1/19/2019

ದೇಶ | ವಿದೇಶ ವಿವರ ಪುಟ

ಸರಕಾರಿ ಕಚೇರಿ ಗೋಡೆಗಳಿಗೆ ಪಾನ್ ಗುಟ್ಕಾ ಬಣ್ಣದ ಚಿತ್ತಾರ !ಎಲ್ಲಿದೆ ಸ್ವಚ್ಛತೆ ?

Font size -16+

'ಸುದ್ದಿಮೂಲ ವಾರ್ತೆ, ರಾಯಚೂರು, ಜ.13
ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಅಧಿಕಾರ ವಹಿಸಿಕೊಂಡ ಕೂಡಲೇ ದೇಶವನ್ನು ಸ್ವಚ್ಛವಾಗಿಡಲು ಸಲಹೆ ನೀಡುವ ಮೂಲಕ ಸ್ವಚ್ಛ ಭಾರತ ಮಿಷನ್ ಯೋಜನೆ ಘೋಷಿಸಿದ್ದಾರೆ ಮತ್ತು ಈ ಯೋಜನೆಗೆ ಕೋಟ್ಯಾಂತರ ರೂ.ಜಾಹಿರಾತಿನ ಮೂಲಕ ವ್ಯಯಿಸುತ್ತಿರು ವುದು ಸಾಮಾನ್ಯರಿಗೂ ತಿಳಿದ ವಿಚಾರ.ಆದರೆ ಯೋಜನೆಯ ಅನುಷ್ಠಾನ ಸಂಬಂಧ ಸರಕಾರಿ ಅಧಿಕಾರಿ,ಸಿಬ್ಬಂದಿಗಳೇ ಸ್ವಚ್ಛತೆ ನಿರ್ಲಕ್ಷಿಸಿವೆ ಎಂಬುದಕ್ಕೆ ನಗರದ ಸರಕಾರಿ ಕಚೇರಿಗಳೇ ಸಾಕ್ಷಿಯಾಗಿ ವೆ.ನಗರದ ಸಿಡಿಪಿಓ,ನಗರಸಭೆ,ತಹಶೀಲ್ದಾರರ ಕಚೇರಿ ಸೇರಿದಂತೆ ಬಹುತೇಕ ಎಲ್ಲಾ ಸರಕಾರಿ ಕಟ್ಟಡ,ಕೊಠಡಿಗಳಲ್ಲಿ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಪಾನ್,ಗುಟಕಾ ತಿಂದು ಉಗುಳುವ ಮೂಲಕ ಗೋಡೆಗಳಿಗೆ ಕೆಂಪು ಬಣ್ಣ ಬಳಿದಿದ್ದಾರೆ.
ಒಂದೆಡೆ ಸರಕಾರದ ಕೆಲಸ ದೇವರ ಕೆಲಸವೆಂದು ವಿಧಾನಸೌಧದ ಭವನ ಸೇರಿದಂತೆ ಸರಕಾರದ ವಿವಿಧ ಇಲಾಖೆಗಳ ಕಚೇರಿಗಳಲ್ಲಿ ಬರೆಯುವ ಮೂಲಕ ಸರಕಾರಿ ಕೆಲಸ ಪವಿತ್ರ ಕೆಲಸವೆಂದು ಹೇಳುತ್ತಿದ್ದರೆ, ಮತ್ತೊಂದೆಡೆ ವಿವಿಧ ಇಲಾಖೆಯ ಕಚೇರಿಗಳಲ್ಲಿ ಸಿಬ್ಬಂದಿಗಳು ಕಂಡ-ಕಂಡಲ್ಲಿ ಉಗುಳಿದ್ದು ಅಸಹ್ಯಕರ ವಾತಾವರಣ ನಿರ್ಮಾಣವಾಗಿದೆ.
ನಗರವನ್ನು ಸ್ವಚ್ಛ ಮತ್ತು ಹಸಿರು ನಗರವನ್ನಾಗಿ ನಿರ್ಮಾಣ ಮಾಡುತ್ತೇವೆಂದು ಬಡಾಯಿ ಕೊಚ್ಚಿಕೊಳ್ಳುವ ನಗರಸಭೆ ಆಡಳಿತ ಮಂಡಳಿ ತಮ್ಮ ಕಟ್ಟಡದ ಗೋಡೆಗಳಿಗೆ ಗುಟಕಾ, ಪಾನ್ ಪರಾಗ್ ತಿಂದು ಕೆಂಪುಬಣ್ಣ ಬಳಿದಿರುವುದನ್ನು ಗಮನಿಸದಿರುವುದು ವಿಷಾದದ ಸಂಗತಿ. ಒಟ್ಟು 35 ವಾರ್ಡ್ ಗಳನ್ನೊಳಗೊಂಡ ನಗರಸಭೆ ಬೃಹದಾಕಾರದ ಕಟ್ಟಡ ಹೊಂದಿದ್ದರೂ ಸೂಕ್ತ ಶೌಚಾಲಯ,ಮೂತ್ರಾಲಯ ಹೊಂದಿಲ್ಲದ ಕಾರಣ ವಿವಿಧ ಕಾರ್ಯಗಳ ನಿಮಿತ್ಯ ಕಚೇರಿಗೆ ಬರುವ ಸಾರ್ವಜನಿಕರು ಕಚೇರಿಯ ಹಿಂದಿನ ಜಾಗದಲ್ಲಿಯೇ ಮೂತ್ರ ವಿಸರ್ಜನೆ ಮಾಡುವ ದೃಶ್ಯ ಸಾಮಾನ್ಯವಾಗಿದೆ.
ಪ್ರಚಾರಕ್ಕೆ ಸೀಮಿತವಾದ ಸ್ವಚ್ಛ ಭಾರತ ಮಿಷನ್: ನಗರದ ಸರಕಾರಿ ಕಚೇರಿಗಳಲ್ಲಿ ಸಿಬ್ಬಂದಿ ಜೊತೆಗೆ ಸಾರ್ವಜನಿಕರು ಪಾನ್ ಬೀಡಾ, ಗುಟಕಾ ಹಾಕಿಕೊಂಡು ಎಲ್ಲೆಂದರಲ್ಲಿ ಉಗುಳುವುದು ಒಂದೆಡೆಯಾದರೆ,ಕಚೇರಿಯ ಒಳಭಾಗದಲ್ಲಿನ ಜಾಗಗಳಲ್ಲಿ ಚಹದ ಕಪ್,ಕಾಗದ,ಕಸ ಹಾಕುವ ಮೂಲಕ ಪರಿಸರ ಮಾಲಿನಕ್ಕೆ ಕಾರಣರಾಗಿದ್ದಾರೆ. ಸ್ವಚ್ಛ ಭಾರತ ಯೋಜನೆ ಹೆಸರಿನಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಆಗೊಮ್ಮೆ- ಈಗೊಮ್ಮೆ ಪೊರಕೆ ಹಿಡಿದು ಫೋಸ್ ನೀಡುವ ಅಧಿಕಾರಿ ,ಸಿಬ್ಬಂದಿಗಳು ತಮ್ಮ ಕಚೇರಿ ವ್ಯಾಪ್ತಿಯಲ್ಲಿಯೇ ಸ್ವಚ್ಛತೆ ಕಾಪಾಡುವಲ್ಲಿ ನಿರ್ಲಕ್ಷ್ಯ ವಹಿಸಿರುವುದಕ್ಕೆ ಏನನ್ನಬೇಕು ?
ಕಚೇರಿಯಲ್ಲಿ ಉಗುಳುವ ಮೂಲಕ ಅಸಹ್ಯವಾಗಿ ವರ್ತಿಸುತ್ತಿರುವ ಸಿಬ್ಬಂದಿ ಬಗ್ಗೆ ಸಿಡಿಪಿಒ ವೀರನಗೌಡ ಅವರನ್ನು ಪ್ರಶ್ನಿಸಿದರೆ, ನಮ್ಮ ಕಚೇರಿಯಲ್ಲಿ ಯಾರೂ ಗುಟ್ಕಾ,ಪಾನ್ ಬೀಡಾ ಹಾಕಿಕೊಳ್ಳುವುದಿಲ್ಲ, ನಮ್ಮ ಕಚೇರಿ ಮೇಲ್ಮಹಡಿಯಲ್ಲಿ ವ್ಯಾಯಾಮ ಶಾಲೆಯಿದ್ದು ಇಲ್ಲಿಗೆ ಬರುವ ಯುವಕರು ಗೋಡೆಗಳಿಗೆ ಉಗುಳುತ್ತಾರೆ, ಈ ಬಗ್ಗೆ ಹಲವಾರು ಬಾರಿ ಹೇಳಿದರೂ ಕೇಳು ತ್ತಿಲ್ಲ. ಆದರೆ ನಮ್ಮ ಕಚೇರಿ ಸಿಬ್ಬಂದಿ ಇಂತಹ ದುವರ್ತನೆ ಮಾಡಿದಲ್ಲಿ ಕ್ರಮ ಕೈಗೊಳ್ಳುವುದಾಗಿ ಹಾಗೂ ಕಚೇರಿ ಸ್ವಚ್ಛತೆ ಕಡೆ ಅಗತ್ಯ ಗಮನ ಹರಿಸುವುದಾಗಿ ಪ್ರತಿಕ್ರಿಯಿಸಿದರು.
'