1/19/2019

ದೇಶ | ವಿದೇಶ ವಿವರ ಪುಟ

ಭಿನ್ನಮತ ಮರೆತು ಒಗ್ಗಟ್ಟು ಪ್ರದರ್ಶನ ಟಿಕೆಟ್ ಆಕಾಂಕ್ಷಿಗಳಲ್ಲಿ ಗದಿಗೆದರಿದ ಉತ್ಸಾಹ

Font size -16+

'ಸುದ್ದಿಮೂಲ ವಾರ್ತೆ
ರಾಯಚೂರು, ಜ.13
ರಾಯಚೂರು ಜಿಲ್ಲಾ ಕಾಂಗ್ರೆಸ್‌ನಲ್ಲಿ ಏನೇ ಭಿನ್ನಮತವಿದ್ದರೂ ಶುಕ್ರವಾರ ಜಿಲ್ಲೆಯ ಎರಡು ಕಡೆ ನಡೆದ ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶದಲ್ಲಿ ಆಂತರಿಕ ಬಿಕ್ಕಟ್ಟನ್ನು ಹೊರಹಾಕದೇ ಭಿನ್ನತೆಯಲ್ಲಿ ಏಕತೆ ಮೆರೆದರು.
ಎರಡು ಗುಂಪುಗಳ ಮಧ್ಯೆ ಇರುವ ಭಿನ್ನಾಭಿಪ್ರಾಯ ಬದಿಗೊತ್ತಿ ದೇವದುರ್ಗ ಮತ್ತು ರಾಯಚೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಜಿಲ್ಲೆಯ ಎಲ್ಲಾ ಕಾಂಗ್ರೆಸ್ ಪಕ್ಷದ ಶಾಸಕರು ಮತ್ತು ಮುಖಂಡರು ಭಾಗವಹಿಸುವ ಮೂಲಕ ಪ್ರದೆೇಶ ಕಾಂಗ್ರೆಸ್ ಅಧ್ಯಕ್ಷರ ಮುಂದೆ ಯಾವುದೇ ಭಿನ್ನಮತ ಹೊರಹಾಕಿರುವುದು ಕಂಡು ಬರಲಿಲ್ಲ.
ಜಿಲ್ಲೆಯಲ್ಲಿ ಉಭಯ ಬಣಗಳು ಒಗ್ಗಟ್ಟು ಪ್ರದರ್ಶನ ಮಾಡಿದರೆ ಎಲ್ಲಾ ವಿಧಾನಸಭಾ ಕ್ಷೇತ್ರಗಳು ಗೆಲ್ಲಬಹುದು ಎಂಬ ವರಿಷ್ಠರ ಸೂಚನೆ ಪಾಲಿಸದೇ ಮುಖ್ಯಮಂತ್ರಿ ಸಮಕ್ಷಮದಲ್ಲಿ ಹಲವು ಬಾರಿ ಭಿನ್ನಮತ ಹೊರಹಾಕಿದ್ದ ಎರಡು ಗುಂಪುಗಳು ನಿನ್ನೆ ಮಾತ್ರ ದೇವದುರ್ಗ ಮತ್ತು ರಾಯಚೂರು ಕಾರ್ಯಕ್ರಮದಲ್ಲಿ ವರಿಷ್ಟರ ಮುಂದೆ ಒಗ್ಗಟ್ಟು ಪ್ರದರ್ಶಿಸಿದರು.
ಏತನ್ಮಧ್ಯೆ ದೇವದುರ್ಗದಲ್ಲಿ ಮಾತನಾಡಿದ ಸಂಸದ ಹಾಗೂ ಎಐಸಿಸಿ ಕಾರ್ಯಕಾರಿ ಸದಸ್ಯ ಕೆ.ಎಚ್.ಮುನಿಯಪ್ಪ ನಿಮ್ಮ ಭಿನ್ನಮತದಿಂದ ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷ ಸೋತರೆ ನಿಮ್ಮನ್ನೆ ಹೊಣೆಗಾರರನ್ನಾಗಿ ಮಾಡಲಾಗುವುದು ಎಂದು ಶಾಸಕ ಹಂಪನಗೌಡ ಬಾದರ್ಲಿ, ಎನ್‌ಎಸ್ ಬೋಸರಾಜು ,ಸಂಸದ ಬಿ.ವಿ.ನಾಯಕ ಮತ್ತು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎ.ವಸಂತಕುಮಾರ್ ಅವರಿಗೆ ಬಹಿರಂಗವಾಗಿ ಎಚ್ಚರಿಕೆ ನೀಡಿದ್ದರು. ಹಂಪನಗೌಡ ಮತ್ತು ಬೋಸರಾಜು ಬಣಗಳ ನಡುವೆ ಇರುವ ಭಿನ್ನಮತ ಕಾರ್ಯಕರ್ತರ ಸಮಾವೇಶದಲ್ಲಿ ಉಲ್ಬಣಗೊಳ್ಳುವ ನಿರೀಕ್ಷೆ ಹುಸಿಯಾಗಿದೆ.ಅಲ್ಲದೇ ಡಾ.ಪರಮೇಶ್ವರರನ್ನು ಸ್ವಾಗತಿಸಲು ತಾ ಮೇಲು,ನಾ ಮೇಲು ಎಂಬಂತೆ ಕಲ್ಮಲಾದಲ್ಲಿ ಕೆ.ಶರಣಪ್ಪ ನೇತೃತ್ವದ ಕಾಂಗ್ರೆಸ್ ಕಾರ್ಯಕರ್ತರ ದಂಡು 7 ಮೈಲ್ ಬಳಿ, ಕೆಪಿಸಿಸಿ ಕಾರ್ಯದರ್ಶಿ ಯಂಕಣ್ಣ ಯಾದವ್ ಮತ್ತು ವಸಂತಕುಮಾರ ಬೆಂಬಲಿಗರು ಕೃಷಿ ಮಹಾವಿದ್ಯಾಲಯದ ಬಳಿ ಹಾಗೂ ರವಿ ಬೋಸರಾಜು ನೇತೃತ್ವದಲ್ಲಿ ಯುವ ಕಾಂಗ್ರೆಸ್ ಪಡೆ ಬೃಹತ್ ಬೈಕ್ ರ‌್ಯಾಲಿ ನಡೆಸಿದರೆ ನಂತರ ರವಿ ಪಾಟೀಲ್ ಬೆಂಬಲಿಗರೂ ಸಹ ಪರಮೇಶ್ವರರಿಗೆ ಮಾಲಾರ್ಪಣೆ ಮಾಡಿ ಸ್ವಾಗತ ಮಾಡಿದರು.
ಪ್ರದೇಶ ಕಾಂಗ್ರೆಸ್ ಅಧ್ಯಕ್ಷರ ಮುಂದೆ ತಮ್ಮೆಲ್ಲ ಭಿನ್ನಮತ ಬದಿಗೊತ್ತಿ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಟಿಕೆಟ್ ಪಡೆಯುವ ಉದ್ದೇಶವೂ ಈ ಒಗ್ಗಟ್ಟಿನಲ್ಲಿ ಅಡಗಿದೆ ಎಂದು ಹೇಳಲಾಗುತ್ತಿದೆ.ಆದರೆ, ತಮ್ಮ ಭಾವಚಿತ್ರ ಉಳ್ಳ ನಾಮಫಲಕ ಹಿಡಿದುಕೊಂಡು ಸಮಾವೇಶಕ್ಕೆ ಆಗಮಿಸಿದವರಿಗೆ ಡಾ.ಜಿ.ಪರಮೇಶ್ವರ ಈ ರೀತಿ ನಾಮಫಲಕಗಳ ಪ್ರದರ್ಶನ ಮಾಡಬೇಡಿ ನಾನು ಇಲ್ಲಿ ಟಿಕೆಟ್ ನೀಡಲು ಬಂದಿಲ್ಲ ಅದು ಆಮೇಲೆ ನಿರ್ಧಾರವಾಗಲಿದೆ ಎಂದು ಭಾಷಣದಲ್ಲಿ ನೇರವಾಗಿ ಹೇಳಿಬಿಟ್ಟರು.
ದೇವದುರ್ಗ ಕ್ಷೇತ್ರದಿಂದ ರಾಜಶೇಖರ ನಾಯಕ,ರಾಯಚೂರು ಕ್ಷೇತ್ರದಿಂದ ಸೈಯದ್ ಯಾಸೀನ್,ರಾಯಚೂರು ಗ್ರಾಮೀಣ ಕ್ಷೇತ್ರದಿಂದ ರಾಜಾ ರಾಯಪ್ಪ ನಾಯಕ ಕಳೆದ ಬಾರಿ ಪರಾಭವ ಗೊಂಡಿದ್ದು , ಪುನಃ ಅವರು ಸ್ಪರ್ಧಿಸಲು ಆಕಾಂಕ್ಷಿಗಳಾಗಿದ್ದಾರೆ.ಆದರೆ,ಇದರ ಜೊತೆಗೆ ದೇವದುರ್ಗ ಕ್ಷೇತ್ರದಿಂದ ರಾಜಶೇಖರ ನಾಯಕ ಜೊತೆಗೆ ಅವರ ಸಹೋದರ ಸಂಸದ ಬಿ.ವಿ.ನಾಯಕ ಅವರು ಸ್ಪರ್ಧಿಸಬೇಕೆಂದು ಕ್ಷೇತ್ರದ ಕಾಂಗ್ರೆಸ್ ನಾಯಕರ ಒತ್ತಾಸೆಯಾಗಿದೆ.
ರಾಯಚೂರು ಕ್ಷೇತ್ರದಿಂದ ರವಿ ಬೋಸರಾಜು ಸ್ಪರ್ಧಿಸಲಿದ್ದಾರೆ ಎಂಬ ವದಂತಿ ದಟ್ಟವಾಗಿದ್ದು ಇದಕ್ಕೆ ಕಳೆದ ಕೆಲ ತಿಂಗಳಿನಿಂದ ಅವರು ಪಕ್ಷದ ಕಾರ್ಯಕ್ರಮಗಳಲ್ಲಿ ಸಕ್ರಿಯರಾಗಿರುವುದೇ ಸಾಕ್ಷಿ.
ಈ ಮಧ್ಯೆ ಮುಸ್ಲಿಮೇತರರಿಗೆ ಟಿಕೇಟ್ ನೀಡುವುದಾದರೆ ನಾನು ಸಹ ಟಿಕೆಟ್ ಆಕಾಂಕ್ಷಿ ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ವಸಂತಕುಮಾರ ಸಹ ತಮ್ಮ ಉಮೇದುವಾರಿಕೆ ಹರಿಬಿಟ್ಟಿದ್ದಾರೆ.
ಜಿಲ್ಲ್ಲೆಯ 7 ವಿಧಾನಸಭಾ ಕ್ಷೇತ್ರ ಮತ್ತು ಲೋಕಸಭೆಯ 8 ಕ್ಷೇತ್ರಗಳಲ್ಲಿ ಅರ್ಧಕ್ಕಿಂತ ಹೆಚ್ಚು ಜನಸಂಖ್ಯೆಯಿರುವ ಹಿಂದುಳಿದ ವರ್ಗದವರಿಗೆ ಯಾವುದೇ ಕ್ಷೇತ್ರದಲ್ಲಿ ಸ್ಪರ್ಧಿಸಲು ಅವಕಾಶವಿಲ್ಲವಾದ್ದರಿಂದ ರಾಯಚೂರು ನಗರದಲ್ಲಿ ಹಿಂದುಳಿದ ವರ್ಗದವರು ಏಕೆ ಟಿಕೆಟ್ ಕೇಳಬಾರದು ಎಂದು ಕೆಪಿಸಿಸಿ ಕಾರ್ಯದರ್ಶಿ ಯಂಕಣ್ಣ ಯಾದವ್, ಹಿರಿಯ ಕಾಂಗ್ರೆಸ್ ಮುಖಂಡ ಕೆ.ಶಾಂತಪ್ಪ ತಾವು ಆಕಾಂಕ್ಷಿ ಏಕೆ ಆಗಬಾರದು ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ರಾಯಚೂರು ಕ್ಷೇತ್ರದಲ್ಲಿ ಸರಾಸರಿ 80 ಸಾವಿರ ಜನಸಂಖ್ಯೆ ಹಿಂದುಳಿದ ವರ್ಗದವರಿದ್ದು ಇದೂ ಎಲ್ಲರಿಗಿಂತ ನಾವೇ ಹೆಚ್ಚು ಜನಸಂಖ್ಯೆ ಹೊಂದಿದ ಹಿಂದುಳಿದ ವರಿಗೆ ಟಿಕೆಟ್ ನೀಡಬೇಕು ಎಂಬುದು ಅವರ ಕೋರಿಕೆಯಾಗಿದೆ.
ಹೀಗಾಗಿ ಶುಕ್ರವಾರ ಜಿಲ್ಲೆಯಲ್ಲಿ ನಡೆದ ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶ ಒಗ್ಗಟ್ಟಿನ ಮಂತ್ರದ ಜೊತೆಗೆ ಮುಂಬರುವ ವಿಧಾನಸಭಾ ಟಿಕೆಟ್‌ಗಾಗಿ ತಮ್ಮ ಉಮೇದುವಾರಿಕೆಯನ್ನು ಪರೋಕ್ಷವಾಗಿ ಹೊರಹಾಕಿದ್ದು ಇದ್ನನು ಕಾಂಗ್ರೆಸ್ ವರಿಷ್ಠರು ಯಾವ ರೀತಿ ಸ್ವೀಕರಿಸುವರು ಎಂದು ಕಾದು ನೋಡಬೇಕು.'