗಳಿಗೆ ದೇಣಿಗೆ ನೀಡುತ್ತವೆ. ಭಕ್ತರ ಕೋರಿಕೆಯಂತೆ ಶ್ರೀ ರಾಘವೇಂದ್ರ ಸ್ವಾಮಿಗಳ ಮಠವನ್ನು 3ನೇ ಹಂತದ ಸ್ವಚ್ಛತಾ ಐಕಾನ್ ತಾಣವನ್ನಾಗಿ ಆಯ್ಕೆ ಮಾಡಲು ಇಲಾಖೆಗೆ ಸೂಚಿಸಿದೆ ಎಂದರು. ತ್ವರಿತವಾಗಿ ಈ ಯೋಜನೆ ಅನುಷ್ಠಾನಗೊಳಿಸುವಂತೆ ಸಹ ಸಚಿವ ರಮೇಶ ಜಿಗಜಿಣಗಿ ಸೂಚಿಸಿದ್ದಾರೆ ಎಂದು ಹೇಳಿದರು.
ನರೇಂದ್ರ ಮೋದಿ ಆಶಯದಂತೆ 2019ರೊಳಗೆ ದೇಶವನ್ನು ಬಯಲು ಶೌಚ ಮುಕ್ತ ಪ್ರದೇಶವನ್ನಾಗಿ ಘೋಷಣೆ ಮಾಡಿ ಮಹಾತ್ಮಾಗಾಂಧಿ ಅವರ ಕನಸು ನನಸು ಮಾಡಲು ಸಚಿವರ ಕೋರಿಕೆಯಂತೆ ಎಲ್ಲರೂ ಸಹಕರಿಸುವಂತೆ ಶ್ರೀಗಳು ಕೋರಿದರು.'