1/19/2019

ದೇಶ | ವಿದೇಶ ವಿವರ ಪುಟ

ಧರ್ಮ ವಿವಾದ: ವಿಶ್ವ ಲಿಂಗಾಯತ ಮಹಾಸಭಾ ಅಸ್ತಿತ್ವಕ್ಕೆ ಸಿದ್ಧತೆ- ಜಾಮದಾರ

Font size -16+

'ಸುದ್ದಿಮೂಲ ವಾರ್ತೆ, ಬೆಂಗಳೂರು, ಜ.13
ವೀರಶೈವ-ಲಿಂಗಾಯತ ಕದನ ಇದೀಗ ನಿರ್ಣಾಯಕ ಹಂತಕ್ಕೆ ತಲುಪಿದ್ದು ಜನವರಿ 23 ರಂದು ವಿಶ್ವ ಲಿಂಗಾಯತ ಮಹಾಸಭಾ ವಿದ್ಯುಕ್ತವಾಗಿ ಆರಂಭವಾಗಲಿದೆ ಎಂದು ನಿವೃತ್ತ ಐಎಎಸ್ ಅಧಿಕಾರಿ ಎಸ್.ಎಂ. ಜಾಮದಾರ ತಿಳಿಸಿದರು.
ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು ಲಿಂಗಾಯತ ಪ್ರತ್ಯೇಕ ಧರ್ಮ ಅಂದು ಪ್ರಗತಿಪರರು, ಹಲವು ಮಠಾಧೀಶರು, ಚಿಂತಕರ ಜತೆ ಬೆಂಗಳೂರಿನ ಜ್ಞಾನಜ್ಯೋತಿ ಆಡಿಟೋರಿಯಂನಲ್ಲಿ ಮಹತ್ವದ ಸಭೆ ನಡೆಯಲಿದ್ದು ಅಂದಿನಿಂದಲೇ ವಿಶ್ವ ಲಿಂಗಾಯತ ಮಹಾಸಭಾ ಆರಂಭವಾಗಲಿದೆ ಎಂದರು.
ಬಸವಣ್ಣನೇ ಲಿಂಗಾಯತ ಧರ್ಮದ ಮೂಲ ಪುರುಷ.ಶರಣರು ರಚಿಸಿರುವ ವಚನಗಳೇ ನಮ್ಮ ಸಿದ್ದಾಂತ.ಈಗ ಅನುಸರಿಸಲಾಗುತ್ತಿರುವ ಸಿದ್ಧಾಂತ ಶಿಖಾಮಣಿಯಲ್ಲ ಎಂಬುದು ಸೇರಿದಂತೆ ಮೂರು ಸೂತ್ರ ವೀರಶೈವ ಮಹಾಸಭಾ ಮುಂದಿಟ್ಟಿದ್ದೆವು. ಆದರೆ ಅವರು ಒಪ್ಪಲಿಲ್ಲ. ಹೀಗಾಗಿ ಅವರಿಂದ ದೂರವಾಗುತ್ತಿರುವುದು ನಮಗೆ ನೋವು ತಂದಿದೆ.ಆದರೂ ಇದು ಅನಿವಾರ್ಯ. ವಿಶ್ವ ಲಿಂಗಾಯತ ಮಹಾಸಭಾ ತಲೆ ಎತ್ತಲಿದೆ ಎಂದು ಹೇಳಿದರು.
ಈಗಾಗಲೇ ವಿಶ್ವ ಲಿಂಗಾಯತ ಮಹಾಸಭಾದ ಬೈಲಾ ಸಿದ್ದವಾಗುತ್ತಿದೆ. ಬಸವ ಸಹಿತ ಲಾಂಭನವೂ ಇರಲಿದೆ ಎಂದ ಅವರು, ವಿಶ್ವ ಲಿಂಗಾಯತ ಮಹಾಸಭಾದಲ್ಲಿ ವೀರಶೈವರು ಇರಲಿದ್ದಾರೆಯೇ? ಎಂಬ ಪ್ರಶ್ನೆಗೆ ಉತ್ತರಿಸಿ,ಹಲವರು ನಮ್ಮ ಜತೆ ಸಂಪರ್ಕದಲ್ಲಿದ್ದಾರೆ. ನಿಶ್ಚಿತವಾಗಿಯೂ ಬರುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
1904 ರಲ್ಲಿ ಸ್ಥಾಪನೆಯಾದ ವೀರಶೈವ ಮಹಾಸಭಾ ಈ ಸಮುದಾಯಕ್ಕೆ ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ಸ್ಥಾನಮಾನಗಳ ಕೊಡಿಸಲು ಹೋರಾಡುವ ಆಶಯ ಹೊಂದಿತ್ತು.ಆದರೆ ಅದು ಈಡೇರಲಿಲ್ಲ ಎಂದು ವಿಷಾದಿಸಿದರು.
ನೂರಾ ಹದಿಮೂರು ವರ್ಷಗಳ ಇತಿಹಾಸವಿರುವ ವೀರಶೈವ ಮಹಾಸಭಾ ಏನು ಮಾಡಿದೆ ಎಂಬುದು ಪ್ರತಿಯೊಬ್ಬರಿಗೂ ಗೊತ್ತು ಎಂದು ಅವರು ಮಾರ್ಮಿಕವಾಗಿ ವಿವರ ನೀಡಿದರು.
ವಿಶ್ವ ಲಿಂಗಾಯತ ಮಹಾಸಭಾ ಆರಂಭವಾದ ನಂತರ ಈಗಿರುವ ಬಸವ ಸೇವಾದಳ, ಯುವ ವೇದಿಕೆಯಾಗಿ ಪರಿವರ್ತನೆಯಾಗಲಿದೆ. ಹಾಗೆಯೇ ಮಹಿಳಾ ಘಟಕಗಳಿಂದ ಹಿಡಿದು ವಿವಿಧ ಘಟಕಗಳು ಪ್ರತ್ಯೇಕ ಹೆಸರಿನಲ್ಲಿ ಅಸ್ತಿತ್ವಕ್ಕೆ ಬರಲಿವೆ ಎಂದು ವಿವರಿಸಿದರು.
ಕೇವಲ ಕರ್ನಾಟಕದಲ್ಲಿ ಮಾತ್ರವಲ್ಲ, ಇಡೀ ದೇಶ ಹಾಗೂ ವಿಶ್ವದ ವಿವಿಧ ಭಾಗಗಳಲ್ಲಿ ಲಿಂಗಾಯತರಿದ್ದಾರೆ. ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸಾಧನೆ ಮಾಡಿದವರಿದ್ದಾರೆ. ಅವರಿಗಾಗಿ ಪ್ರತ್ಯೇಕ ವೇದಿಕೆ ಎಂಬುದಿರಲಿಲ್ಲ. ಈಗ ಅಂತಹ ವೇದಿಕೆ ಸಿದ್ಧವಾಗಲಿದೆ ಎಂದು ಹೇಳಿದರು.
ಲಿಂಗಾಯತ ಪ್ರತ್ಯೇಕ ಧರ್ಮವೇ? ಅದಕ್ಕೆ ಅಲ್ಪಸಂಖ್ಯಾತ ಸ್ಥಾನ ಮಾನ ನೀಡಡಬೇಕೇ ಎಂಬ ಸಂಬಂಧ ಅಲ್ಪಸಂಖ್ಯಾತರ ಆಯೋಗ ರಚಿಸಿದ ನ್ಯಾಯಮೂರ್ತಿ ನಾಗಮೋಹನದಾಸ್ ನೇತೃತ್ವದ ಸಮಿತಿ ತನ್ನ ವರದಿ ನೀಡಲು ಹೆಚ್ಚುವರಿಯಾಗಿ ಆರು ತಿಂಗಳ ಕಾಲಾವಕಾಶ ಕೇಳಿದೆ.
ಅಷ್ಟರೊಳಗಾಗಿ ವಿಶ್ವ ಲಿಂಗಾಯತ ಮಹಾಸಭಾ ರಚನೆ ಅಗತ್ಯವಿತ್ತೇ? ಎಂದು ಕೇಳಲಾದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಅದರ ಪಾಡಿಗೆ ಅದು ಅಧ್ಯಯನ ಮಾಡಿ ವರದಿ ನೀಡಲಿ.ನಮ್ಮ ಪಾಡಿಗೆ ನಾವು ಮುಂದುವರಿಯುತ್ತೇವೆ ಎಂದರು.
ಸಮಿತಿ ವರದಿ ನೀಡಲು ಆರು ತಿಂಗಳಾದರೂ ತೆಗೆದುಕೊಳ್ಳಲಿ. ಆರು ವರ್ಷವಾದರೂ ತೆಗೆದುಕೊಳ್ಳಲಿ. ಆದರೆ ಲಿಂಗಾಯತ ಪ್ರತ್ಯೇಕ ಧರ್ಮ ಎನ್ನಲು ಪೂರಕವಾಗಿ ಅಗತ್ಯದ ದಾಖಲೆಗಳನ್ನು ಈಗಾಗಲೇ ಸಲ್ಲಿಸಿದ್ದೇವೆ. ಇನ್ನೂ ಹೆಚ್ಚುವರಿಯಾಗಿ ಯಾವ ದಾಖಲೆ ನೀಡುವ ಅಗತ್ಯವಿಲ್ಲ ಎಂದರು.
ಸುಪ್ರೀಂಕೋರ್ಟ್ ಮುಂದೆಯೇ ವೀರಶೈವ, ಲಿಂಗಾಯತ ಬೇರೆ ಬೇರೆ ಎಂದು ಹೇಳಲಾಗಿದೆ. ಹಿಂದೂ ಧರ್ಮಕ್ಕಿಂತ ಪ್ರತ್ಯೇಕವಾದುದು ಎಂದು ಹೇಳಲಾಗಿದೆ ಅಂತ ಅವರು ವಿವರಿಸಿದರು.
'