1/19/2019

ದೇಶ | ವಿದೇಶ ವಿವರ ಪುಟ

ಮೂರಾರ್ಜಿ ವಸತಿ ಶಾಲೆ ಆಹಾರ ಧಾನ್ಯ ಅಕ್ರಮ ಸಾಗಣೆ : ಪ್ರಕರಣ ದಾಖಲು

Font size -16+

'ಸುದ್ದಿಮೂಲ ವಾರ್ತೆ, ಲಿಂಗಸೂಗೂರು, ಜ.13
ತಾಲೂಕಿನ ಅಮರೇಶ್ವರ ಸುಕ್ಷೇತ್ರದ ಬಳಿಯ ಮುರಾರ್ಜಿ ದೇಸಾಯಿ ವಸತಿಶಾಲೆ (ನಿಲಯ)ದ ವಿದ್ಯಾರ್ಥಿಗಳ ಆಹಾರ ಧಾನ್ಯ ಕಳ್ಳ ಸಾಗಣೆ ಮಾಡುತ್ತಿದ್ದ ವೇಳೆ ವಾಹನ ಸಮೇತ ಆರೋಪಿಯನ್ನು ಸಾರ್ವಜನಿಕರು ದೇವರಭೂಪುರ ಬಳಿ ತಡೆದು ಪೊಲೀಸರಿಗೆ ಒಪ್ಪಿಸಿದ ಘಟನೆ ಶನಿವಾರ ನಡೆದಿದೆ.
ಮುರಾರ್ಜಿ ದೇಸಾಯಿ ವಸತಿ ಶಾಲೆ (ನಿಲಯ)ದ ದಾಸ್ತಾನು ಕೊಠಡಿಯಿಂದ ಎರಡುವರೆ ಕ್ವಿಂ. ಬಿಳಿಜೋಳ, ಒಂದು ಕ್ವಿಂ. ಕಡಲೆ ಬೇಳೆ, ಒಂದು ಚೀಲ ಉಪ್ಪಿಟ್ಟುರವೆ, 25 ಕೆಜಿ ಹಲಸಂದಿ, ಏಳು ಪಾಕೀಟು ಒಳ್ಳೆಣ್ಣೆ, 5 ಕೆಜಿ ಚಹಾ ಪುಡಿ, 40 ಕೆಜಿ ಇಡ್ಲಿ ರವೆ ಸೇರಿದಂತೆ ಒಟ್ಟು 17000 ರೂ. ಬೆಲೆ ಬಾಳುವ ಆಹಾರ ಧಾನ್ಯ ಟಾಟಾ ಎಸ್ ವಾಹನದಲ್ಲಿ ಸಾಗಿಸುತ್ತಿದ್ದಾಗ ದೇವರಭೂಪುರ ಗ್ರಾಮದ ಬಳಿ ಸಾರ್ವಜನಿಕರು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.
ಈ ಕುರಿತು ಪ್ರಭಾರಿ ಪ್ರಾಂಶುಪಾಲ ಚನ್ನಬಸಪ್ಪ ಹಿರೇಗೌಡರ ಠಾಣೆಗೆ ಭೇಟಿ ನೀಡಿ ಪರಿಶೀಲಿಸಿದಾಗ ಆಹಾರ ಧಾನ್ಯ ವಸತಿ ನಿಲಯಕ್ಕೆ ಸಂಬಂಧಿಸಿದವು ಎಂದು ಗುರುತಿಸಿದ್ದರಿಂದ ಆರೋಪಿ ಪ್ರಭಾರಿ ವಾರ್ಡನ್ ಭೀಮಪ್ಪ ಭಜಂತ್ರಿ ವಿರುದ್ಧ ಪ್ರಾಚಾರ್ಯರು ನೀಡಿದ ದೂರು ಆಧರಿಸಿ ಲಿಂಗಸುಗೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈ ಕುರಿತು ಪೊಲೀಸರು ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ.'